ADVERTISEMENT

ಸರ್ಕಾರ ಅಸ್ಥಿರಗೊಳಿಸಲು ಸಿದ್ದರಾಮಯ್ಯ ಹುನ್ನಾರ: ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 18:46 IST
Last Updated 19 ಜನವರಿ 2019, 18:46 IST
   

ಮಂಗಳೂರು: ಸುಮ್ಮನೆ ಡೊಂಬರಾಟ ಮಾಡಿ ರಾಜಕೀಯ ಹಿತಾಸಕ್ತಿ ಬಲಿಕೊಡಬೇಡಿ. ರಾಜ್ಯದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಬಿಡಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಶಾಸಕರು ರಾಜೀನಾಮೆ ನೀಡಲಿ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂಬಾಲಕರನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಒಂದೆಡೆಯಿಂದ ಸಮಾಧಾನ ಮಾಡುವ ನಾಟಕ, ಮತ್ತೊಂದೆಡೆ ಒಳಗಿಂದೊಳಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ರಾಜಕಾರಣವನ್ನು ಹೇಸಿಗೆಯ ತಾಣವಾಗಿ ಪರಿವರ್ತನೆ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನನೆಗುದಿಗೆ ಬಿದ್ದಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿದರು.

ADVERTISEMENT

ಹಾಳು ರಾಜಕೀಯದ ಮಧ್ಯೆ ಜನರಿಗೆ ಆಗುತ್ತಿರುವ ಅನ್ಯಾಯ ಯಾರಿಗೂ ಕಾಣುತ್ತಿಲ್ಲ. ಕಾಂಗ್ರೆಸ್ ರಾಜ್ಯದ ರಾಜಕಾರಣವನ್ನು ನಗೆಪಾಟಲನ್ನಾಗಿ ಮಾಡಿದೆ. ಏಡಿಗಳನ್ನು ತಟ್ಟೆಯಲ್ಲಿ ಹಾಕಿದರೆ ಪರಸ್ಪರ ಕೈ-ಕಾಲು ಎಳೆಯುವ ರೀತಿಯಲ್ಲಿ ಕಾಂಗ್ರೆಸ್​ ಕಚ್ಚಾಟವಿದೆ ಎಂದು ತಿಳಿಸಿದರು.

ಜನರಿಗೆ ಆಗುತ್ತಿರುವ ಅನ್ಯಾಯವನ್ನು ನೋಡಲು ಆಗುತ್ತಿಲ್ಲ, ನಿಮಗೆ ಅಧಿಕಾರ ನಡೆಸಲು ಸಾಧ್ಯವಾಗದಿದ್ದಾರೆ ಬಿಟ್ಟುಬಿಡಿ, ಕಾಂಗ್ರೆಸ್ ಜೊತೆ ಇರಲು ಸಾಧ್ಯವಾಗದಿದ್ದರೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.

ನಮ್ಮ ಶಾಸಕರೆಲ್ಲ ಒಟ್ಟಾಗಿದ್ದಾರೆ: ಸಚಿವ ಖಾದರ್ ಕಾಂಗ್ರೆಸ್ ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಬಿಜೆಪಿ ಗೇಮ್ ಪ್ಲಾನ್‌ಗೆ ಕಾಂಗ್ರೆಸ್ ಲಾಜಿಕ್ ತೋರಿಸ್ತಾ ಇದೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಸಮಸ್ಯೆ ಏನೂ ಇಲ್ಲ. ನಮ್ಮ ಪಕ್ಷದ ಶಾಸಕರೆಲ್ಲಾ ಒಗ್ಗಟ್ಟಾಗಿ ಇದ್ದಾರೆ. ಆದರೆ ಬಿಜೆಪಿ ಶಾಸಕರು ಕ್ಷೇತ್ರ ಬಿಟ್ಟು ದೆಹಲಿಯಲ್ಲಿದ್ದಾರೆ. ಹೀಗಾಗಿ ಒಂದು ತಾರ್ಕಿಕ ಅಂತ್ಯಕ್ಕಾಗಿ ಕಾಂಗ್ರೆಸ್ ಕೂಡಾ ಲಾಜಿಕ್ ನಡೆಸ್ತಾ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರಿಗೆ ನಷ್ಟವಾಗುತ್ತದೆ. ಬಂಗಾರಪ್ಪ ಬಿಜೆಪಿಗೆ ಹೋಗಿ ಪರಿಸ್ಥಿತಿ ಏನಾಯಿತು ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಹೀಗಾಗಿ ಮುಂಬೈನಲ್ಲಿ ಇರುವ ಕಾಂಗ್ರೆಸ್ ಶಾಸಕರು ಪಕ್ಷ ಬಿಡೋದಿಲ್ಲ ಎನ್ನುವ ವಿಶ್ವಾಸವನ್ನು ಖಾದರ್ ವ್ಯಕ್ತಪಡಿಸಿದ್ದಾರೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.