ಮಂಗಳೂರು: ‘ಜಾತ್ಯತೀತ ಪದವನ್ನು ಸಂವಿಧಾನದಿಂದ ತೆಗೆಯಲಾಗದು’ ಎಂದು ಅಲಹಾಬಾದ್ ಹೈಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್ ಅಭಿಪ್ರಾಯಪಟ್ಟರು.
ಸಮದರ್ಶಿ ವೇದಿಕೆ, ‘ಹೊಸತು’ ಪತ್ರಿಕೆ ಮತ್ತು ಎಂ.ಎಸ್ ಕೃಷ್ಣ ಸ್ಮಾರಕ ಟ್ರಸ್ಟ್ ಇಲ್ಲಿ ಭಾನುವಾರ ಆಯೋಜಿಸಿದ್ದ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಮತ್ತು ಸಾಂವಿಧಾನಿಕ ನೈತಿಕತೆಗಳ ಸಮತೋಲನ’ ಕುರಿತು ಮಾತನಾಡಿ, ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.
‘ಜಾತ್ಯತೀತ ಪರಿಕಲ್ಪನೆ ಭಾರತದ ಸಂವಿಧಾನದ ಒಂದು ಭಾಗ. ಬಹುಸಂಖ್ಯಾತರಿಂದ ಬೇಡಿಕೆ ಎಂಬ ಕಾರಣಕ್ಕೆ ತೆಗೆದುಹಾಕಲು ಸಾಧ್ಯವಿಲ್ಲ. ಎಲ್ಲವನ್ನೂ ನ್ಯಾಯಾಂಗದ ಹೆಗಲಿಗೆ ಹೊರಿಸಿ ಸುಮ್ಮನಿರುವ ಬದಲು ಜಾಗೃತ ಸಮಾಜ ಈ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಮಾಥುರ್ ಹೇಳಿದರು.
‘ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಯಾವ ಪ್ರಕ್ರಿಯೆಗಳಿಗೂ ಆಸ್ಪದ ನೀಡಬಾರದು. ಸಾಮಾಜಿಕ ಮತ್ತು ರಾಜಕೀಯ ಗುಂಪುಗಳು, ಸಣ್ಣ ಸಣ್ಣ ಕಾರ್ಯಕ್ರಮಗಳಲ್ಲಿ ಒಂದಾಗುವ ಜನಸಮುದಾಯ ಈ ಬಗ್ಗೆ ಯೋಚಿಸಿ, ಕಾರ್ಯತತ್ಪರರಾಗಬೇಕು’ ಎಂದರು.
‘ಸಾಮಾಜಿಕವಾಗಿ ಭಿನ್ನಮತ ಈಗ ದೇಶದಲ್ಲಿ ಉಚ್ಛ್ರಾಯ ಹಂತ ತಲುಪಿದೆ. ದಕ್ಷಿಣ ಭಾರತದಲ್ಲಿ ಅದರ ತೀವ್ರತೆ ಉತ್ತರ ಭಾರತದಷ್ಟು ಇಲ್ಲ’ ಎಂದು ಮೂಲತಃ ರಾಜಸ್ಥಾನದ ಮಾಥುರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.