ಮೂಡುಬಿದಿರೆ: ಪೊನ್ನೆಚ್ಚಾರು ಬಳಿ ಇರುವ ವಸತಿ ಸಮುಚ್ಚಯಗಳಿಂದ ಕೊಳಚೆ ನೀರನ್ನು ತೋಡಿಗೆ ಹರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಕೊಳಚೆ ನೀರಿನಿಂದ ಈ ಪರಿಸರದಲ್ಲಿ ದುರ್ವಾಸನೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಿದೆ. ಪುರಸಭೆಗೆ ಸೇರಿದ ಕೊಳವೆ ಬಾವಿ, ಸುತ್ತಮುತ್ತಲಿನ ಮನೆಗಳ ಮೂರು ತೆರೆದ ಬಾವಿಗಳ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.
ಪುರಸಭೆ ಕಚೇರಿ ಸಮೀಪ ಪೇಟೆಯ ಬಳಿಯೇ ಇರುವ ಪೊನ್ನೆಚ್ಚಾರಿ ಸೇತುವೆ ಬಳಿ ಐದು ವಸತಿ ಸಮುಚ್ಚಯಗಳಿದ್ದು, ಅದರಲ್ಲಿನ ಬಹುತೇಕ ಕಟ್ಟಡಗಳಿಂದ ಕೊಳಚೆ ನೀರನ್ನು ತೋಡಿಗೆ ಬಿಡಲಾಗುತ್ತಿದೆ ಎನ್ನಲಾಗಿದೆ.
ಒಂದು ವಸತಿ ಸಮುಚ್ಚಯದವರು ಕೊಳಚೆ ನೀರನ್ನು ಫಿಲ್ಟರ್ ಮಾಡಿ ತೋಡಿಗೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಈ ನೀರನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿಯನ್ನು ನೀಡುವಂತೆ ವಸತಿ ಸಮುಚ್ಚಯದವರಿಗೆ ತಿಳಿಸಿದ್ದೇನೆ. ವರದಿ ಬರುವವರೆಗೆ ತೋಡಿಗೆ ಕೊಳಚೆ ನೀರು ಬಿಡದಂತೆ ಸೂಚಿಸಲಾಗಿದೆ ಎಂದು ಪುರಸಬೆ ಆರೋಗ್ಯಾಧಿಕಾರಿ ಶಶಿರೇಖಾ ಮಾಧ್ಯಮಕ್ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.