ADVERTISEMENT

ಶಿರಾಡಿ ಘಾಟಿ: ಹೆದ್ದಾರಿ -ರೈಲು ಸಂಪರ್ಕ ಸಂಯೋಜಿತ ಡಿಪಿಆರ್

ಮುಖ್ಯ ಕಾರ್ಯದರ್ಶಿ ಜೊತೆ ಸಂಸದ ಕ್ಯಾ. ಚೌಟ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 4:19 IST
Last Updated 18 ಏಪ್ರಿಲ್ 2025, 4:19 IST
ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಮತ್ತು ರೈಲು ಮೂಲಸೌಕರ್ಯ ಅಭಿವೃದ್ಧಿಗೆ ಜಂಟಿ ಡಿಪಿಆರ್ ಸಿದ್ಧಪಡಿಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಬೆಂಗಳೂರಿನಲ್ಲಿ ಗುರುವಾರ ಮನವಿ ಸಲ್ಲಿಸಿದರು. ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್‌.ಮಂಜುಳಾ ಜೊತೆಯಲ್ಲಿದ್ದರು.
ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಮತ್ತು ರೈಲು ಮೂಲಸೌಕರ್ಯ ಅಭಿವೃದ್ಧಿಗೆ ಜಂಟಿ ಡಿಪಿಆರ್ ಸಿದ್ಧಪಡಿಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಬೆಂಗಳೂರಿನಲ್ಲಿ ಗುರುವಾರ ಮನವಿ ಸಲ್ಲಿಸಿದರು. ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕಿ ಎನ್‌.ಮಂಜುಳಾ ಜೊತೆಯಲ್ಲಿದ್ದರು.   

ಬೆಂಗಳೂರು: ಮಂಗಳೂರು– ಬೆಂಗಳೂರು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲು ಮಾರ್ಗಗಳನ್ನು ಅಭಿವೃದ್ದಿಪಡಿಸುವುದಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕ್ರಮ ಕೈಗೊಳ್ಳುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಗುರುವಾರ ಇಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳನ್ನು ಚುರುಕುಗೊಳಿಸುವುದಕ್ಕೆ ಸಂಬಂಧಿಸಿಯೂ ಅವರು ಚರ್ಚಿಸಿದರು. 

‘ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟಿಯಲ್ಲಿ ಈಗ ಇರುವ ರಸ್ತೆಗೆ ಹೆಚ್ಚುವರಿಯಾಗಿ ದ್ವಿಪಥ ನಿರ್ಮಾಣಕ್ಕೆ ಎನ್‌ಎಚ್‌ಎಐ ಡಿಪಿಆರ್ ಸಿದ್ಧಪಡಿಸುತ್ತಿದೆ. ಶಿರಾಡಿ ಘಾಟ್‌ನಲ್ಲಿ ಪ್ರತ್ಯೇಕ ರೈಲು ಮಾರ್ಗ ರಚಿಸಲು ರೈಲ್ವೆ ಇಲಾಖೆ ಕೂಡ ಡಿಪಿಆರ್‌ ಸಿದ್ಧಪಡಿಸಲು ಮುಂದಾಗಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಶಿರಾಡಿ ಸೂಕ್ಷ್ಮ ಪರಿಸರ ವಲಯದಲ್ಲಿದೆ. ಹೀಗಿರುವಾಗ ರಸ್ತೆ ಮತ್ತು ರೈಲು ಮಾರ್ಗಗಳ ಅಭಿವೃದ್ದಿಗೆ ಎರಡೂ ಇಲಾಖೆಗಳು ಸಮನ್ವಯ ಸಾಧಿಸಿ ಡಿಪಿಆರ್ ಸಿದ್ದಪಡಿಸಿದರೆ ಪರಿಸರದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಸಂಯೋಜಿತ ಯೋಜನೆ ರೂಪಿಸುವುದರಿಂದ ಇಲಾಖೆಗಳ ಅನುಮೋದನೆ ಪಡೆಯುವುದು ಸುಲಭವಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯುವುದಕ್ಕೂ ಅನುಕೂಲವಾಗಲಿದೆ’ ಎಂದು  ಸಂಸದರು  ಸಲಹೆ ನೀಡಿದರು.

ADVERTISEMENT

ಮಂಗಳೂರಿನ ಅಂತರರಾಷ್ಟ್ರೀಯ ಬಂದರು ಹಾಗೂ ಕರಾವಳಿಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಶಿರಾಡಿ ಘಾಟಿ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದು ಅತ್ಯವಶ್ಯಕ. ಅದೇ ರೀತಿ ಕರಾವಳಿ ಭಾಗಕ್ಕೆ ಹೆಚ್ಚಿನ ರೈಲು ಸಂಪರ್ಕವನ್ನು ಆರಂಭಿಸುವುದಕ್ಕೆ ಶಿರಾಡಿ ಘಾಟಿ ಭಾಗದಲ್ಲಿ ರೈಲ್ವೆ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ರೈಲು ಹಾಗೂ ಹೆದ್ದಾರಿಗಳು ಒಟ್ಟಿಗೆ ಅಭಿವೃದ್ದಿಯಾದರೆ ಮಂಗಳೂರಿನ ವಾಣಿಜ್ಯ ಚಟುವಟಿಕೆಗೂ ಹೆಚ್ಚಿನ ಉತ್ತೇಜನ ಸಿಗಲಿದೆ ಹಾಗೂ ಸರಕು ಸಾಗಾಟ ಮತ್ತಷ್ಟು ಸುಗಮವಾಗಲಿದೆ ಎಂದು ಅವರು ವಿವರಿಸಿದರು.

ಶಿರಾಡಿ ಘಾಟಿಯಲ್ಲಿ ರಸ್ತೆ ಮತ್ತು ರೈಲ್ವೇ ಅಭಿವೃದ್ದಿಗೆ ಸಂಯೋಜಿತ ಡಿಪಿಆರ್ ತಯಾರಿಸಿದರೆ  ಅನುಕೂಲ ಹೆಚ್ಚು. ಕೇಂದ್ರದ ಭೂಸಾರಿಗೆ ಸಚಿವರಾದ ನಿತಿನ್ ಗಡ್ಕರಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ನಾನು ಈಗಾಗಲೇ ಮಾತುಕತೆ ನಡೆಸಿದ್ದೇನೆ.  ಈ ಎರಡೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಒಂದಕ್ಕೊಂದು ಪೂರಕ ಡಿಪಿಆರ್ ತಯಾರಿಸುವುದಕ್ಕೆ ರಾಜ್ಯ ಸರ್ಕಾರದ ಕಡೆಯಿಂದಲೂ ಅಗತ್ಯ  ಸಹಕಾರ ಸಿಗಬೇಕು ಎಂದು ಕ್ಯಾ. ಚೌಟ ಕೋರಿದರು.

ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಹಾಗೂ ರೈಲ್ವೆ ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಸಂಬಂಧಪಟ್ಟ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಲು ಕ್ರಮವಹಿಸುತ್ತೇನೆ. ಕೇಂದ್ರ ಸರ್ಕಾರದ ಇಲಾಖೆಗಳ ಯೋಜನೆಗಳಿಗೂ ಸಕಲ ಬೆಂಬಲ ನೀಡುವುದಾಗಿ ಶಾಲಿನಿ ರಜನೀಶ್ ಭರವಸೆ ನೀಡಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ–ಕರ್ನಾಟಕ (ಕೆ–ರೈಡ್‌) ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಎನ್ ಅವರು ಜೊತೆಯಲ್ಲಿದ್ದರು.

ಶಿರಾಡಿ ಘಾಟಿ: ಹೆದ್ದಾರಿಯನ್ನು ಚತುಷ್ಪಥಗೊಳಿಸಲು ಎನ್‌ಎಚ್‌ಎಐ ಸಿದ್ಧತೆ ಘಾಟಿಯಲ್ಲಿ ರೈಲ್ವೆ ಹಳಿಯ ಬಲವರ್ಧನೆಗೆ ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸುತ್ತಿರುವ ರೈಲ್ವೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.