ADVERTISEMENT

ಸೋಮವಾರ 8 ಗಂಟೆಗೆ ಸಿದ್ಧಾರ್ಥ ನಾಪತ್ತೆ: ರಹಸ್ಯವಾಗಿಯೇ ಶೋಧ ಆರಂಭಿಸಿದ್ದ ಪೊಲೀಸರು

ಉಳ್ಳಾಲ: ತಡರಾತ್ರಿಯವರೆಗೂ ಗುಟ್ಟು ಬಿಟ್ಟು ಕೊಡದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 4:26 IST
Last Updated 31 ಜುಲೈ 2019, 4:26 IST
   

ಉಳ್ಳಾಲ: ಉದ್ಯಮಿ ಸಿದ್ದಾರ್ಥ ಹೆಗ್ಡೆ ನಾಪತ್ತೆಯಾಗಿರುವ ಕುರಿತು ಸೋಮವಾರರಾತ್ರಿ 8 ಗಂಟೆಯ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಆದರೆ, ಗುಟ್ಟು ಬಿಟ್ಟುಕೊಡದ ಪೊಲೀಸರು ತಡರಾತ್ರಿಯವರೆಗೂ ರಹಸ್ಯವಾಗಿಯೇ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸೇತುವೆ ಮೇಲೆ ಮಾತನಾಡುತ್ತಾ ಸಾಗಿದ್ದ ಸಿದ್ದಾರ್ಥ ಅವರ ಮೊಬೈಲ್‌ ಸೋಮವಾರ ಸಂಜೆ 7.55ರ ಹೊತ್ತಿಗೆ ಸಂಪರ್ಕ ಕಳೆದುಕೊಂಡಿತ್ತು. ಆ ಬಳಿಕ ಚಾಲಕ ಬಸವರಾಜ್‌ ಪಾಟೀಲ್‌ ಮನೆ ಮಂದಿಗೆ ಮಾಹಿತಿ ನೀಡಿದ್ದರು. ಬೆಂಗಳೂರಿನಿಂದಲೇ ಪೊಲೀಸರನ್ನು ಸಂಪರ್ಕಿಸಿದ್ದ ಕುಟುಂಬದವರು ಉದ್ಯಮಿಯ ಪತ್ತೆಗೆ ಮನವಿ ಮಾಡಿದ್ದರು.

ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ನಾಪತ್ತೆಯಾಗಿರುವ ವ್ಯಕ್ತಿಯ ಕುರಿತು ಮಾಹಿತಿ ಬಹಿರಂಗಪಡಿಸಿರಲಿಲ್ಲ. ‘ಅತಿ ಗಣ್ಯ ವ್ಯಕ್ತಿ’ ಎಂದಷ್ಟೇ ಹೇಳುತ್ತಿದ್ದರು. ಹಿರಿಯ ಅಧಿಕಾರಿಗಳು ಸೇರಿದಂತೆ ಯಾರೊಬ್ಬರೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

ADVERTISEMENT

ತಡರಾತ್ರಿ 12 ಗಂಟೆಯ ವೇಳೆ ಪೊಲೀಸ್ ಇಲಾಖೆಯ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಕೋದಂಡರಾಮ, ಸಿಸಿಬಿ ತಂಡ, ವಿಶೇಷ ಪೊಲೀಸ್ ತಂಡ, ಶ್ವಾನದಳ, ಕಂಕನಾಡಿ, ಉಳ್ಳಾಲ ಪೊಲೀಸರು ಸೇರಿಕೊಂಡು ಚಾಲಕ ಬಸವರಾಜ್‌ ಅವರನ್ನು ಜತೆಗಿಟ್ಟುಕೊಂಡು ನೇತ್ರಾವತಿ ಸೇತುವೆಯಡಿ ಹುಡುಕಾಟ ಆರಂಭಿಸಿದ್ದರು.

ಇದೇ ವೇಳೆ ವಾಹನ ಸವಾರರು, ಕುತೂಹಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರು ಅವರನ್ನು ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಚದುರಿಸಿದ್ದಾರೆ. ಕೆಲ ಪೊಲೀಸ್ ವಾಹನಗಳು ಸೇತುವೆಯಲ್ಲಿದ್ದರೆ, ಮತ್ತೆ ನಗರದ ಲಾಡ್ಜ್‌ಗಳ ತಪಾಸಣೆಗೆಂದು ತೆರಳಿತ್ತು.

ತನಿಖೆಗೆ ನಾಲ್ಕು ತಂಡಗಳ ರಚನೆ

ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.

‘ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜ್ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಲಾಯಿತು. ಕೆಲವು ಸೂಕ್ಷ್ಮ ಮಾಹಿತಿಗಳು ಲಭ್ಯವಾಗಿದ್ದು ಆ ನಿಟ್ಟಿನಲ್ಲೂ ತನಿಖೆ ಪ್ರಗತಿಯಲ್ಲಿದೆ. ಇದಕ್ಕಾಗಿದೆ ಸಿಸಿಬಿ ಸೇರಿದಂತೆ ಒಟ್ಟು ನಾಲ್ಕು ತಂಡಗಳನ್ನು ರಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಘಟನೆ ನಡೆದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದೆವು. ಸಿದ್ಧಾರ್ಥ ಅವರ ಮೊಬೈಲ್‌ ಕರೆಗಳ ವಿವರ ಸೇರಿದಂತೆ ಕೆಲವೊಂದು ತಾಂತ್ರಿಕ ಮಾಹಿತಿಯ ಆಧಾರದಲ್ಲೂ ತನಿಖೆ ಮುಂದವರಿದಿದೆ ಎಂದು ಹೇಳಿದರು.

ರಾತ್ರಿ ಶೋಧ ಸ್ಥಗಿತ: ಸಮುದ್ರದಲ್ಲಿ ಅಲೆಗಳ ಉಬ್ಬರ ಜಾಸ್ತಿಯಾಗಿದ್ದರಿಂದಮತ್ತು ಅಳಿವೆ ಬಾಗಿಲಿನಲ್ಲಿ ಕಾರ್ಯಾಚರಣೆಗೆ ತೊಡಕು ಇದಿದ್ದರಿಂದ ರಾತ್ರಿ ಶೋಧ ಕಾರ್ಯಾಚರಣೆಗೆ ತುಸು ತೊಡಕಾಯಿತು. ರಾತ್ರಿ ಕೋಸ್ಟ್‌ ಗಾರ್ಡ್‌ ನೌಕೆಗಳ ನೆರವಿನಲ್ಲಿ ಸೀಮಿತವಾಗಿ ಕಾರ್ಯಾಚರಣೆ ನಡೆಸಿದ್ದೆವು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ವಾಹನ ಸಂಚಾರಕ್ಕೆ ಅಡ್ಡಿ

ಸಿದ್ದಾರ್ಥ ಪತ್ತೆಗೆ ಜಿಲ್ಲಾಡಳಿತ ಆದೇಶದಂತೆ ವಿವಿಧ ತಂಡಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ತೊಕ್ಕೊಟ್ಟು ಕಲ್ಲಾಪು ಭಾಗದಲ್ಲಿ ವಾಹನ ಸಂಚಾರಕ್ಕೆ
ಅಡ್ಡಿಯಾಗಿರುವುದನ್ನು ಪೊಲೀಸರು ನಿಯಂತ್ರಿಸುತ್ತಿರುವುದು.

ಗಣ್ಯರು ಸೇರಿದಂತೆ ಹಿತೈಷಿಗಳು ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿಯ ಹಳೆ ಸೇತುವೆಯಲ್ಲಿ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಸಂಚಾರ ವಿಭಾಗದ ಪೊಲೀಸರು, ಸೇತುವೆಯ ಒಂದೇ ಪಥದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಒಂದೇ ಸೇತುವೆಯಲ್ಲಿ ವಾಹನಗಳ ಓಡಾಟದಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಬಳಿಕ ವಾಹನ ದಟ್ಟಣೆಯನ್ನು ಗಮನಿಸಿ ಎರಡು ಭಾಗಗಳಲ್ಲಿ ವಾಹನ ತೆರಳಲು ಅವಕಾಶ ಕಲ್ಪಿಸಿದರೂ, ಕೆಲ ವಾಹನ ಸವಾರರು ರಸ್ತೆಯಲ್ಲೇ ನಿಲ್ಲಿಸಿ, ಕಾರ್ಯಾಚರಣೆ ವೀಕ್ಷಿಸಲು ಆರಂಭಿಸಿದ್ದರಿಂದ ಮತ್ತೆ ಸಂಚಾರಕ್ಕೆ ಅಡ್ಡಿ ಉಟಾಗುತ್ತಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಚಾರ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಬಹಳ ಶ್ರಮಪಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.