
ಮಂಗಳೂರು: ‘ಮಹಿಳೆಯರೆಂದೂ ಸೋಲುವುದಿಲ್ಲ, ಸೋತ ಇತಿಹಾಸ ಇಲ್ಲವೇ ಇಲ್ಲ’, ‘ಕೊಂದವರು ಯಾರೆಂದು ಗೊತ್ತಾಗಬೇಕು, ನೊಂದವರಿಗೆ ನ್ಯಾಯ ಸಿಗಲೇಬೇಕು’, ‘ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳ ಸಮಗ್ರ ತನಿಖೆಯನ್ನು ಎಸ್‌ಐಟಿ ನಡೆಸಲಿ’, ‘ಉಗ್ರಪ್ಪ ಸಮಿತಿ ವರದಿ ಜಾರಿಯಾಗಲಿ’... ಇಂತಹ ಹತ್ತಾರು ಘೋಷಣೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೆಲದಲ್ಲಿ ಮಾರ್ದನಿಸಿದವು.
‘ಕೊಂದವರು ಯಾರು?’ ಆಂದೋಲನದ ನೇತೃತ್ವದಲ್ಲಿ ಮಂಗಳವಾರ ಬೆಳ್ತಂಗಡಿಯಲ್ಲಿ ನಡೆದ ಮಹಿಳಾ ನ್ಯಾಯ ಸಮಾವೇಶ ಹಾಗೂ ಜಾಥಾದಲ್ಲಿ ಭಾಗಿಯಾಗಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಹೋರಾಟಗಾರ್ತಿಯರ ಒಕ್ಕೊರಲಿನ ದನಿಯಲ್ಲಿ ಈ ಘೋಷಣೆಗಳು ಮೊಳಗಿದವು.
ಮೆರವಣಿಗೆಗೂ ಮುನ್ನ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಫಲಕ ಪ್ರದರ್ಶಿಸುತ್ತ ಒಂದು ಕಿ.ಮೀ.ಯಷ್ಟು ದೂರ ಮೌನವಾಗಿ ಕಾರ್ಯಕರ್ತೆಯರು ಹೆಜ್ಜೆಹಾಕಿದರು. ಮಿನಿ ವಿಧಾನಸೌಧದ ಆವರಣದಲ್ಲಿ ಒಗ್ಗೂಡಿ ಹಾಡು, ಕವಿತೆ, ಕಿರು ನಾಟಕ, ಸಮೂಹ ಗೀತೆ ಮೂಲಕ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಸೇರಿದ್ದ ಮಹಿಳೆಯರ ಪರವಾಗಿ ಹೋರಾಟಗಾರ್ತಿ ಗೌರಮ್ಮ ಹಕ್ಕೊತ್ತಾಯ ಮಂಡಿಸಿದರು.
ಹಕ್ಕೊತ್ತಾಯಗಳು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಯಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಬೇಕು. ದೂರು ದಾಖಲಿಸಲು ಬಂದ ಸಂತ್ರಸ್ತರೆದುರು ಎಸ್‌ಐಟಿ ಅಧಿಕಾರಿಗಳು ದುರ್ವರ್ತನೆ ತೋರಿದ್ದಾರೆಂಬ ಆಪಾದನೆಗಳಿದ್ದು, ಅಂತಹ ಸಂದರ್ಭ ಬರದಂತೆ ಎಚ್ಚರ ವಹಿಸಬೇಕು.
ಕಳೆದ ದಶಕದಲ್ಲಿ ಇಲ್ಲಿ ಘಟಿಸಿರುವ ಎಲ್ಲ ನಾಪತ್ತೆ, ಅಸಹಜ ಸಾವು, ಅತ್ಯಾಚಾರ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಸಾಕ್ಷಿ ಸಂರಕ್ಷಣಾ ಕಾಯ್ದೆ ಪ್ರಕಾರ ದೂರುದಾರರು, ಸಾಕ್ಷಿದಾರರ ಸುರಕ್ಷತೆ, ಗೋಪ್ಯತೆ ಕಾಪಾಡುವ ಸಂಬಂಧ ಎಸ್‌ಐಟಿ, ಸರ್ಕಾರ ಹಾಗೂ ಮಹಿಳಾ ಆಯೋಗ ಪ್ರಕಟಣೆ ಹೊರಡಿಸಬೇಕು.
ಸೌಜನ್ಯಾ ಪ್ರಕರಣದಲ್ಲಿ ಅಧಿಕಾರಿಗಳು, ತನಿಖೆ ನಡೆಸಿದವರು ಕರ್ತವ್ಯಲೋಪ ಎಸಗಿದ್ದನ್ನು ಅಪರಾಧವೆಂದು ಪರಿಗಣಿಸಿ, ಅವರ ವಿರುದ್ಧ ಕ್ರಮಜರುಗಿಸಬೇಕು. ಅನ್ಯಾಯ ಪ್ರತಿಭಟಿಸುವ ಮಹಿಳೆಯರನ್ನು ಜಾಲತಾಣಗಳಲ್ಲಿ ಅಶ್ಲೀಲವಾಗಿ ಪ್ರತಿಬಿಂಬಿಸುವವರ ಮೇಲೆ ಕಠಿಣ ಜರುಗಿಸಲು ಅನುವಾಗುವಂತೆ ಕಾಯ್ದೆಗೆ ತಿದ್ದುಪಡಿ ಆಗಬೇಕು ಎಂದು ಪ್ರಮುಖವಾಗಿ ಒತ್ತಾಯಿಸಲಾಗಿದೆ.
ವಿವಿಧ ಸಂಘಟನೆಗಳ ಪ್ರಮುಖರಾದ ಅನಸೂಯಮ್ಮ, ಬಿ.ಎಂ. ರೋಹಿಣಿ, ಸುನಂದಮ್ಮ, ಸಬಿಹಾ ಭೂಮಿ ಗೌಡ, ಜ್ಯೋತಿ ಎ, ಶಶಿಕಲಾ, ಪ್ರಸನ್ನ ರವಿ, ಗೀತಾ ಸುರತ್ಕಲ್, ಸೌಜನ್ಯಾ ತಾಯಿ ಕುಸುಮಾವತಿ ಮೊದಲಾದವರು ಸಮಾವೇಶದಲ್ಲಿ ಇದ್ದರು. ದು.ಸರಸ್ವತಿ ಕಿರು ನಾಟಕ ಪ್ರದರ್ಶಿಸಿದರು.
ಕೊಂದವರು ಯಾರೆಂದು ಪ್ರತಿಯೊಬ್ಬರಿಗೂ ಗೊತ್ತಾಗುತ್ತಿದೆ. ಈ ಸಂಗತಿ ನಮಗೆ ಸರ್ಕಾರದಿಂದ ತಿಳಿಯಬೇಕಿದೆ. 12 ವರ್ಷಗಳಲ್ಲಿ 452 ಸಾವು ಸಂಭವಿಸಿದ್ದು ಇದಕ್ಕೆ ಪವಿತ್ರ ಸಾವು ಎಂದು ಹಣೆಪಟ್ಟಿ ಕೊಡುವ ಷಡ್ಯಂತ್ರ ಬೇಡ.ವಿದ್ಯಾ ನಾಯಕ್ ಹೋರಾಟಗಾರ್ತಿ
‘ನೀವು ಉತ್ತರದಾಯಿಗಳಲ್ಲವೇ?’
‘ಮಹಿಳೆಯರನ್ನು ಕೊಂದವರು ಯಾರೆಂದು ನಾವ್ಯಾಕೆ ಇಲ್ಲಿ ಬಂದು ಪ್ರಶ್ನಿಸಬಾರದು? ನಮ್ಮ ಹೋರಾಟದ ಮೇಲೆ ಆಪಾದನೆ ಹೊರಿಸುವವರಿಗೆ ಆತ್ಮಸಾಕ್ಷಿಯಲ್ಲಿ ಹುಳುಕಿರಬೇಕು ನೀವಲ್ಲವೇ ಕೊಂದವರು ಅಥವಾ ಕೊಂದವರನ್ನು ಬೆಂಬಲಿಸಿದವರು? ಕರುಳ ಕುಡಿ ಕಳೆದುಕೊಂಡವರಿಗೆ ನ್ಯಾಯ ಖಾತ್ರಿ ಪಡಿಸುವವರು ಯಾರು?’ ಎಂದು ಕೊಂದವರು ಯಾರು ಆಂದೋಲನದ ಮಲ್ಲಿಗೆ ಪ್ರಶ್ನಿಸಿದರು. ‘ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಗೃಹ ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಯಾರನ್ನು ಬೆಂಬಲಿಸಬೇಕಿತ್ತು ಯಾರನ್ನು ಬೆಂಬಲಿಸುತ್ತಿದ್ದೀರಿ? ಈ ನೆಲದ ಹೆಣ್ಣು ಮಕ್ಕಳಿಗೆ ನೀವು ಉತ್ತರದಾಯಿಗಳಲ್ಲವೇ?’ ಎಂದು ಪ್ರಶ್ನಿಸಿದರು. ಬೆಳ್ತಂಗಡಿ ಅಷ್ಟೇ ಅಲ್ಲ. ಹೆಣ್ಣಿಗೆ ಎಲ್ಲೇ ಅನ್ಯಾಯವಾದರೂ ದನಿ ಎತ್ತುತ್ತೇವೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.