
ಪುನೀತ್ ಪೂಜಾರಿ
ಉಳ್ಳಾಲ (ದಕ್ಷಿಣ ಕನ್ನಡ): ಒಮಾನ್ ದೇಶದಲ್ಲಿ ಉದ್ಯೋಗದಲ್ಲಿದ್ದ ತಾಲ್ಲೂಕಿನ ಸೋಮೇಶ್ವರ ಯುವಕ ಪ್ರೇಮ ವೈಫಲ್ಯದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೊ ಪ್ರಸಾರ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮೇಶ್ವರದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ. ಒಂದೂವರೆ ವರ್ಷಗಳಿಂದ ಒಮಾನ್ ದೇಶದಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಊರಿಗೆ ಮರಳಿದ್ದ ಅವರು ರಜೆ ಮುಗಿಸಿ ಈಚೆಗಷ್ಟೇ ಒಮಾನ್‌ಗೆ ತೆರಳಿದ್ದರು.
ಪುನೀತ್ ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯುವತಿ ಫೋನ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಇದರಿಂದ ಪುನೀತ್ ಮನನೊಂದಿದ್ದರು ಎನ್ನಲಾಗಿದೆ. ಈ ನೋವನ್ನು ಗೆಳೆಯರ ಬಳಿಯೂ ಹಂಚಿಕೊಂಡಿದ್ದರು.
ಪ್ರೀತಿಸಿದ ಹುಡುಗಿ ದೂರವಾದ ನೋವಿನಲ್ಲಿ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೊ ಪ್ರಸಾರ ಮಾಡುತ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕೊಲ್ಲಿ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಎದುರಾಗಿರುವ ಉದ್ವಿಗ್ನ ಸ್ಥಿತಿಯ ಕಾರಣದಿಂದಾಗಿ ಒಮಾನ್ ದೇಶದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚು ಸಮಯ ತಗಲುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪುನೀತ್ ಅವರಿಗೆ ತಂದೆ-ತಾಯಿ, ಸಹೋದರ ಹಾಗೂ ಸಹೋದರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.