
ಮಂಗಳೂರು: ಇಲ್ಲಿನ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ. ರಾಘವೇಂದ್ರ ರಾವ್ (88) ಚೆನ್ನೈನಲ್ಲಿ ಮಂಗಳವಾರ ನಿಧನರಾದರು.
ಉಡುಪಿ ಜಿಲ್ಲೆಯ ಅಡ್ಕ ಗ್ರಾಮದಲ್ಲಿ 1937ರ ಅ. 16ರಂದು ಜನಿಸಿದ್ದ ರಾಘವೇಂದ್ರ ರಾವ್ ಅವರು ಶಿಕ್ಷಣ, ಆರೋಗ್ಯ, ಆತಿಥ್ಯ, ಹಣಕಾಸು ಮತ್ತು ಸಮಾಜಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ವಾಣಿಜ್ಯ ಶಿಕ್ಷಣ ಮತ್ತು ಚಾರ್ಟರ್ಡ್ ಅಕೌಂಟೆನ್ಸಿ ಪೂರ್ಣಗೊಳಿಸಿದ ನಂತರ ಅವರು ಮಂಗಳೂರಿನಲ್ಲಿ ಸ್ವತಂತ್ರ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯನ್ನು ಸ್ಥಾಪಿಸಿದ್ದರು.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 1988ರಲ್ಲಿ ತಮ್ಮ ತಂದೆಯ ಸ್ಮರಣಾರ್ಥ ಎ. ಶಾಮರಾವ್ ಫೌಂಡೇಶನ್ ಸ್ಥಾಪಿಸಿ ಅದರಡಿ ಶ್ರೀನಿವಾಸ ಶಿಕ್ಷಣ ಸಂಸ್ಥೆಗಳ ಸಮೂಹವನ್ನು ಕಟ್ಟಿ ಬೆಳೆಸಿದ್ದರು.
ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್, ಫಾರ್ಮಸಿ, ನಿರ್ವಹಣಾ ಅಧ್ಯಯನ, ಹೋಟೆಲ್ ಮ್ಯಾನೇಜ್ಮೆಂಟ್, ಅಲೈಡ್ ಹೆಲ್ತ್ ಸೈನ್ಸ್ ಸೇರಿದಂತೆ ವಿವಿಧ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಆರಂಭಿಸಿದ್ದರು. ಬಳಿಕ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಮಾರ್ಗದರ್ಶನ ಮಾಡಿದ್ದರು. ಶ್ರೀನಿವಾಸ ಆಸ್ಪತ್ರೆ, ಮಂಗಳೂರಿನಲ್ಲಿ ತ್ರಿ-ಸ್ಟಾರ್ ಹೋಟೆಲ್ ಆಗಿರುವ ಹೋಟೆಲ್ ಶ್ರೀನಿವಾಸ್, ಹೋಟೆಲ್ ಕೃಷ್ಣ ಭವನ, ಹೋಟೆಲ್ ಶ್ರೀನಿವಾಸ್ ಸಾಫ್ರಾನ್ ಸ್ಥಾಪಿಸಿದ್ದರು.
ಅವರಿಗೆ ಚಿತ್ರಭಾರತೀ ಪ್ರಶಸ್ತಿ, ಎಸ್ಐಆರ್ಸಿ ಡೈಮಂಡ್ ಜೂಬಿಲಿ ಪ್ರಶಸ್ತಿ, ಭಾರತ ನಿರ್ಮಾಣ ಪ್ರಶಸ್ತಿಗಳು ಸಂದಿವೆ.
ಅವರಿಗೆ ಪುತ್ರಿ ಪದ್ಮಿನಿ ರಾವ್, ಪುತ್ರ ಎ. ಶ್ರೀನಿವಾಸ್ ರಾವ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.