
ಸಮಾಲೋಚನಾ ಸಭೆಯಲ್ಲಿ ಶಾಂತಾರಾಮ ಸಿದ್ದಿ ಮಾತನಾಡಿದರು
ಪ್ರಜಾವಾಣಿ ಚಿತ್ರ
ಮಂಗಳೂರು: ‘ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವ ಕರ್ನಾಟಕವು ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಂತೆಯೇ ಪರಿಶಿಷ್ಟ ಪಂಗಡದ ಒಳ ಮೀಸಲಾತಿ ವರ್ಗೀಕರಣದಲ್ಲೀ ಗಟ್ಟಿ ಹೆಜ್ಜೆ ಇಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಒತ್ತಾಯಿಸಿದರು.
‘ಪರಿಶಿಷ್ಟ ಪಂಗಡಗಳ ಮೀಸಲಾತಿ ಸಾಧ್ಯತೆ’ ಕುರಿತು ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಘಟಕವು ಇಲ್ಲಿ ಬುಡಕಟ್ಟು ಸಮುದಾಯಗಳ ನಾಯಕರ ಜೊತೆ ಭಾನುವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಮೀಸಲಾತಿಯ ಪರಿಣಾಮಕಾರಿ ಜಾರಿ ಕುರಿತು ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಂವಿಧಾನ ಪೀಠ 2024ರ ಆ.1 ರಂದು ನೀಡಿದ್ದ ತೀರ್ಪು ಐತಿಹಾಸಿಕ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ವರ್ಗೀಕರಣದ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ಆ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಪರಿಶಿಷ್ಟ ಜಾತಿಗಳ ಜೊತೆಗೆ, ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸಿಯೇ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತ್ತು. ಆದರೆ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನಿಗದಿಗೆ ಮಾತ್ರ ಆದ್ಯತೆ ನೀಡಿ, ಪರಿಶಿಷ್ಟ ಪಂಗಡಗಳ ಒಳ ಮೀಸಲಾತಿಯನ್ನು ಕಡೆಗಣಿಸಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 2022ರಲ್ಲಿ ಅವರ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿತು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನ್ಯಾ. ನಾಗಮೋಹನ ದಾಸ್ ಆಯೋಗದ ಶಿಫಾರಸಿ ಪ್ರಕಾರ ಪರಿಶಿಷ್ಟ ಜಾತಿಗಳ ನಡುವೆ ವರ್ಗೀಕರಣದ ಸೂತ್ರ ರೂಪಿಸುವಾಗ ಪರಿಶಿಷ್ಟ ಪಂಗಡಗಳನ್ನೂ ಪರಿಗಣಿಸಬೇಕಿತ್ತು’ ಎಂದರು.
‘ವಾಲ್ಮೀಕಿ ಸಮುದಾಯದ ಸುದೀರ್ಘ ಹೋರಾಟದಿಂದ ಪರಿಶಿಷ್ಟ ಪಂಗಡದ ಮೀಸಲಾತಿಯ ಜೊತೆಗೆ ಪರಿಶಿಷ್ಟ ಜಾತಿಯ ಮೀಸಲಾತಿಯೂ ಜನಸಂಖ್ಯೆಗೆ ಅನುಗುಣವಾಗಿ ಪರಿಷ್ಕರಣೆಗೆ ಒಳಪಟ್ಟಿತು. ಈಗ ಮಾದಿಗ ಸಮಾಜದ ಮೂರು ದಶಕಗಳ ಹೋರಾಟದಿಂದ ಜಾರಿಯಾಗುತ್ತಿರುವ ಒಳ ಮೀಸಲಾತಿ ಪರಿಶಿಷ್ಟ ಪಂಗಡಗಳ ದನಿಯಿಲ್ಲದ ತಬ್ಬಲಿ ಜಾತಿಗಳಿಗೆ ನ್ಯಾಯೋಚಿತ ಹಕ್ಕು ದಕ್ಕಿಸಲು ನೆರವಾಗಬೇಕಿದೆ’ ಎಂದರು.
‘ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಪಂಗಡದ 50 ಜಾತಿಗಳಿದ್ದು, ಅವರ ಜನಸಂಖ್ಯೆ 42.48 ಲಕ್ಷ. ಇದರಲ್ಲಿ ವಾಲ್ಮೀಕಿ ಸಮುದಾಯದವರದು 32.96 ಲಕ್ಷ. ಉಳಿದ 49 ಜಾತಿಗಳದ್ದು 9.52 ಲಕ್ಷ ಜನಸಂಖ್ಯೆಯಿದೆ. ಆದಿಯನ್, ಬಾವ್ಚಾ, ಡುಂಗ್ರಿಗರಾಸಿಯಾ, ಚೆಂಚು, ಹಳಪಟ್ಟಿ, ಗೌಡ್ಲು, ಕಣಿಯನ್, ಮಲೆಕುಡಿಯ, ಮಲೇರು, ಪಣಿಯನ್ ಮೊದಲಾದ ಜಾತಿಗಳ ಜನಸಂಖ್ಯೆ ಹತ್ತು ಸಾವಿರವೂ ಇಲ್ಲ. ಕೆಲವು ಜಾತಿಗಳ ಜನಸಂಖ್ಯೆ ಮೂರಂಕಿ ದಾಟದು. ಕೊರಗ, ಜೇನುಕುರುಬ ಜಾತಿಗಳನ್ನು ಅದರ ಸೂಕ್ಷ್ಮತೆಯ ಕಾರಣಕ್ಕೆ ನೈಜ ದುರ್ಬಲ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗುತ್ತಿದೆ. ಯರವ, ಸೋಲಿಗ, ಸಿದ್ಧಿ, ಮೇದಾರ, ಮರಾಟಿ ನಾಯ್ಕ, ಹಸಳ, ಹರಿಣಶಿಕಾರಿ ಜಾತಿಗಳಿಗೆ ಸಂಖ್ಯಾಬಲ ಇದ್ದರೂ ಅವರ ಸಂಖ್ಯೆ 50 ಸಾವಿರದೊಳಗೆ ಇದೆ. ವಾಲ್ಮೀಕಿ ಸಮುದಾಯ ಉಳಿದ ತಬ್ಬಲಿ ಜಾತಿಗಳನ್ನು ತಾಯ್ತನದಿಂದ ಪೊರೆಯಬೇಕಿದೆ. ಪರಿಶಿಷ್ಟ ಪಂಗಡಗಳ ನಡುವೆ ಒಳಮೀಸಲಾತಿಯ ಹಂಚಿಕೆ ಸಾಧ್ಯವಾದರೆ ಸಣ್ಣ, ಅತಿ ಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ’ ಎಂದು ವಿವರಿಸಿದರು.
ರಾಜ್ಯ ಲ್ಯಾಂಪ್ಸ್ ಮಹಾಮಂಡಲ ಅಧ್ಯಕ್ಷ ಬಿ.ಕಾವೇರ, ನಿವೃತ್ತ ಐಎಫ್‌ಎಸ್ ಅಧಿಕಾರಿ ಕೆ.ಸುಂದರ ನಾಯ್ಕ್, ಜಿಲ್ಲಾ ಪಂಚಾಯಿತಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ್, ಹೈಕೋರ್ಟ್ ವಕೀಲ ಪ್ರವೀಣ್‌ಕುಮಾರ್ ಮುಗುಳಿ, ಆದಿವಾಸಿ ಮುಖಂಡ ಮುತ್ತಪ್ಪ, ಅರಣ್ಯ ಹಕ್ಕು ಮೇಲುಸ್ತುವಾರಿ ಸಮಿತಿ ಸದಸ್ಯ ಮುದ್ದಯ್ಯ ಮತ್ತಿತರರು ಭಾಗವಹಿಸಿದ್ದರು.
ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪರಿಶಿಷ್ಟ ಪಂಗಡದ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಮಾಹಿತಿ ನೀಡಿದರು.
‘ಪರಿಶಿಷ್ಟರ ಜಾತಿಗಳ ವರ್ಗೀಕರಣದ ಸಲುವಾಗಿ ನಿಖರ ದತ್ತಾಂಶಗಳನ್ನು ಸಂಗ್ರಹ ಮಾಡಬೇಕು. ಹಿಂದುಳಿ ದಿರುವಿಕೆಯ ಅಧ್ಯಯನ ನಡೆಸಬೇಕು. ಸಮಾನರು - ಅಸಮಾನರು ಒಂದೇ ಗುಂಪಿನಲ್ಲಿ ಇರದಂತೆ ಎಚ್ಚರ ವಹಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿ ನಲ್ಲಿ ಸ್ಪಷ್ಪಡಿಸಿದೆ. ಈ ಅಂಶಗಳ ಆಧಾರದಲ್ಲಿ ಅಧ್ಯಯನ ನಡೆಸಿ ವರ್ಗೀಕರಣದ ಸೂತ್ರಗಳನ್ನು ಶಿಫಾ ರಸು ಮಾಡಲು ಸರ್ಕಾರ ಪ್ರತ್ಯೇಕ ಆಯೋಗ ರಚಿಸಬೇಕು’ ಎಂದು ಶಾಂತಾರಾಮ ಸಿದ್ದಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.