ADVERTISEMENT

10 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 13:50 IST
Last Updated 8 ಮಾರ್ಚ್ 2025, 13:50 IST
<div class="paragraphs"><p>ವಿದ್ಯಾರ್ಥಿ ದಿಗಂತ್</p></div>

ವಿದ್ಯಾರ್ಥಿ ದಿಗಂತ್

   

ಬಂಟ್ವಾಳ (ದಕ್ಷಿಣ ಕನ್ನಡ): ಇಲ್ಲಿಗೆ ಸಮೀಪದ ಫರಂಗಿಪೇಟೆ ಕಿದೆಬೆಟ್ಟು ಎಂಬಲ್ಲಿ 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಶನಿವಾರ ಪತ್ತೆಯಾಗಿದ್ದಾನೆ.

ಸ್ಥಳೀಯ ವೀರಾಂಜನೇಯ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಫೆ.25ರಂದು ಸಂಜೆ ಮನೆಯಿಂದ ಹೊರಟಿದ್ದ ಆತ ಬಳಿಕ ಮನೆಗೆ ಬಂದಿರಲಿಲ್ಲ. ಆತನಿಗಾಗಿ ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದಾಗ ಊರಿನ ರೈಲ್ವೆ ಹಳಿಯಲ್ಲಿ ಆತನ ಮೊಬೈಲ್ ಮತ್ತು ಚಪ್ಪಲಿಗಳು ದೊರೆತಿದ್ದವು. ಆತನನ್ನು ಮಾದಕ ದ್ರವ್ಯ ವ್ಯಸನಿಗಳು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿತ್ತು. ಆತ ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಆತನನ್ನು ಶೀಘ್ರವೇ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಸ್ಥಳೀಯರು ಫರಂಗಿಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಮಾರ್ಚ್ 1ರಂದು ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಇಲಾಖೆ ಆತನ ಪತ್ತೆಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದ್ದರು. ಪಶ್ಚಿಮ ವಲಯ ಡಿಐಜಿ ಅಮಿತ್‌ ಸಿಂಗ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ಎನ್‌. ಮತ್ತಿತರ ಪೊಲೀಸ್ ಅಧಿಕಾರಿಗಳು ಫರಂಗಿಪೇಟೆಗೆ ಧಾವಿಸಿ ತನಿಖೆಗೆ ಮಾರ್ಗದರ್ಶನ ಮಾಡಿದ್ದರು. ರೈಲ್ವೆ ಪೊಲೀಸ್ ಜೊತೆಗೆ ಸೇರಿಯೂ ಹುಡುಕಾಟ ನಡೆಸಿದ್ದರು. ದಿಗಂತ್ ಪತ್ತೆಯಾಗದೇ ಇದ್ದುದರಿಂದ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

‘ದಿಗಂತ್‌ ಉಡುಪಿಯಲ್ಲಿ ಪತ್ತೆಯಾಗಿದ್ದ. ಆತನೇ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಇಲ್ಲಿನ ಪೊಲೀಸರು ಉಡುಪಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆತನನ್ನು ಊರಿಗೆ ಕರೆತರಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.