ADVERTISEMENT

ಸುಖಾನಂದ್ ಶೆಟ್ಟಿ ಕೊಲೆ ಆರೋಪಿಗಳಿಗೆ ಆಶ್ರಯ ಅಬ್ದುಲ್ ಸಲಾಂ 19 ವರ್ಷಗಳ ಬಳಿಕ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 3:13 IST
Last Updated 20 ನವೆಂಬರ್ 2025, 3:13 IST
ಅಬ್ದುಲ್‌ ಸಲಾಂ ಅಡ್ಡೂರು
ಅಬ್ದುಲ್‌ ಸಲಾಂ ಅಡ್ಡೂರು   

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ 2006ರಲ್ಲಿ ನಡೆದಿದ್ದ ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ರಕ್ಷಣೆ ನೀಡಿದ್ದ ಆರೋಪಿ ಅಬ್ದುಲ್ ಸಲಾಂ ಅಡ್ಡೂರು (47) ಎಂಬಾತನನ್ನು ಕೃತ್ಯ ನಡೆದ 19 ವರ್ಷಗಳ ಬಳಿಕ ಪೊಲೀಸರು ಬಜಪೆ ಬಳಿಯ ಕಿನ್ನಿಪದವಿನಲ್ಲಿ ಬಂಧಿಸಿದ್ದಾರೆ.

‘2006ರ ಡಿ 1ರಂದು ಹೊಸಬೆಟ್ಟುವಿನಲ್ಲಿ ಸುಖಾನಂದ ಶೆಟ್ಟಿ ಹತ್ಯೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ  ಕಬೀರ್ ಹಾಗೂ ಆತನ ಸಹಚರರಿಗೆ ಆರೋಪಿಗಳಾದ ಲತೀಫ್ ಅಲಿಯಾಸ್ ಅಡ್ಡೂರು ಲತೀಫ್ ಮತ್ತು ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಸಹೋದರರು ಅಡ್ಡೂರ್ ಟಿಬೆಟ್ ಕಾಲೋನಿಯ ತಮ್ಮ ಮನೆಯಲ್ಲಿ 2 ದಿನ ಆಶ್ರಯ ನೀಡಿದ್ದರು.  ಆರೋಪಿ ಕಬೀರ್‌ನನ್ನು ವಾಹನದಲ್ಲಿ ಕೇರಳದ ಕಾಸರಗೋಡಿಗೆ ಬಿಟ್ಟುಬಂದು, ಬಳಿಕ ತಲೆಮರೆಸಿಕೊಂಡಿದ್ದರು.’

‘ಕೃತ್ಯ ನಡೆದ 3 ತಿಂಗಳ ಬಳಿಕ ಆರೋಪಿ ಅಬ್ದುಲ್ ಸಲಾಂ 2007ರಲ್ಲಿ ಪಾಸ್‌ಪೋರ್ಟ್ ಮಾಡಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆತನ  ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆತ ಬಜಪೆ ಠಾಣೆ  ವ್ಯಾಪ್ತಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಂಗಳವಾರ ಕಿನ್ನಿಪದವಿನಲ್ಲಿ ವಶಕ್ಕೆ ಪಡೆದಿದ್ದರು.’  

ADVERTISEMENT

‘ಈ ಪ್ರಕರಣದಲ್ಲಿ ಈ ಹಿಂದೆ 16 ಆರೋಪಿಗಳನ್ನು ಬಂಧಿಸಲಾಗಿತ್ತು. 11 ಆರೋಪಿಗಳು ತಲೆಮರೆಸಿಕೊಂಡಿದ್ದರು. ಅವರಲ್ಲಿ ಒಬ್ಬನಾಗಿದ್ದ ವಿದೇಶಕ್ಕೆ ಪರಾರಿಯಾಗಿದ್ದ. ಇತ್ತೀಚಿಗೆ ಊರಿಗೆ ಮರಳಿದ್ದ. ಅಡ್ಡೂರಿನಲ್ಲಿದ್ದ ಆತನ ಮನೆಯನ್ನು ನೆಲಸಮಗೊಳಿಸಲಾಗಿತ್ತು. ಆತ ಬಜಪೆಯ ಕಿನ್ನಿಪದವಿನ ಬಾಡಿಗೆಮನೆಯಲ್ಲಿ ವಾಸವಾಗಿದ್ದ. ಆತನ ಸಹೋದರ ಲತೀಫ್ ಅಲಿಯಾಸ್‌ ಅಡ್ಡೂರು ಲತೀಫ್ ಕೂಡ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‌‘ ಅಬ್ದುಲ್ ಸಲಾಂ ಬಜಪೆ ಪೊಲೀಸ್ ಠಾಣೆಯ ರೌಡಿಶೀಟರ್‌. ಆತನ ಬಂಧನಕ್ಕೆ ನ್ಯಾಯಾಲಯ ಹಲವು ಬಾರಿ ವಾರಂಟ್ ಗಳನ್ನು ಹೊರಡಿಸಿತ್ತು.  19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಆತನ ವಿರುದ್ಧ ಬಜಪೆ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 209ರಂತೆ (ದೇಶದ ಹೊರಗಿದ್ದು ದುಷ್ಕೃತ್ಯವೆಸಗುವುದು) ಪ್ರಕರಣ ದಾಖಲಿಸಲಾಗಿದೆ. ಕಮಿಷನರೇಟ್‌ನ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಸುರತ್ಕಲ್‌  ಪೊಲೀಸ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ., ಪಿಎಸ್.ಐ ರಘುನಾಯಕ್ ಹಾಗೂ ಸಿಬ್ಬಂದಿ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ ಅವರು ಆರೋಪಿಯ ಪತ್ತೆಕಾರ್ಯದಲ್ಲಿ  ಭಾಗವಹಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.