ADVERTISEMENT

ಶಿಕ್ಷಕರ ದಿನ: ಬಿಳಿನೆಲೆಯ ಒಂದೇ ಕುಟುಂಬದಲ್ಲಿ ಹತ್ತು ಶಿಕ್ಷಕರು!

ಕಲಿಸುವ ಕಾಯಕದ ಮೇಲೆ ‘ನಡುತೋಟ’ ಕುಟುಂಬದವರಿಗೆ ಬಲು ಪ್ರೀತಿ

ಪ್ರವೀಣ ಕುಮಾರ್ ಪಿ.ವಿ.
Published 5 ಸೆಪ್ಟೆಂಬರ್ 2022, 2:58 IST
Last Updated 5 ಸೆಪ್ಟೆಂಬರ್ 2022, 2:58 IST
ಉಮಾ
ಉಮಾ   

ಮಂಗಳೂರು: ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಕೈಕಂಬದ ಬಳಿಯ ‘ನಡುತೋಟ’ ಕುಟುಂಬದವರಿಗೆ ಕಲಿಸುವ ಕಾಯಕದ ಮೇಲೆ ಬಲುಪ್ರೀತಿ. ಈ ಕುಟುಂಬದ ಬಹುತೇಕರು ಅಧ್ಯಾಪನ ವೃತ್ತಿಗಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಕುಟುಂಬದಲ್ಲಿ ಹತ್ತು ಮಂದಿ ಶಿಕ್ಷಕ ವೃತ್ತಿಯನ್ನೇ ನೆಚ್ಚಿಕೊಂಡಿದ್ದಾರೆ.

ಕುಟುಂಬದ ಹಿರಿಯ ಸದಸ್ಯ ನೀಲಪ್ಪ ಗೌಡ ನಡುತೋಟ ಅವರು, 40 ವರ್ಷ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ತಾವು ಕಲಿತಿದ್ದ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ಜೊತೆಯಲ್ಲೇ ಉನ್ನತ ಶಿಕ್ಷಣವನ್ನೂ ಪಡೆದು ಹರಿಹರ ಪಲ್ಲತಡ್ಕ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸದ ಉಪನ್ಯಾಸಕರಾಗಿ ನಿವೃತ್ತರಾಗಿದ್ದಾರೆ.

ಬಳಿಕ, ಒಂದು ವರ್ಷ ಕಡಬದ ಏಮ್ಸ್‌ ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಕುಟುಂಬದ ಹೆಚ್ಚಿನ ಸದಸ್ಯರು ಶಿಕ್ಷಕ ವೃತ್ತಿಯನ್ನೇ ಆರಿಸುವುದಕ್ಕೆ ನೀಲಪ್ಪ ಗೌಡರೇ ಪ್ರೇರಣೆ. ಸೋದರರಿಗೆ ಮತ್ತು ಸೋದರಿಗೆ ವಿದ್ಯಾಭ್ಯಾಸ ಕೊಡಿಸಿ ಸಕಲ ನೆರವನ್ನೂ ನೀಡಿದ್ದರು. ಅವರ ಪತ್ನಿ ಶಾಂತಿ ಅವರು ಸುಬ್ರಹ್ಮಣ್ಯದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ.

ನೀಲಪ್ಪ ಅವರ ಸೋದರ ದಿವಂಗತ ದಿವಾಕರ ಗೌಡ ಅವರು ಸುಂಕದಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದರು. ಸೇವೆಯಲ್ಲಿರುವಾಗಲೇ ವಿದ್ಯುದಾಘಾತದಿಂದ ಮೃತಪಟ್ಟಿದ್ದರು. ದಿವಾಕರ ಅವರ ಪತ್ನಿ ಸುಮತಿಯವರು ಬಿಳಿನೆಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ.

ನೀಲಪ್ಪ ಅವರ ಇನ್ನೊಬ್ಬ ಸೊದರ ವಿಶ್ವನಾಥ ಗೌಡ ಅವರು ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವೃತ್ತಿ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಮಾರ್ಚ್‌ನಲ್ಲಿ ನಿವೃತ್ತರಾಗಿದ್ದಾರೆ. ವಿಶ್ವನಾಥ ಅವರ ಪತ್ನಿ ಲೀಲಾ ಕುಮಾರಿ ಪಂಜದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ.

ನೀಲಪ್ಪ ಅವರ ಮತ್ತೊ‌ಬ್ಬ ಸೋದರ ವಿಜಯ್‌ ಕುಮಾರ್‌ ಅವರು ಸಿರಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ. ವಿಜಯ್‌ ಕುಮಾರ್‌ ಅವರ ಪತ್ನಿ ಗೀತಾ ದೈಹಿಕ ಶಿಕ್ಷಣ ಶಿಕ್ಷಕಿ.

ಅವರ ಸೋದರಿ ಉಮಾ ಗುರುವಾಯನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿ. ಅವರ ಪತಿ ಧರಣಪ್ಪ ಗೌಡ, ಸೋಣಂ ದೂರು ಹಿರಿಯ ಪ‍್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾಗಿದ್ದಾರೆ.

‘ನಮ್ಮ ತಂದೆ ದಿವಂಗತ ನಡುತೋಟ ರಾಮಪ್ಪ ಕಲಿತವರಲ್ಲ. ತಾಯಿ ದಿವಂಗತ ರಾಮಕ್ಕ ನಾಲ್ಕನೇ ತರಗತಿವರೆಗೆ ಕಲಿತಿದ್ದರು. ತಂದೆ–ತಾಯಿ ಕೃಷಿ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಡಿಡಿಪಿಐ ಆಗಿದ್ದ ಮುದ್ದಾಜೆ ಶಿವರಾಮ ಗೌಡ ಹಾಗೂ ಅವರ ಮಗ ಎಂ.ಎಸ್.ದೇವರಾಜ್‌ ನೆರವಿನಿಂದ ಟಿ.ಸಿ.ಎಚ್‌ ಮಾಡಿದ್ದೆ. 1972ರಲ್ಲೇ ನನಗೆ ಕೆಲಸ ಸಿಕ್ಕಿತ್ತು. ಸಾವಿರಾರು ವಿದ್ಯಾರ್ಥಿಗಳ ಬದುಕಿನ ದಿಸೆಯನ್ನೇ ಬದಲಿಸಬಲ್ಲ ಶಿಕ್ಷಕ ವೃತ್ತಿ ಅತ್ಯಂತ ಉದಾತ್ತವಾದುದು. ಹಾಗಾಗಿಯೇ ಬಡತನವಿದ್ದರೂ ಮನೆಯವರೆಲ್ಲ ಅಧ್ಯಾಪನ ವೃತ್ತಿಯನ್ನು ಆರಿಸಿಕೊಳ್ಳುವಂತೆ ಪ್ರೇರೇಪಿಸಿದೆ’ ಎಂದು ನೀಲಪ್ಪ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾವೂ ಬೆಳೆದು ಮಕ್ಕಳನ್ನು ಬೆಳೆಸಿ’

‘ಅಧ್ಯಾಪಕರು ವಿದ್ಯಾರ್ಥಿಗಳನ್ನು ಬೆಳೆಸುವುದರ ಜೊತೆ ತಾವೂ ಬೆಳೆಯಬೇಕು. ಕಲಿಕೆಯನ್ನು ನಿಲ್ಲಿಸಬಾರದು. ಕಲೆ, ಕ್ರೀಡೆ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಈ ಪ್ರತಿಭೆಯನ್ನು ಮಕ್ಕಳಿಗೂ ಧಾರೆ ಎರೆಯಬೇಕು. ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಮನಗೆಲ್ಲುವುದು ಸುಲಭ. ನಿವೃತ್ತಿಯಾದ ಬಳಿಕವೂ ವಿದ್ಯಾರ್ಥಿಗಳು ಗೌರವಾದರ ತೋರುವುದನ್ನು ಕಂಡಾಗ ಬದುಕು ಸಾರ್ಥಕವಾಯಿತು ಎಂದೆನಿಸುತ್ತದೆ’ ಎನ್ನುತ್ತಾರೆ ನೀಲಪ್ಪ ಗೌಡ ನಡುತೋಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.