
ಸುಳ್ಯ: ಪ್ರಚಲಿತದಲ್ಲಿರುವ ಹವ್ಯಗನ್ನಡಕ್ಕೆ ಅಕಾಡೆಮಿ ಬೇಕು. ಬುಡಕಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೆ ಹಂತ ಹಂತವಾಗಿ ಅಕಾಡೆಮಿ ಸ್ಥಾಪನಯಾಗಬೇಕು. ಇದರಿಂದ ಈ ಭಾಷೆಗಳಿಂದ ಬಂದಿರುವ ಸಂಸ್ಕೃತಿ ಉಳಿದೀತು ಎಂದು ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಸಾಹಿತಿ ತೇಜಕುಮಾರ್ ಬಡ್ಡಡ್ಕ ಹೇಳಿದರು.
ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಭಾಷೆಗಳ ಅಳಿವಿನೊಂದಿಗೆ ಸಂಸ್ಕೃತಿಗಳೂ ನಾಶವಾಗುತ್ತಿವೆ. ನಮ್ಮ ಸುತ್ತ ನೋಡಿದರೆ ಅದು ಅರ್ಥವಾಗಬಲ್ಲದು. ನಮ್ಮೂರ ಸಾಹಿತ್ಯದ ಉನ್ನತಿಗೆ ಕಾರಣವಾಗಿದ್ದು ಇಲ್ಲಿನ ಜನರಾಡುವ ವಿಭಿನ್ನ ಭಾಷೆಗಳ ಸೊಗಡು ಎಂಬುದರಲ್ಲಿ ಸಂಶಯವಿಲ್ಲ. ಇಲ್ಲಿನ ಪ್ರಾದೇಶಿಕ ಭಾಷೆಗಳು ಕ್ಷೀಣಿಸುತ್ತಾ ಸಾಗುತ್ತಿವೆ. ಆಳುವ ಸರ್ಕಾರಗಳು ಅಕಾಡೆಮಿಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸುಮಾರು ಇನ್ನೂರರಷ್ಟು ಭಾಷೆಗಳು 60ರಿಂದ 80 ವರ್ಷಗಳಲ್ಲಿ ನಶಿಸಿಹೋಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆ ಭಾಷೆಗಳ ಸಾಲಿನಲ್ಲಿ ನಮ್ಮ ಕನ್ನಡವೂ ಇದೆ ಎಂಬುದು ಆತಂಕಕಾರಿ. 19 ಸಾವಿರದಷ್ಟಿದ್ದ ಭಾರತದ ಭಾಷೆಗಳಲ್ಲಿ ಅವೆಷ್ಟೋ ನಶಿಸಿಹೋಗಿವೆ. ಅಷ್ಟೊಂದು ಭಾಷೆಗಳು ಇನ್ನಿಲ್ಲವಾಗುತ್ತಿರುವಾಗ ಹೊಸದೊಂದು ಭಾಷೆ ಸೃಷ್ಟಿಯಾಗಿದೆಯೆಂಬ ಯಾವುದೇ ಕುರುಹುಗಳು ಕಂಡು ಬರುವುದಿಲ್ಲ. ಹಾಗಿದ್ದರೂ ಹೊಸದಾದ ಭಾಷೆಯೊಂದನ್ನು ಆವಿಷ್ಕಾರಗೊಳಿಸಿ ಬಹುತೇಕ ಯಶಸ್ಸು ಕಂಡ ಈ ಮಣ್ಣಿನ ವ್ಯಕ್ತಿಗಳನ್ನು ಮರೆಯುವಂತಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.