ADVERTISEMENT

ಯಾವನೋ ಚರಂಡಿಯಲ್ಲಿದ್ದವನಿಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ ಕೊಟ್ಟರು: ಹರಿಪ್ರಸಾದ್‌

ಪಠ್ಯಪುಸ್ತಕ ಪರಿಷ್ಕರಣೆ ವಿವಾದ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 11:01 IST
Last Updated 7 ಜೂನ್ 2022, 11:01 IST
ಬಿ.ಕೆ.ಹರಿಪ್ರಸಾದ್‌
ಬಿ.ಕೆ.ಹರಿಪ್ರಸಾದ್‌   

ಮಂಗಳೂರು: ‘ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಕ್ಕೆ ಈ ರಾಜ್ಯದಲ್ಲಿ ಅನೇಕ ಸಾಹಿತಿಗಳು ಹಾಗೂ ಪ್ರಾಧ್ಯಾಪಕರಿದ್ದಾರೆ. ಅವರೆಲ್ಲರನ್ನು ಬಿಟ್ಟು ಶಿಕ್ಷಣ ಸಚಿವರು ಅವನು ಯಾವನೋ ಚರಂಡಿಯಲ್ಲಿದ್ದವನನ್ನು ಪ್ರೊಫೆಸರ್‌ ಎಂದು ಹೇಳಿ ಕರೆತಂದು ಈ ಜವಾಬ್ದಾರಿ ಕೊಟ್ಟರು’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ನಾನು ಪ್ರೊಫೆಸರ್‌ ಅಲ್ಲ ಎಂದು ಅವನೇ (ರೋಹಿತ್‌ ಚಕ್ರತೀರ್ಥ) ಹೇಳಿದ್ದಾನೆ‌. ಸಿಇಟಿ ಎಂಬುದು ಯಾವ ಕೋರ್ಸ್‌ ಎಂದೇ ಗೊತ್ತಿಲ್ಲ. ಏನೂ ಅರ್ಹತೆ ಇಲ್ಲದವರನ್ನು ಕರೆತಂದು ನಾಗಪುರ ವಿಶ್ವವಿದ್ಯಾಲಯದ ಗುಪ್ತ ಕಾರ್ಯಸೂಚಿಯನ್ನು ಹೇರುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಒಂದೇ ಮತ, ಒಂದೇ ದೇವರು, ಒಂದೇ ಜಾತಿ ಎಂಬ ದೇಶದ ಏಕತೆಯ ಸಿದ್ಧಾಂತವನ್ನು ಸಾರಿದವರ ವಿಚಾರಗಳನ್ನೂ ಕೈಬಿಟ್ಟಿದ್ದಾರೆ. ಉಳ್ಳಾಲದ ರಾಣಿ ಅಬ್ಬಕ್ಕ, ನಾರಾಯಣ ಗುರುಗಳಂಥವರ ವಿಚಾರವನ್ನು ಪಠ್ಯದಿಂದ ಕೈಬಿಟ್ಟ ಬಳಿಕ ಜನರಿಗೆ ಬಿಸಿ ತಟ್ಟಿದೆ. ಅವರ ಗುಪ್ತಕಾರ್ಯಸೂಚಿಯನ್ನು ಹಿಂಬಾಗಿಲಿನ ಮೂಲಕ ಅನುಷ್ಠಾನಕ್ಕೆ ತರುವ ಪ್ರಯತ್ನಗಳ ಬಗ್ಗೆಯೂ ಮನದಟ್ಟಾಗಿದೆ. ಸ್ವಾರ್ಥಕ್ಕಾಗಿ ಇವರು ಯಾರನ್ನೂ ಬೇಕಾದರೂ ಬಲಿ ಕೊಡುತ್ತಾರೆ ಎಂಬುದು ಜನರಿಗೂ ಅರ್ಥವಾಗತೊಡಗಿದೆ’ ಎಂದರು.

ADVERTISEMENT

‘ರೋಹಿತ್‌ ಚಕ್ರತೀರ್ಥನೋ, ವಕ್ರತೀರ್ಥನೋ ಗೊತ್ತಿಲ್ಲ. ನಾಗಪುರ ವಿಶ್ವವಿದ್ಯಾಲಯದಿಂದ ಬಂದ ಇವರಿಗೆಲ್ಲ ಜವಾಬ್ದಾರಿ ಇಲ್ಲ. ನಾಳೆ ಪಠ್ಯಪುಸ್ತಕಗಳಲ್ಲಿ ಈ ವಿಚಾರಗಳನ್ನೆಲ್ಲ ಆರ್‌ಎಸ್‌ಎಸ್‌ ಸೇರಿಸಿದೆ ಎಂದರೆ, ಅದಕ್ಕೆ ಪುರಾವೆಯೇ ಇರುವುದಿಲ್ಲ. ಏಕೆಂದರೆ, ಅದು ನೊಂದಾಯಿತ ಸಂಸ್ಥೆಯೇ ಅಲ್ಲ. ಅದಕ್ಕೆ ಅಸ್ತಿತ್ವವೇ ಇಲ್ಲ. ಖಾಕಿ ಚಡ್ಡಿ ಕರಿಟೋಪಿಯನ್ನು ಸುಡುವ ಮೂಲಕ ಅವರ ಅಸ್ತಿತ್ವವನ್ನೇ ನಾಶಪಡಿಸುವುದನ್ನೇ ಸಾಂಕೇತಿಕವಾಗಿ ‘ಖಾಕಿ ಚಡ್ಡಿ ಸುಡುವ’ ಅಭಿಯಾನ ಎಂದು ಸಿದ್ದರಾಮಯ್ಯ ಹೇಳಿದ್ದಾರೆ’ ಎಂದು ತಿಳಿಸಿದರು.

‘ಖಾಕಿ ಚಡ್ಡಿ, ಕರಿಟೋಪಿಹಾಗೂ ಕೈಯಲ್ಲಿ ದೊಣ್ಣೆ ಹಿಡಿದುಕೊಂಡವರು ‘ದೇಶವನ್ನು ಕಾಪಾಡುತ್ತೇವೆ’ ಎಂದು ಹೇಳುವ ಮೂಲಕ ದೇಶವನ್ನು ಕಾಯುತ್ತಿರುವ ಸೇನೆ,ಅರೆಸೇನಾ ಪಡೆಗಳು ಹಾಗೂ ಪೊಲೀಸರಿಗೆ ಅವಮಾನ ಮಾಡುತ್ತಿದ್ದಾರೆ. 100 ವರ್ಷಗಳ ಈಚೆಗೆ ಬಂದ ಇವರು ಖಾಕಿ ಚಡ್ಡಿ ಹಾಗೂ ಕರಿಟೋಪಿ ಹಾಕಿ ಹಿಂದೂ ಧರ್ಮವನ್ನು ಕಾಪಾಡುತ್ತೇವೆ ಎನ್ನುವುದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ. ಉಪನಿಷತ್‌ನಲ್ಲಾಗಲೀ ಅಥವಾ ಭಗವದ್ಗೀತೆಯಲ್ಲಾಗಲೀ ಎಲ್ಲೂ ಖಾಕಿ ಚಡ್ಡಿ, ಕರಿ ಟೋಪಿಯ ಉಲ್ಲೇಖವಿಲ್ಲ. ಪ್ರಪಂಚದ ಇತಿಹಾಸದಲ್ಲಿ ಇದು ಕಾಣಸಿಗುವುದು ಜರ್ಮನಿಯ ಹಿಟ್ಲರ್‌ನ ಸೇನೆಯಲ್ಲಿ ಮಾತ್ರ. ನೂರು ಸಲ ಸುಳ್ಳು ಹೇಳುವುದೇ ಅವರ ಕೆಲಸ. ನಾವು ಯಾವತ್ತೂ ಸುಳ್ಳು ಹೇಳುವುದಿಲ್ಲ. ಅಪ್ಪಿ ತಪ್ಪಿ ಸುಳ್ಳು ಹೇಳಿದರೂ ಕ್ಷಮಾಪಣೆ ಕೇಳುತ್ತೇವೆ. ದೇಶದ ಏಕತೆ ಉಳಿಯಬೇಕಾದರೆ, ಧರ್ಮಾಂಧತೆಯ ಅಫೀಮು ತೆಗೆಯಲೇ ಬೇಕು’ ಎಂದರು.

‘ಈಗ ಖಾಕಿ ಚಡ್ಡಿ ಬದಲು ಪ್ಯಾಂಟು ಬಂದಿದೆ. ಇದು ಅವರ ಅಸ್ಮಿತೆಯನ್ನೇ ಕಳೆದುಕೊಂಡಿರುವುದರ ಸಂಕೇತ. ಸರಳತೆ, ತ್ಯಾಗ ಬಲಿದಾನ ಎಂದು ಹೇಳುತ್ತಿದ್ದವರು ಪ್ಯಾಂಟ್‌ಗೆ ಏಕೆ ಬದಲಾದರು? ಅದಕ್ಕೆ ಕಾರಣ ಅಧಿಕಾರ. ಈಗ ಶೇ 40ರಷ್ಟು ಕಮಿಷನ್‌ ಬರುತ್ತಿರುವುದರಿಂದ, ಪ್ಯಾಂಟು ಹಾಗೂ ₹ 10 ಲಕ್ಷದ ಸೂಟುಗಳೆಲ್ಲವೂ ಬಂದಿವೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ಧವಾಗಿದ್ದ ಸಂಘಟನೆ ಆರ್‌ಎಸ್‌ಎಸ್‌. ಹಿಂದಿ ಭಾಷಿಕ ಪ್ರದೇಶವನ್ನು ಬಿಟ್ಟು ಬೇರೆಲ್ಲಿಯಾದರೂ ಅದು ಪ್ರಭಾವ ಬೀರಿದೆಯೇ? ದೇಶವೆಂದರೆ ಬರೀ ಹಿಂದಿ ಪ್ರದೇಶಗಳು ಮಾತ್ರವಲ್ಲ’ ಎಂದರು.

‘ಎಲ್ಲ ರೀತಿಯ ಜನರನ್ನು ಒಟ್ಟಿಗೆ ಕರೆದೊಯ್ಯುವ ಉದ್ದೇಶದಿಂದ ನೆಹರೂ ಅವರು ತಮ್ಮ ಸಂಪುಟದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌, ಶ್ಯಾಂ ಪ್ರಸಾದ್‌ ಮುಖರ್ಜಿ ಹಾಗೂ ಮುಸ್ಲಿಂ ಲೀಗ್‌ ಮುಖಂಡರಿಗೆ ಸ್ಥಾನ ಕಲ್ಪಿಸಿದ್ದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಅವರ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಎಂಟು ವರ್ಷಗಳಲ್ಲಿ ದೇಶಕ್ಕಾಗಿ ಮಾಡಿದ ಒಂದು ಒಳ್ಳೆಯ ಕೆಲಸವನ್ನೂ ಹೇಳುವುದಕ್ಕೆ ಇವರಿಂದ ಆಗದು’ ಎಂದರು.

‘ಹಿಜಾಬ್‌– ನ್ಯಾಯಾಲಯದ ಆದೇಶ ಪಾಲನೆ ಆಗಲಿ’

‘ಹಿಜಾಬ್‌ ಕುರಿತು ನ್ಯಾಯಾಲಯದ ಆದೇಶ ಪಾಲಿಸಿದರೆ ಸಾಕು’ ಎಂದು ಎಂದು ಹರಿಪ್ರಸಾದ್‌ ಅಭಿಪ್ರಾಯಪಟ್ಟರು.

‘ಏನೇ ಹೋರಾಟಗಳಿದ್ದರೂ ಸಂವಿಧಾನದ ಚೌಕಟ್ಟಿನಲ್ಲೇ ನಡೆಯಬೇಕು. ಹಿಜಾಬ್‌ ವಿಚಾರದಲ್ಲಿ ಸಾಂವಿಧಾನಿಕವಾಗಿ ಹೋರಾಡುತ್ತಿರುವ ಹುಡುಗಿಯರನ್ನು ಅಭಿನ‌ಂದಿಸುತ್ತೇನೆ. ಈ ವಿವಾದ ಭುಗಿಲೆದ್ದ ಉಡುಪಿಯ ಕಾಲೇಜಿನಲ್ಲಿ ಗಲಾಟೆ ನಡೆಯಲಿಲ್ಲ. ಬೇರೆ ಕಡೆಗಳಲ್ಲಿ ಗಲಾಟೆ ಮಾಡಿಸಿದ್ದು, ಎಸ್‌ಡಿಪಿಐ ಹಾಗೂ ಸಂಘ ಪರಿವಾರದವರು. ಹಿಂದುತ್ವವಾದಿಗಳು ಕೂಡ ಸಾಂವಿಧಾನಿಕವಾಗಿ ಹೋರಾಟ ಮಾಡುವುದನ್ನು ಕಲಿಯಬೇಕು’ ಎಂದರು.

‘ಯಾವತ್ತೂ ಇಲ್ಲದ ಪದ್ಧತಿಗಳನ್ನು ಈಗ ಏಕೆ ಜಾರಿ ತರುತ್ತಿದ್ದರೋ ತಿಳಿಯದು. ಉತ್ತರ ಪ್ರದೇಶದಲ್ಲಿ ಎಲ್ಲ ಮಹಿಳೆಯರು ಗುಂಗಟ್‌ ಧರಿಸುತ್ತಾರೆ. 33 ಕೋಟಿ ದೇವರನ್ನು ಹೊಂದಿರುವ ಈ ದೇಶದಲ್ಲಿ ಹಲವಾರು ಸಂಪ್ರದಾಯಗಳಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.