ADVERTISEMENT

10ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ: ಸಿಂಧೂರ ಹಚ್ಚಿ, ಆರತಿ ಬೆಳಗಿ ಸ್ವಾಗತ

ಶಕ್ತಿನಗರದ ಶಕ್ತಿ ವಸತಿ ಶಾಲೆಯ ಬೀಳ್ಕೊಡುಗೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 16:00 IST
Last Updated 25 ಮಾರ್ಚ್ 2022, 16:00 IST
ಶಕ್ತಿ ವಸತಿ ಶಾಲೆಯಲ್ಲಿ 10ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಹಣೆಗೆ ಸಿಂಧೂರ ಹಚ್ಚಿ ಸ್ವಾಗತಿಸಲಾಯಿತು.
ಶಕ್ತಿ ವಸತಿ ಶಾಲೆಯಲ್ಲಿ 10ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಹಣೆಗೆ ಸಿಂಧೂರ ಹಚ್ಚಿ ಸ್ವಾಗತಿಸಲಾಯಿತು.   

ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯ 10ನೇ ತರಗತಿಯ ಮೊದಲ ಬ್ಯಾಚ್‌ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ವಿದ್ಯಾಭಾರತಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್ ಅವರು, ‘ನೀವು ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯಲು ಬಯಸಿದರೆ ನಿಮ್ಮ ಗುರಿಯನ್ನು ನಿಗದಿಪಡಿಸಿ ಅದರ ಜೊತೆ ದೊಡ್ಡ ಕನಸುಗಳನ್ನು ಕಾಣಬೇಕು. ಎಲ್ಲ ಸಾಧಕರು ಕಠಿಣ ಪರಿಶ್ರಮ ಪಟ್ಟು ಗುರಿಯನ್ನು ಸಾಧಿಸುತ್ತಾರೆ’ ಎಂದರು.

ಶೈಕ್ಷಣಿಕ ಸಂಯೋಜಕ ಪೃಥ್ವಿರಾಜ್ ಮಾತನಾಡಿ, ‘ಪೋಷಕರ ಕನಸನ್ನು ನನಸಾಗಿಸುವುದು ನಿಮ್ಮ ಧ್ಯೇಯವಾಗಬೇಕು. ಪ್ರತಿಯೊಬ್ಬರೂ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದರು.

ADVERTISEMENT

ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಮಾತನಾಡಿದರು. ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕ ರೂಪದಲ್ಲಿ ಅವರ ಹಣೆಗೆ ಸಿಂಧೂರ ಹಚ್ಚಿ ಆರತಿ ಎತ್ತುವ ಮೂಲಕ ಸ್ವಾಗತಿಸಲಾಯಿತು. 8ನೇ ತರಗತಿಯ ಗಾಯಕರ ಗುಂಪು ಪ್ರಾರ್ಥನೆ ಹಾಡಿದರು. ಸಂಚಯ್, ಅಮೋಘ್, ಸಿದ್ಧಾಂತ್, ರೋಸ್ಮಿ ಮತ್ತು ಶುಕ್ಲಾ ಅನಿಸಿಕೆ ಹಂಚಿಕೊಂಡರು. 10ನೇ ತರಗತಿಯ ವಿದ್ಯಾರ್ಥಿಗಳು ದೀಪಗಳನ್ನು ಬೆಳಗಿಸಿದರು ಮತ್ತು ಸೂರ್ಯನ ಕಿರಣಗಳ ರೂಪದಲ್ಲಿ ನೆಲವನ್ನು ಅಲಂಕರಿಸಿದರು.

ಮುಖ್ಯ ಸಲಹೆಗಾರ ರಮೇಶ್ ಕೆ., ಸಂಸ್ಥೆ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಮತ್ತು ಶಕ್ತಿ ಪೂರ್ವ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ಇದ್ದರು. ಸಂಯೋಜಕರಾಗಿ ವಿಜ್ಞಾನ ಶಿಕ್ಷಕಿ ಭವ್ಯಾ ಸಹಕರಿಸಿದರು. ಆಯುಷ್ ಎಲ್ ಸ್ವಾಗತಿಸಿದರು. ಸಲೋನಿ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.