
ಮಂಗಳೂರು: ಎದುರಾಳಿ ಆಟಗಾರನ ಮುಂದೆ ಬಿಳಿಕಾಯಿಗಳನ್ನು ನಡೆಸುವಾ ಗಲೂ ಕಪ್ಪು ಕಾಯಿಗಳನ್ನು ಎತ್ತಿ ಇಡು ವಾಗಲೂ ರಾಹುಲ್ ಮಲ್ಯ ಮನಸ್ಸಿನಲ್ಲಿ ತಂದೆ ಭಾಸ್ಕರ ಮಲ್ಯ ಅವರ ನೆನಪು. 72ನೇ ಬೋರ್ಡ್‌ನಲ್ಲಿ ಮೊದಲ ಸುತ್ತಿನ ಪಂದ್ಯ ಆಡುವಾಗಲೂ 83ನೇ ಬೋರ್ಡ್‌ನಲ್ಲಿ ಎರಡನೇ ಸುತ್ತಿನಲ್ಲಿ ಕಣಕ್ಕೆ ಇಳಿದಾಗಲೂ ತಂದೆಯ ಕ್ರೀಡಾಪ್ರೇಮದ ಬಿಸುಪು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ದಕ್ಷಿಣ ಕನ್ನಡ ಚೆಸ್ ಸಂಸ್ಥೆ ನಗರದ ತುಳು ಭವನ
ದಲ್ಲಿ ಆಯೋಜಿಸಿರುವ ಫಿಡೆ ರೇಟೆಡ್ ಅಖಿಲ ಭಾರತ ಮುಕ್ತ ಚೆಸ್
ಟೂರ್ನಿಯ ಆರಂಭದಲ್ಲಿ ಈಚೆಗೆ ನಿಧನರಾದ ಚೆಸ್ ಆಟಗಾರ, ಕ್ರೀಡಾ ಪ್ರಿಯ ಭಾಸ್ಕರ ಮಲ್ಯ ಅವರನ್ನು ಸ್ಮರಿಸಲಾಯಿತು. ಪಂದ್ಯಗಳು ಆರಂಭಗೊಂಡಾಗ ಆಟಗಾರರ ನಡುವೆ ಭಾಸ್ಕರ್ ಅವರ ಪುತ್ರ ರಾಹುಲ್ ಮಲ್ಯ ಕೂಡ ಇದ್ದರು.
ಶಾಲಾ ದಿನಗಳಲ್ಲಿ ಚೆಸ್ ಆಡುತ್ತಿದ್ದ ಭಾಸ್ಕರ ಮಲ್ಯ ಅವರು ನಂತರ ಆಟ ದಿಂದ ದೂರ ಉಳಿದಿದ್ದರು. ಬ್ಯಾಂಕ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದ ನಂತರ, 61ನೇ ವಯಸ್ಸಿನಲ್ಲಿ ಮತ್ತೆ ಚೆಸ್ ಕಾಯಿಗಳನ್ನು ಮುಟ್ಟಿದ್ದರು. ಶಾಲಾ ದಿನಗಳಲ್ಲಿ ಆಡುತ್ತಿದ್ದ ರಾಹುಲ್ ಮಲ್ಯ 15 ವರ್ಷಗಳ ನಂತರ ಸ್ಪರ್ಧಾತ್ಮಕ ಚೆಸ್ ಕಣಕ್ಕೆ ಇಳಿದಿದ್ದರು, ತಂದೆಯ ನೆನಪಿಗಾಗಿ.
ನಿವೃತ್ತಿಯ ನಂತರ ಆರ್ಥಿಕ ಸಲಹೆಗಾರನಾಗಿದ್ದ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ್ ಮಲ್ಯ ಮಂಗಳೂರಿನಲ್ಲಿ ನಡೆ ಯುತ್ತಿದ್ದ ಚೆಸ್ ಟೂರ್ನಿಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಆರ್‌ಸಿಸಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ನಂತರ ಮೈಸೂರಿನಲ್ಲಿ ನಡೆದ ಟೂರ್ನಿಯೊಂದಕ್ಕೆ ಸಿದ್ಧರಾಗುತ್ತಿದ್ದಂತೆ ಆರೋಗ್ಯ ಹದಗೆಟ್ಟಿತ್ತು. ‘ಆಸ್ಪತ್ರೆಯಲ್ಲಿದ್ದಾಗ ತುಳುಭವನದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ನಾನು ಖಂಡಿತಾ ಭಾಗವಹಿಸುವೆ ಎಂದು ಹೇಳಿದ್ದರು. ಆದರೆ ನವೆಂಬರ್ 20ರಂದು ತೀರಿಕೊಂಡಿದ್ದರು. ಅವರ ಬಯಕೆ ಈಡೇರಿಸುವುದಕ್ಕಾಗಿ ನಾನು ಆಡಲು ಬಂದಿದ್ದೇನೆ’ ಎಂದು ರಾಹುಲ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಂತರ ಶಾಲಾ ಟೂರ್ನಿಗಳಲ್ಲಿ ರಾಜ್ಯಮಟ್ಟದವರೆಗೆ ಹೋಗಿದ್ದೇನೆ. ಈಚೆಗೆ 15 ವರ್ಷಗಳಿಂದ ಆಡುತ್ತಿರಲಿಲ್ಲ. ಗೇಮ್ ಬಗ್ಗೆ ಕುತೂಹಲ ಇತ್ತು. ಒಂದು ರ‍್ಯಾಪಿಡ್ ಟೂರ್ನಿಯಲ್ಲಿ ಅರ್ಧ ದಿನ ಆಡಿದ್ದನ್ನು ಬಿಟ್ಟರೆ ಸ್ಪರ್ಧಾಕಣದತ್ತ ಸುಳಿದದ್ದು ಇದೇ ಮೊದಲು. ಅಪ್ಪ ಅನಾರೋಗ್ಯ ಕಾಡಿದ ನಂತರ ಚೆಸ್ ಡಾಟ್ ಕಾಂನಲ್ಲಿ ಆನ್‌ಲೈನ್ ಮೂಲಕ ಅಭ್ಯಾಸ ಮಾಡುತ್ತಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಫಿಡೆ ರೇಟಿಂಗ್ ಗಳಿಸಿದ್ದ ಸಂಭ್ರಮದಲ್ಲಿದ್ದರು. 1500ರ ಆಸುಪಾಸಿನಲ್ಲಿ ಅವರ ರೇಟಿಂಗ್ ಇತ್ತು. ಇನ್ನು ಎರಡು ವರ್ಷ ಇದ್ದರೆ 1900ರಿಂದ 2 ಸಾವಿರದ ವರೆಗೆ ರೇಟಿಂಗ್ ಏರಿಸುವೆ ಎಂದು ಹೇಳುತ್ತಿದ್ದರು. ಆದರೆ ವಿಧಿಯ ಆಟ ಬೇರೆಯೇ ಇತ್ತು’ ಎಂದು ರಾಹುಲ್ ಹೇಳಿದರು.
‘ಆರ್‌ಸಿಸಿ ಟೂರ್ನಿಯ ಹಿರಿಯರ ವಿಭಾಗದಲ್ಲಿ ಅವರು ಬಹುಮಾನ ಗೆದ್ದಿದ್ದರು. ಆಟದ ಬಗ್ಗೆ ಅಪಾರ ಆಸಕ್ತಿ ಇತ್ತು. ಪ್ರತಿದಿನ ನಾಲ್ಕರಿಂದ ಐದು ತಾಸುಗಳನ್ನು ಚೆಸ್‌ಗಾಗಿ ಮೀಸಲಿಡುತ್ತಿದ್ದರು. ಅಪಾರ ಜೀವನೋತ್ಸಾಹವಿದ್ದ ಅವರು ಆಗೊಮ್ಮೆ ಈಗೊಮ್ಮೆ ನಿರಾಸೆಗೆ ಒಳಗಾದಾಗ ನಾನೇ ಭರವಸೆ ತುಂಬುತ್ತಿದ್ದೆ. ಬೇಗ ಹುಷಾರಾಗಿ ತುಳುಭವನದ ಟೂರ್ನಿಯಲ್ಲಿ ಆಡು ತ್ತೀರಿ ಎಂದು ಹೇಳುತ್ತಿದ್ದೆ. ಎಲ್ಲರ ಲೆಕ್ಕಾಚಾರ ಸುಳ್ಳಾಯಿತು. ಅವರೇ ಇಲ್ಲಿಗೆ ಬರಬೇಕಿತ್ತು. ಅವರ ಬದಲಿಗೆ ನಾನಿದ್ದೇನೆ. ಆಟದ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ’ ಎಂದು ಅನ್‌ರೇಟೆಡ್ ಆಟಗಾರ ಕನ್ಸಲ್ಟಂಟ್ ಆಗಿ ರುವ ಮಣ್ಣಗುಡ್ಡ ನಿವಾಸಿ ರಾಹುಲ್ ಹೇಳಿದರು.
ಭಾಸ್ಕರ ಮಲ್ಯ ಅವರು ಅತ್ಯಂತ ವಿನಯಶೀಲರಾಗಿದ್ದರು. ಟೂರ್ನಿಗಳಿಗೆ ಬಹಳ ಆಸಕ್ತಿಯಿಂದ ಬರುತ್ತಿದ್ದರು. ಯುವ ತಲೆಮಾರಿಗೆ ಆದರ್ಶವಾಗಿದ್ದ ಅವರು ಕೆಲವು ಟೂರ್ನಿಗಳ ಆರಂಭದಲ್ಲಿ ಹೊಸ ಆಟಗಾರರಿಗೆ ಶುಭ ಕೋರುತ್ತಿದ್ದರುರಮೇಶ್ ಕೋಟೆ ಕರ್ನಾಟಕ ಚೆಸ್ ಸಂಸ್ಥೆಯ ಉಪಾಧ್ಯಕ್ಷ
ಶುಕ್ರವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಟೂರ್ನಿಯನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಚೆಸ್ ಸಂಸ್ಥೆಯ ಗೌರವಾಧ್ಯಕ್ಷ ಸುನಿಲ್ ಆಚಾರ್ ಕರ್ನಾಟಕ ತುಳು ಆಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉದ್ಯಮಿಗಳಾದ ಎನ್.ರವೀಂದ್ರ ಶೆಟ್ಟಿ ದಿವಾಕರ್ ಕದ್ರಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಭಾಸ್ಕರ ರೈ ಕಟ್ಟಾ ದಕ್ಷಿಣ ಕನ್ನಡ ಚೆಸ್ ಸಂಸ್ಥೆಯ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ್ ಕಾರ್ಯದರ್ಶಿ ರಮ್ಯಾ ರೈ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.