ADVERTISEMENT

ಖಾದರ್‌ ಅಪರಾಧ ಕೃತ್ಯ ಬೆಂಬಲಿಸುವ ಜಾಯಮಾನದವರಲ್ಲ: ಸದಾಶಿವ ಉಳ್ಳಾಲ್‌

​ಪ್ರಜಾವಾಣಿ ವಾರ್ತೆ
Published 7 ಮೇ 2025, 9:11 IST
Last Updated 7 ಮೇ 2025, 9:11 IST
   

ಮಂಗಳೂರು: 'ಅಪರಾಧ ಕೃತ್ಯದಲ್ಲಿ ಭಾಗಿಯಾದವರಿಗೆ ನೆರವಾಗುವ ಜಾಯಮಾನ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರದಲ್ಲ. ಬಿಜೆಪಿಯವರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಅವರ ಹೆಸರು ಥಳಕು ಹಾಕಿ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರು ಯು.ಟಿ.ಖಾದರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.‌ ಇದು ಅವರಿಗೆ ಶೋಭೆ ತರುವುದಿಲ್ಲ. ಖಾದರ್ ಬಗ್ಗೆ ಮಾತನಾಡುವ ಯೋಗ್ಯತೆಯೇ ಅವರಿಗಿಲ್ಲ’ ಎಂದರು.

‘ಸಂತೋಷ್‌ ಬೊಳಿಯಾರ್‌ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸತೀಶ್‌ ಕುಂಪಲ ಏನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಖಾದರ್ ಅವರನ್ನು ಸೋಲಿಸಬೇಕೆಂದು ಎಸ್‌ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡವರು ಅವರು’ ಎಂದು ಆರೋಪಿಸಿದರು.

ADVERTISEMENT

‘ಖಾದರ್ ಜಾತ್ಯತೀತ ನೆಲೆಯಲ್ಲಿ ಎಲ್ಲರಿಗೂ ಸಹಾಯ ಮಾಡುವವರು. ಪೊಲೀಸ್‌ ಠಾಣೆಗೆ ಕರೆ ಮಾಡಿ ಒತ್ತಡ ಹೇರುವ ಕೆಲಸವನ್ನೂ ಅವರು ಮಾಡುವವರಲ್ಲ. ಸುಹಾಸ್ ಶೆಟ್ಟಿ ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕೆಂದೇ ಅವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಆರೋಪಿಸಿದಂತೆ ಪೊಲೀಸರ ಮೇಲೆ ಖಾದರ್ ಒತ್ತಡ ಹೇರುತ್ತಿದ್ದರೆ, ಫಾಝಿಲ್‌ ಸಹೋದರ ಆದಿಲ್‌ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುತ್ತಿರಲಿಲ್ಲ’ ಎಂದರು.

ಪಕ್ಷದ ವಕ್ತಾರ ದಿನೇಶ್‌ ಕುಂಪಲ, ‘ಸುಹಾಸ್‌ ಶೆಟ್ಟಿಯನ್ನು ಬೇಡವಾದ ಕೆಲಸಗಳಿಗೆ ಬಳಸಿದ್ದು ಬಿಜೆಪಿ. ಆತನ ಹೆಸರನ್ನು ರೌಡಿಗಳ ಪಟ್ಟಿಯಲ್ಲಿ ಸೇರಿಸಿದ್ದು ಬಿಜೆಪಿ. ಮಗನನ್ನು ಕಳೆದುಕೊಂಡ ಪೋಷಕರ ನೋವು ಅವರಿಗೆ ಅರ್ಥವಾಗುತ್ತದೆಯೇ’ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಮುಖಂಡರಾದ ನೀರಜ್ ಚಂದ್ರ ಪಾಲ್, ದೀಪಕ್ ಪಿಲಾರ್, ರಕ್ಷಿತ್ ಪೂಜಾರಿ, ನಜೀರ್ ಬಜಾಲ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.