ADVERTISEMENT

ವೇದವ್ಯಾಸ್‌ ಕಾಮತ್‌ ರೌಡಿಯಂತೆ ವರ್ತಿಸುತ್ತಿದ್ದಾರೆ: ಹರೀಶ್‌ ಕುಮಾರ್‌

ಭಾಷಣದಲ್ಲಿಯೂ ನಿಂದಿಸಿದ ಶಾಸಕ: ಹರೀಶ್‌ ಕುಮಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 4:17 IST
Last Updated 4 ಮಾರ್ಚ್ 2025, 4:17 IST
ಕೆ.ಹರೀಶ್‌ ಕುಮಾರ್‌
ಕೆ.ಹರೀಶ್‌ ಕುಮಾರ್‌   

ಮಂಗಳೂರು: ‘ಪದವು ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರದ ಕಾರ್ಯಕ್ರಮದ ವೇಳೆ ಸ್ವಾಗತಿಸಲು ನಿಂತಿದ್ದ ನಮ್ಮ ಮೂವರು ಕಾರ್ಯಕರ್ತರನ್ನುದ್ದೇಶಿಸಿ ‘ಮಂದಿರಕ್ಕೆ ಕಲ್ಲು ಹೊಡೆಯುವವರಿಗೆ ಇಲ್ಲೇನು ಕೆಲಸ’ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಪ್ರಶ್ನಿಸಿದ್ದಾರೆ. ತಮ್ಮ ಭಾಷಣದಲ್ಲಿಯೂ ಈ ಮಾತು ಹೇಳಿದ್ದಾರೆ. ಅವರು ಅಲ್ಲಿಂದ ನಿರ್ಗಮಿಸುವ ವೇಳೆ ನಮ್ಮ ಕಾರ್ಯಕರ್ತರು ಈ ಮಾತಿಗೆ ಸ್ಪಷ್ಟನೆ ಕೇಳಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು  ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ದೂರಿದರು.

‘ವೇದವ್ಯಾಸ್‌ ಕಾಮತ್‌ ರೌಡಿಯಂತೆ ವರ್ತಿಸುತ್ತಿದ್ದಾರೆ. ಅವರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಈ ಹಲ್ಲೆ ನಡೆಸಿದ ಶಾಸಕ ಹಾಗೂ ಅವರ ಪಕ್ಷದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪದವು ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರವನ್ನು ಆ ಊರಿನವರೇ ಹಣ ಹಾಕಿ ಜೀರ್ಣೋದ್ಧಾರ ಮಾಡಿ ಬ್ರಹ್ಮಕಲಶ ಕಾರ್ಯಕ್ರಮ ಆಯೋಜಿಸಿದ್ದರು. ಭಾನುವಾರ ರಾತ್ರಿಯ ಕಾರ್ಯಕ್ರಮಕ್ಕೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಬಂದಿದ್ದರು. ಅವರನ್ನು ಸ್ವಾಗತಿಸಲು ನಮ್ಮ ಮೂವರು ಕಾರ್ಯಕರ್ತರಾದ ಯಶವಂತ ಪ್ರಭು, ಆಶಾ ಲತಾ, ದಯಾನಂದ ನಾಯ್ಕ್‌ ನಿಂತಿದ್ದರು. ಅವರನ್ನುದ್ದೇಶಿಸಿ ಶಾಸಕರು ಈ ಮಾತು ಆಡಿದರು’ ಎಂದು ದೂರಿದರು.  

ADVERTISEMENT

‘ಯಶವಂತ ಪ್ರಭು ಆಸ್ಪತ್ರೆಗೆ ದಾಖಲಾದ ನಂತರವೂ ಮಾಜಿ ಕಾರ್ಪೊರೇಟರ್‌ ಮತ್ತು ಕೆಲವರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ಯಶವಂತ ಪ್ರಭು ದಾಖಲಾದ ಒಂದು ಗಂಟೆಯ ನಂತರ ಬಿಜೆಪಿ ಕಾರ್ಯಕರ್ತರ ಮಣಿ ಅವರನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಂದ ಎಸ್‌ಸಿಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ಕಾರ್ಯಕರ್ತ ದಯಾನಂದ ನಾಯ್ಕ್‌ ಅವರ ಮೇಲೂ ಹಲ್ಲೆ ಆಗಿದೆ. ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಆದರೂ, ನಾವು ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿ ಅದನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಆದರೆ, ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಶಾಸಕ ಕಾಮತ್‌ ಸುಳ್ಳು ಪ್ರತಿದೂರು ಕೊಡಿಸಿದ್ದಾರೆ’ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಯದಾನಂದ ನಾಯ್ಕ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಮಾಣಕ್ಕೆ ಬನ್ನಿ: ಸವಾಲು

‘ಮಣಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತಿ ದೂರು ದಾಖಲಿಸಿರುವ ಶಾಸಕ ಕಾಮತ್‌ ಮತ್ತು ಮಣಿ ಅವರು ಮಂಗಳವಾರ (ಮಾ.4) ಬೆಳಿಗ್ಗೆ 10ಕ್ಕೆ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ, ಅವರ ಮೇಲೆ ಹಲ್ಲೆ ನಡೆಸಿಲ್ಲ ಎಂದು ನಾವೂ ಪ್ರಮಾಣ ಮಾಡುತ್ತೇವೆ’ ಎಂದು ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್ ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.