ಉಜಿರೆ (ದಕ್ಷಿಣ ಕನ್ನಡ): ‘ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ, ಅಣ್ಣಪ್ಪ ಸ್ವಾಮಿಯ ರಕ್ಷಣೆಯಿಂದ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತಿವೆ. ಸತ್ಯದ ಸಾಕ್ಷಾತ್ಕಾರ ಆಗುತ್ತಿದೆ. ಶಾಂತಿ, ನೆಮ್ಮದಿ ದೊರಕಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಶುಕ್ರವಾರ ನಡೆದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳು, ದೈವಸ್ಥಾನಗಳು ಮತ್ತು ಶ್ರದ್ಧಾಕೇಂದ್ರಗಳ ಮುಖಂಡರು, ಧಾರ್ಮಿಕ ಪರಿಷತ್ತಿನ ಸದಸ್ಯರ ‘ಧರ್ಮಜಾಗೃತಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಧರ್ಮಾಧಿಕಾರಿಯಾಗಿ ‘ಹೆಗ್ಗಡೆ’ ಪೀಠವನ್ನು ಬಯಸಿದವನಲ್ಲ. ಅನಿರೀಕ್ಷಿತವಾಗಿ ತೀರ್ಥರೂಪರ ನಿಧನದಿಂದ ಪಟ್ಟ ಸ್ವೀಕರಿಸಬೇಕಾಯಿತು. ನಾನು ‘ನೆಪ’ ಮಾತ್ರ. ಎಲ್ಲ ಕಾರ್ಯಗಳೂ ಮಂಜುನಾಥ ಸ್ವಾಮಿಯ ಅನುಗ್ರಹದೊಂದಿಗೆ, ಧರ್ಮದೇವತೆಗಳ ಆಶಯ, ಅಣ್ಣಪ್ಪ ಸ್ವಾಮಿಯ ರಕ್ಷಣೆಯಿಂದ ಸುಗಮವಾಗಿ ನಡೆಯುತ್ತವೆ. ಪ್ರತಿ ಸಂಕ್ರಮಣದ ದಿನ ನಾನು ಧರ್ಮದೇವತೆಗಳಿಗೆ ವರದಿ ಒಪ್ಪಿಸಬೇಕು. ಆಗ ಅವರು, ತಿಳಿವಳಿಕೆ ಇಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇದೆ. ಏನೇ ಆಪತ್ತು, ವಿಪತ್ತು ಬಂದರೂ ಹೆತ್ತ ತಾಯಿಯಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಅಭಯ ನೀಡುತ್ತಾರೆ. ತಪ್ಪಾದಲ್ಲಿ ಕೈಯ ಎಣ್ಣೆ ಕಣ್ಣಿಗೆ ತಾಗಿದಂತೆ ಆಗಬಹುದು ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ’ ಎಂದು ಹೆಗ್ಗಡೆ ತಿಳಿಸಿದರು.
‘ನನಗೆ ಧರ್ಮಾಧಿಕಾರಿ ಪಟ್ಟಾಭಿಷೇಕ ಆದಾಗ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಕುಟುಂಬದ ಸದಸ್ಯರ ಸಹಕಾರ, ನೌಕರವೃಂದದವರ ಕರ್ತವ್ಯ ನಿಷ್ಠೆ ಹಾಗೂ ಊರಿನ ನಾಗರಿಕರು ಮತ್ತು ಕ್ಷೇತ್ರದ ಅಭಿಮಾನಿಗಳ ಸಹಕಾರದಿಂದ ಸಮಸ್ಯೆಗಳು ನಿವಾರಣೆಯಾಗಿವೆ’ ಎಂದರು.
ಬಾರ್ಕೂರಿನ ವಿದ್ವಾಂಸ ದಾಮೋದರ ಶರ್ಮಾ ಮಾತನಾಡಿ, ‘ಹೆಗ್ಗಡೆಯವರು ದೇವರು ಮತ್ತು ಮನುಷ್ಯರ ಸೇವೆ ಮಾಡಿ ‘ದೇವಮಾನವ’ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಯಕ್ಷಗಾನ ಬಯಲಾಟ ಪ್ರದರ್ಶನದ ಮೂಲಕ ಧರ್ಮಜಾಗೃತಿಯನ್ನೂ ಮಾಡುತ್ತಿದ್ದಾರೆ’ ಎಂದರು.
ವಿದ್ವಾನ್ ನಾಗೇಂದ್ರ ಭಾರದ್ವಾಜ, ಬೆಳ್ತಂಗಡಿಯ ವಕೀಲ ಬಿ.ಕೆ.ಧನಂಜಯ ರಾವ್, ಕಟೀಲು ದೇವಸ್ಥಾನದ ಲಕ್ಷ್ಮೀನಾರಾಯಣ ಅಸ್ರಣ್ಣ ಮಾತನಾಡಿ, ನಾವೆಲ್ಲರೂ ಸಂಘಟಿತರಾಗಿ ಧರ್ಮಸ್ಥಳದ ರಕ್ಷಣೆಗೆ ಸಹಕರಿಸಬೇಕು ಎಂದು ಹೇಳಿದರು.
ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ, ಹೇಮಾವತಿ ವಿ.ಹೆಗ್ಗಡೆ, ಶ್ರದ್ಧಾಅಮಿತ್, ಡಿ.ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಭಾಗವಹಿಸಿದ್ದರು.
ಪ್ರೊ.ಸುವೀರ್ ಕುಮಾರ್ ನಿರ್ಣಯ ಮಂಡಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸ್ವಾಗತಿಸಿದರು. ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಶ್ರೀಧರ ಭಟ್ ವಂದಿಸಿದರು.
* ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಹೆಗ್ಗಡೆಯವರ ತೆಜೋವಧೆಗೆ ರೂಪಿಸಿದ ಷಡ್ಯಂತ್ರಕ್ಕೆ ಸಂಬಂಧಿಸಿ ನ್ಯಾಯಯುತ ತನಿಖೆಗೆ ಅನುಕೂಲ ಕಲ್ಪಿಸಿದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಗೃಹಸಚಿವರು ಹಾಗೂ ಎಸ್‌ಐಟಿ ತಂಡದ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಲು ನಿರ್ಧರಿಸಲಾಯಿತು.
* ಸಾಮಾಜಿಕ ಮಾಧ್ಯಮ ಹಾಗೂ ದೃಶ್ಯಮಾಧ್ಯಮಗಳಲ್ಲಿ ಆಗುತ್ತಿರುವ ಸುಳ್ಳುಸುದ್ದಿಯ ಪ್ರಸಾರ ತಡೆಗಟ್ಟಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
* ಶ್ರದ್ಧಾಕೇಂದ್ರಗಳು ಧಾರ್ಮಿಕ ನಂಬಿಕೆಗಳ ವಿರುದ್ಧ ಹೇಳಿಕೆ ನೀಡಿ ಶಾಂತಿಭಂಗ ಮಾಡುತ್ತಿರುವ ಸಂಘ-ಸಂಸ್ಥೆಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು.
* ಧರ್ಮ ಸಂರಕ್ಷಣಾ ಸಮಿತಿಯನ್ನು ಬಲಪಡಿಸಿ ವರ್ಷಕ್ಕೆ ಒಂದು ಬಾರಿ ಇಂಥ ಸಮಾವೇಶವನ್ನು ಅಲ್ಲಲ್ಲಿ ಆಯೋಜಿಸಬೇಕು.
* ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ದೃಢಸಂಕಲ್ಪದಿಂದ ನಿಂತು ಧರ್ಮ ಸಂರಕ್ಷಣೆಯನ್ನು ಮಾಡಲು ಕಟಿಬದ್ಧರಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.