ADVERTISEMENT

ಮಂಗಳೂರು | ಉದ್ಯೋಗ ವೀಸಾ ವಂಚನೆ: ಆರೋಪಿಗಳಿಬ್ಬರ ಸೆರೆ

24 ಪಾಸ್ ಪೋರ್ಟ್‌, 43 ಗ್ರಾಂ ಚಿನ್ನಾಭರಣ, 2 ಮೊಬೈಲ್‌ ವಶ,

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 6:20 IST
Last Updated 30 ಅಕ್ಟೋಬರ್ 2025, 6:20 IST
ಆಲ್ಟನ್ ರೆಬೇರೊ
ಆಲ್ಟನ್ ರೆಬೇರೊ   

ಮಂಗಳೂರು: ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣವನ್ನು ಪಡೆದುಕೊಂಡು ಉದ್ಯೋಗವನ್ನು ಕೊಡಿಸದೆ  ವಂಚಿಸಿದ್ದ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಇಲ್ಲಿನ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.  

ಆನೆಕಲ್‌ನ ನೇಕಾರರ ಕಾಲೋನಿಯ ಪ್ರಕೃತಿ ಯು. (34) ಹಾಗೂ ಗಂಗೊಳ್ಳಿ ಚರ್ಚ್‌ ರೋಡ್‌ನ ಆಲ್ಟನ್ ರೆಬೇರೊ (42) ಬಂಧಿತರು. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗಳು ಬೆಂಗಳೂರಿನ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಸುಮಾರು 24 ಪಾಸ್‌ ಪೋರ್ಟ್‌ಗಳು, 43 ಗ್ರಾಂ ಚಿನ್ನಾಭರಣ ಮತ್ತು 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣದ ಮೌಲ್ಯ ₹  4.30 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕಾವೂರು ಠಾಣಾ ವ್ಯಾಪ್ತಿಯ ಹಲವರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿ ಸುಮಾರು  ₹1 ಕೋಟಿ ಹಣವನ್ನು ಪಡೆದುಕೊಂಡಿದ್ದರು. ಈ ಬಗ್ಗೆ ಅನೇಕರು ದೂರು ನೀಡಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

ADVERTISEMENT

‘ಉದ್ಯೋಗ ವೀಸಾ ಕೊಡಿಸುವುದಾಗಿ ನಂಬಿಸಿ, ಆರೋಪಿಗಳು ಅನೇಕರಿಂದ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದರು. ಆರೋಪಿಯ ಬೆಂಗಳೂರಿನ ಮನೆಯಲ್ಲಿ ಸಿಕ್ಕಿರುವ ಪಾಸ್‌ಪೋರ್ಟ್‌ಗಳು ಅವರಿಂದ ವಂಚನೆಗೆ ಒಳಗಾದ ಸಂತ್ರಸ್ತರದು ಆಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.  

‌ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ  ಕಾವೂರು  ಠಾಣೆಯ ಇನ್‌ಸ್ಪೆಕ್ಟರ್‌ ರಾಘವೇಂದ್ರ ಎಂ. ಬೈಂದೂರು ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ, ಹೆಡ್ ಕಾನ್ಸ್ಟೆಬಲ್‌  ನಾಗರತ್ನ, ಕಾನ್‌ಸ್ಟೆಬಲ್‌ಗಳಾದ ರಾಘವೇಂದ್ರ, ಪ್ರವೀಣ್, ರಿಯಾಜ್  ಅವರು ಅರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. 

ಪ್ರಕೃತಿ ಯು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.