ಸಮುದ್ರಪಾಲು (ಸಾಂದರ್ಭಿಕ ಚಿತ್ರ)
ಮೂಲ್ಕಿ: ಮದುವೆ ಸಮಾರಂಭದ ಸಲುವಾಗಿ ಮುಂಬೈನಿಂದ ಊರಿಗೆ ಬಂದಿದ್ದ ಒಬ್ಬ ಯುವಕ ಹಾಗೂ ಒಬ್ಬ ಬಾಲಕ ಸುರತ್ಕಲ್ ಎನ್‌ಐಟಿಕೆ ಬಳಿಯ ಕಡಲ ಕಿನಾರೆಯಲ್ಲಿ ಅರಬ್ಬಿ ಸಮುದ್ರಪಾಲಾಗಿದ್ದಾರೆ.
ಮುಂಬೈನ್ ಧ್ಯಾನ್ ಬಂಜನ್ (18) ಹಾಗೂ ಹನೀಶ್ ಕುಲಾಲ್ (15) ನೀರುಪಾಲಾದವರು. ಇವರಲ್ಲಿ ಧ್ಯಾನ್ ಅವರ ಮೃತದೇಹ ಪತ್ತೆಯಾಗಿದೆ. ಹನೀಶ್‌ಗಾಗಿ ಹುಡುಕಾಟ ನಡೆಯುತ್ತಿದೆ. ಧ್ಯಾನ್ ಅವರು ಈಚೆಗಷ್ಟ ದ್ವಿತೀಯ ಪಿ.ಯು. ಶಿಕ್ಷಣ ಮುಗಿಸಿದ್ದರು. ಹನೀಶ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದರು.
ಮೂಡುಬಿದಿರೆಯ ಕಲ್ಯಾಣ ಮಂಟಪವೊಂದರಲ್ಲಿ ಬುಧವಾರ ಮದುವೆ ಸಮಾರಂಭವಿತ್ತು. ವಧು ಹಾಗೂ ವರ ಇಬ್ಬರೂ ಮುಂಬೈನವರು. ಮದುವೆ ಸಲುವಾಗಿ ಸೂರಿಂಜೆಯ ಮನೆ ಮೂಲಮನೆಗೆ ಮುಂಬೈನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿ 10 ಮಂದಿ ಐದು ದಿನಗಳ ಹಿಂದೆ ಬಂದಿದ್ದರು. ಏ.13ರಂದು ಮೆಹಂದಿ ಕಾರ್ಯಕ್ರಮ ನಡೆದಿತ್ತು.
ಮುಂಬೈನಿಂದ ಬಂದ ಕೆಲವರು ಮಂಗಳೂರಿನಲ್ಲಿ ಹೇರ್ ಕಟಿಂಗ್ಸ್ ಮಾಡಿಸಿ ಸುರತ್ಕಲ್ ಬಳಿಯ ಕಡಲ ಕಿನಾರೆಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಕಿನಾರೆಯಲ್ಲಿ ವಿವಾಹದ ಫೋಟೊ ಶೂಟ್ ಕೂಡ ನಡೆಯುತ್ತಿತ್ತು. ಈ ವೇಳೆ ನೀರಿಗಿಳಿದಿದ್ದ ಧ್ಯಾನ್ ಹಾಗೂ ಹನೀಶ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾಗಿದ್ದರು. ತಕ್ಷಣವೇ ಜೀವರಕ್ಷಕ ಸಿಬ್ಬಂದಿ ಪ್ರದೀಪ್ ಆಚಾರ್ಯ ಅವರು ಧ್ಯಾನ್ ಅವರನ್ನು ದಡಕ್ಕೆ ಎಳೆದುತಂದರು. ಅವರನ್ನು ತಕ್ಷಣವೇ ಸುರತ್ಕಲ್‌ನ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಹನೀಶ್ ಶೋಧ ಕಾರ್ಯದಲ್ಲಿ ಜೀವರಕ್ಷಕ ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ದುರ್ಘಟನೆಯ ಬಳಿಕ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಆವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.