ADVERTISEMENT

ಮಂಗಳೂರು | ಮಳೆ ನೀರು ಹರಿವಿಗೆ ಇಲ್ಲ ಸಮರ್ಪಕ ವ್ಯವಸ್ಥೆ: ನಿವಾಸಿಗಳ ಸಂಕಷ್ಟ

ಪ್ರವೀಣ್‌ ಕುಮಾರ್‌ ಪಿ.ವಿ
Published 1 ಮೇ 2025, 6:24 IST
Last Updated 1 ಮೇ 2025, 6:24 IST
<div class="paragraphs"><p>ಕಂರ್ಭಿಸ್ಥಾನ ದ್ವಾರದ ಬಳಿ ಜಪ್ಪಿನಮೊಗರು ರಸ್ತೆಯು ರಾಷ್ಟ್ರೀಯ ಹೆದ್ದಾರಿಯನ್ನು ಸೇರುವಲ್ಲಿ&nbsp; ವಾಹನ ದಟ್ಟಣೆ ಪದೇ ಪದೇ ಮರುಕಳಿಸುತ್ತದೆ</p></div>

ಕಂರ್ಭಿಸ್ಥಾನ ದ್ವಾರದ ಬಳಿ ಜಪ್ಪಿನಮೊಗರು ರಸ್ತೆಯು ರಾಷ್ಟ್ರೀಯ ಹೆದ್ದಾರಿಯನ್ನು ಸೇರುವಲ್ಲಿ  ವಾಹನ ದಟ್ಟಣೆ ಪದೇ ಪದೇ ಮರುಕಳಿಸುತ್ತದೆ

   

ಮಂಗಳೂರು: ತುಳುವಿನಲ್ಲಿ ‘ಜಪ್ಪು’ ಎನ್ನುವುದಕ್ಕೆ ನೀರು ಇಳಿದು ಹೋಗುವುದು ಎನ್ನುವ ಅರ್ಥವೂ ಇದೆ. ಜಪ್ಪಿನಮೊಗರು ವಾರ್ಡ್‌ನಲ್ಲಿ ಕಂಡುಬಂದ ಪ್ರಮುಖ ಸಮಸ್ಯೆಯೇ ಮಳೆನೀರು ಸರಾಗವಾಗಿ ಇಳಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು. ಕಿರಿದಾದ ರಸ್ತೆಗಳು, ಪಾದಚಾರಿ ಮಾರ್ಗಗಳ ಕೊರತೆಯಿಂದಾಗಿಯೂ ಈ ವಾರ್ಡ್‌ನ ನಿವಾಸಿಗಳು ಬವಣೆ ಎದುರಿಸುತ್ತಿದ್ದಾರೆ. 

ಮಳೆಗಾಲದಲ್ಲಿ ಎಕ್ಕೂರಿನಿಂದ ಜಪ್ಪಿನಮೊಗರು ಕಡೆಗೆ ಇಳಿಯುವಲ್ಲಿ, ಜಪ್ಪಿನಮೊಗರು ಬಸ್ ನಿಲ್ದಾಣದ ಆಸುಪಾಸಿನಲ್ಲಿ ದೊಂಪದ ಬಲಿ ನಡೆಯವ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡು ಮನೆಗಳ ಒಳಗೆ ನೀರು ಬರುತ್ತದೆ. ನೇತ್ರಾವತಿ ನದಿದಂಡೆಯಲ್ಲೇ ಇರುವ ಈ ವಾರ್ಡ್‌ನಲ್ಲಿ ಕಳೆದ ಮಳೆಗಾಲದಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿತ್ತು. ದಶಕಗಳಿಂದ ಈ ಸಮಸ್ಯೆ ಪದೇ ಪದೇ ಎದುರಾಗುತ್ತಿದ್ದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

ಜಪ್ಪಿನಮೊಗರು ಕಂರ್ಭಿಸ್ಥಾನ ದೈವಸ್ಥಾನದ ದ್ವಾರದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ 66–ಬಜಾಲ್ ಸಂಪರ್ಕ ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಆದರೆ ಅದರ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ.

ಹಿಂದೆಲ್ಲ ಈ ಪ್ರದೇಶ ಗದ್ದೆಗಳಿಂದ ಕೂಡಿತ್ತು. ಮಕ್ಕಳು ಗದ್ದೆಯಲ್ಲೇ ಆಡಿಕೊಂಡಿದ್ದರು. ಈಗ ಅಲ್ಲೆಲ್ಲ ಮನೆಗಳಾಗಿವೆ. ಆಡುವುದಕ್ಕೂ ಮೈದಾನ ಇಲ್ಲ. ಏನೇ ಸಾರ್ವಜನಿಕ ಕಾರ್ಯಕ್ರಮ ಮಾಡುವುದಕ್ಕೂ ವ್ಯವಸ್ಥೆ ಇಲ್ಲ. ಶಾಲೆಯ ಮುಂದೊಂದು ಪುಟ್ಟ ಮೈದಾನವಿದೆಯಾದರೂ ಅದು ಖಾಸಗಿ ಸ್ಥಳದಲ್ಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆಯಾದರೂ ಈಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ದಿನೇಶ್‌ ಶೆಟ್ಟಿ.

ವಾರ್ಡ್‌ಗೆ ಸಿಟಿ ಬಸ್‌ಗಳ ಸೌಕರ್ಯವಿದೆ. ಆದರೆ ಭಾನುವಾರ ಸಿಟಿ ಬಸ್‌ಗಳು ಸಂಚರಿಸುವುದು ಕಡಿಮೆ. ಆಗ ಮಂಗಳೂರಿಗೆ ಹೋಗಿ ಬರಲು ಸಮಸ್ಯೆ ಆಗುತ್ತದೆ. ಪ್ರಸ್ತುತ್ ಸಿಟಿ ಬಸ್‌ಗಳು ಜೆಎಂ.ರೋಡ್‌ನಿಂದ ಮಾರ್ಗನ್ಸ್‌ ಗೇಟ್ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ತಲುಪುತ್ತಿದ್ದವು. ಮೋರ್ಗನ್ಸ್‌ ಗೇಟ್‌ ಬಳಿ ರೈಲ್ವೆ ಕೆಳಸೇತುವೆ ಸಲುವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡ ಬಳಿಕ ಸ್ಟೇಟ್‌ಬ್ಯಾಂಕ್‌ಗೆ ಸುತ್ತಿಬಳಸಿ ಸಾಗಬೇಕಾಗಿದೆ ಎಂಬುದು ಸ್ಥಳೀಯರ ಅಳಲು. 

ಪಡೀಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯ ನೂತನ ಸಂಕೀರ್ಣ ಆರಂಭವಾದ ಬಳಿಕ ಬಸ್‌ಗಳು ಜೆಎಂ ಮಾರ್ಗದಲ್ಲಿ ಕೊನೆಯ ನಿಲುಗಡೆ ನೀಡುವ ಬಸ್‌ಗಳು ಪಡೀಲ್‌ವರೆಗೂ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಜಪ್ಪಿನಮೊಗರು ಮುಖ್ಯರಸ್ತೆ ಕಂರ್ಭಿಸ್ಥಾನ ದ್ವಾರದ ಬಳಿ  ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ಇಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಪದೇ ಪದೇ ಉಂಟಾಗುತ್ತದೆ. ಇದರಿಂದ ಸ್ಥಳೀಯರು ಹೈರಾಣಾಗಿದ್ದಾರೆ. 

ಈ ವಾರ್ಡ್‌ನಲ್ಲಿರುವ ಕಂರ್ಭಿಸ್ಥಾನ ಕೆರೆ ಸುಸ್ಥಿತಿಯಲ್ಲಿದೆ. ಇದನ್ನು ಸೀನಿಯರ್ ಚೇಂಬರ್‌ ಇಂಟರ್‌ ನ್ಯಾಷನಲ್‌ ನೆರವಿನಿಂದ ಅಭಿವೃದ್ಧಿಪಡಿಸಲಾಗಿದ್ದು, ನೀರೂ ಸ್ವಚ್ಛವಾಗಿದೆ.

ಅಕ್ರಮ ಮರಳುಗಾರಿಕೆ ಅವ್ಯಾಹತ:

ಜಪ್ಪಿನಮೊಗರು ವಾರ್ಡ್‌ಗೆ ತಾಗಿಕೊಂಡಿರುವ ನೇತ್ರಾವತಿ ನದಿಯು ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿದೆ. ಆದರೂ ಈಲ್ಲಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ಈಗಲೂ ಅವ್ಯಾಹತವಾಗಿ ನಡೆಯುತ್ತದೆ. ಕತ್ತಲಾಗುತ್ತಿದ್ದಂತೆಯೇ ಮರಳು ತುಂಬಿದ ಲಾರಿಗಳ ಸಂಚಾರ ಇಲ್ಲಿ ಮಾಮೂಲಿ ಎಂದು ಸ್ಥಳೀಯರು ತಿಳಿಸಿದರು. 

ಜಪ್ಪಿನಮೊಗರು ವಾರ್ಡ್‌ನಲ್ಲಿರುವ ಕಂರ್ಭಿಸ್ಥಾನ ಕೆರೆ

ಪ್ರಮುಖ ಬೇಡಿಕೆಗಳು

  • ಆಟದ ಮೈದಾನ ಬೇಕು ಪ್ರಮುಖ ರಸ್ತೆಗಳಿಗೆ ಪಾದಚಾರಿ ಮಾರ್ಗ ನಿರ್ಮಿಸಬೇಕು

  • ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮಳೆನೀರು ಚರಂಡಿ ನಿರ್ಮಿಸಬೇಕು

  • ಜಪ್ಪಿನಮೊಗರು ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿ ವಾಹನ ದಟ್ಟಣೆ ನಿವಾರಣೆಗೆ ಕ್ರಮವಹಿಸಬೇಕು

ಪಾಲಿಕೆಯ ರಸ್ತೆಗಳು ಹಾಗೂ ಮಳೆನೀರು ಹರಿಯುವ ಚರಂಡಿಗಳು ಒತ್ತುವರಿಯಾಗಿವೆ. ಒತ್ತುವರಿ ತೆರವುಗೊಳಿಸಬೇಕು. ಮುಂದೆಂದೂ ಒತ್ತುವರಿಗೆ ಅವಕಾಶ ಕಲ್ಪಿಸಬಾರದು
ಉದಯಚಂದ್ರ ರೈ ಜಪ್ಪಿನಮೊಗರು ನಿವಾಸಿ
ವಾರ್ಡ್‌ನ ವಿಶೇಷ
ಪಾಲಿಕೆಯ ವಿಸ್ತಾರವಾದ ವಾರ್ಡ್‌ಗಳಲ್ಲಿ ಜಪ್ಪಿನಮೊಗರು ಕೂಡ ಒಂದು. ಪಾಲಿಕೆಯ ದಕ್ಷಿಣದ ತುತ್ತ ತುದಿಯ ವಾರ್ಡ್‌ ಇದು. ಪಾಲಿಕೆ ವ್ಯಾಪ್ತಿಯಲ್ಲಿ ಜನವಸತಿ ಇರುವ ಅತಿ ದೊಡ್ಡ ದ್ವೀಪ ಆಡಂ ಕುದ್ರು ಈ ವಾರ್ಡ್‌ನಲ್ಲೇ ಇದೆ. ರಾಷ್ಟ್ರೀಯ ಹೆದ್ದಾರಿ 66 ಈ ವಾರ್ಡ್‌ ಮೂಲಕ ಹಾದುಹೊಗಿದೆ. ನಗರದ ಹೊರವಲಯದಲ್ಲಿದ್ದರೂ ದಶಕದಿಂದ ಈಚೆಗೆ ಈ ವಾರ್ಡ್‌ ವಾಣಿಜ್ಯವಾಗಿಯೂ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿದೆ. ಅನೇಕ ಶಿಕ್ಷಣ ಸಂಸ್ಥೆಗಳು, ಸಭಾಂಗಣಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಕಂರ್ಭಿಸ್ಥಾನ ವೈದ್ಯನಾಥ ದೈವಸ್ಥಾನ, ಗುರುವನ, ಮಲ್ಲಿಕಾರ್ಜುನ ದೇವಸ್ಥಾನ, ಆದಿಮಾಯೆ ದೇವಸ್ಥಾನಗಳು ಇಲ್ಲಿವೆ.

‘ಪ್ರವಾಹ ಹಾವಳಿ ಬಹುತೇಕ ನಿವಾರಣೆ’

ಮಳೆಗಾಲದಲ್ಲಿ ಪ್ರವಾಹ ಕಾಣಿಸಿಕೊಳ್ಳುತ್ತಿದ್ದ ಬಹುತೇಕ ಕಡೆ ಶಾಸಕರ ಅನುದಾನದಿಂದ ತಡೆಗೋಡೆ ನಿರ್ಮಿಸಲಾಗಿದ್ದು, ಈ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ವಾರ್ಡ್‌ನ ದ್ವಾರದ ಬಳಿ ಹೆದ್ದಾರಿಯ ಮಟ್ಟಕ್ಕೆ ಸೇತುವೆ ನಿರ್ಮಿಸಲಾಗಿದ್ದು, ಜಪ್ಪಿನಮೊಗರು ಬಜಾಲು, ಪಡೀಲ್‌ ಕಡೆಗೆ ಹೋಗುವ ವಾಹನ ಸವಾರರಿಗೆ ಅನುಕೂಲವಾಗಿದೆ.

ಎಕ್ಕೂರು ಭಾಗದಲ್ಲಿ ಕೆವಿಕೆ ಪಾರ್ಕ್, ಆಟದ ಮೈದಾನ, ರಂಗಮಂದಿರ ಜಾರದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಕಂರ್ಭಿಸ್ಥಾನ ಆದಿಮಾಯ ದೇವಸ್ಥಾನ, ನಾರಾಯಣ ಗುರುಮಂದಿರ ತೋಚಿಲ ದೈವಸ್ಥಾನ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನ, ಗುರುವನ ದೇವಸ್ಥಾನ, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಾಸಕರ ಅನುದಾನದಿಂದ ಮೇಲ್ಚಾವಣಿ ನಿರ್ಮಿಸಲಾಗಿದೆ.  ಕಂರ್ಭಿಸ್ಥಾನ ದೈವಸ್ಥಾನದ ಕೆರೆ ಹಾಗೂ ತರದೋಲ್ಯ ಕೆರೆಯ ಅಭಿವೃದ್ಧಿಪಡಿಸಲಾಗಿದೆ. ಉಳ್ಳಾಲ ಹೊಯ್ಗೆ ‍ಪ್ರದೇಶಕ್ಕ ತೂಗು ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ

- ವೀಣಾಮಂಗಳಾ, ನಿಕಟಪೂರ್ವ ಕಾರ್ಪೊರೇಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.