
ಪುರುಷೋತ್ತಮ ಬಿಳಿಮಲೆ
ಮಂಗಳೂರು: ‘ಯಕ್ಷಗಾನ ಕಲಾವಿದರಿಗೆ ಸಂಬಂಧಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ ಹೇಳಿಕೆಯಿಂದ ಯಕ್ಷಗಾನ ವಲಯಕ್ಕೆ ಬಾಂಬ್ ಹಾಕಿದಂತಾಗಿದೆ. ಎಲ್ಲ ಕಲಾವಿದರನ್ನು ಕೆಟ್ಟ ದೃಷ್ಟಿಯಿಂದ ನೋಡುವ ಸನ್ನಿವೇಶ ಎದುರಾಗಿದೆ. ಕಲಾವಿದರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಸಹಿಸಲಾಗದು’ ಎಂದು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಾಂಸ್ಕೃತಿಕ ಪ್ರಕೋಷ್ಠದ ಅಧ್ಯಕ್ಷ ಹಾಗೂ ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಹೇಳಿದರು.
ಬಿಳಿಮಲೆ ಅವರು ಯಕ್ಷಗಾನ ಕಲಾವಿದರ ಸಲಿಂಗಕಾಮಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಗೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಒಬ್ಬ ಕಲಾವಿದನಾಗಿ ನನಗಂತೂ ಇಂತಹದ್ದು ಅನುಭವಕ್ಕೆ ಬಂದಿಲ್ಲ. ಈ ಹೇಳಿಕೆಗೆ ಬಿಳಿಮಲೆ ಅವರು ಬೇಷರತ್ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
‘ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆಯೂ ಮಹತ್ತರವಾದುದು. ಬಿಳಿಮಲೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳಂಕ ತಂದಿದ್ದಾರೆ. ಅಂತಹ ವ್ಯಕ್ತಿಯನ್ನು ಆ ಹುದ್ದೆಯಲ್ಲಿ ಸರ್ಕಾರ ಕುಳ್ಳಿರಿಸಿದ್ದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಶಾಸಕ ಡಾ.ವೈ.ಭರತ್ ಶೆಟ್ಟಿ, ‘ವೈಚಾರಿಕತೆ ಹೆಸರಿನಲ್ಲಿ ಆಚಾರ ವಿಚಾರಗಳಿಗೆ, ನೆಲದ ಸಂಸ್ಕಾರ, ಸಂಸ್ಕೃತಿಗೆ ಧಕ್ಕೆ ತರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ಹೇಳಿಕೆಯು ಅದರ ಮುಂದುವರಿದ ಭಾಗ. ಬಿಳಿಮಲೆ ಅವರು ನಿರ್ದಿಷ್ಟ ವ್ಯಕ್ತಿ ಕುರಿತಾಗಿ ನೀಡಿದ ಹೇಳಿಕೆ ಇದಲ್ಲ. ಯಕ್ಷಗಾನವನ್ನೇ ಗುರಿಯಾಗಿಸಿ ಹೇಳಿದ್ದಾರೆ’ ಎಂದು ಆರೋಪಿಸಿದರು.
‘ಎಷ್ಟೋ ಕಲಾವಿದರು ಯಕ್ಷಗಾನದ ಪಾತ್ರ ನಿರ್ವಹಣೆಯನ್ನು ವ್ರತದಂತೆ ಪರಿಭಾವಿಸುತ್ತಾರೆ. ಚೌಕಿಯಲ್ಲಿ ದೇವರ ಪೂಜೆಯ ಬಳಿಕವೇ ಕಲಾವಿದರು ರಂಗಸ್ಥಳಕ್ಕೆ ಹೋಗುತ್ತಾರೆ. ಬಿಳಿಮಲೆ ಅವರು ಈ ರೀತಿ ಹೇಳಿಕೆ ನೀಡಿದ ಬಳಿಕವೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಅವರ ವಿರುದ್ಧ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಬಿಜೆಪಿ ವಕ್ತಾರ ಅರುಣ್ ಜಿ. ಶೇಠ್, ಕಟೀಲು ಮೇಳದ ಭಾಗವತ ಸತೀಶ್ ಶೆಟ್ಟಿ ಬೋಂದೆಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.