ಪುತ್ತೂರು: ತಾಲ್ಲೂಕಿನ ನರಿಮೊಗರು ಗ್ರಾಮದ ಸರ್ವೆ ಎಂಬಲ್ಲಿರುವ ರೈಲ್ವೆ ಮೇಲ್ಸೇತುವೆ ಸಮೀಪ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯ ಪಕ್ಕದಲ್ಲಿ ಹರಿಯುವ ಗೌರಿ ಹೊಳೆಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಷೋರೂಂ ಉದ್ಯೋಗಿ, ಕಡಬ ತಾಲ್ಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಅವರ ಪುತ್ರ ಸನ್ಮಿತ್ (21) ನಾಪತ್ತೆಯಾಗಿರುವ ಯುವಕ.
ರೈಲ್ವೆ ಮೇಲ್ಸೇತುವೆ ಸಮೀಪ ರಸ್ತೆ ಬದಿಯ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿ ಸನ್ಮಿತ್ ಅವರ ಸ್ಕೂಟರ್, ಹೆಲ್ಮೆಟ್, ರೈನ್‌ಕೋಟ್, ಮೊಬೈಲ್ ಪೋನ್, ಪರ್ಸ್, ಟಿಫಿನ್ ಬಾಕ್ಸ್ ಪತ್ತೆಯಾಗಿದ್ದು, ಆತ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ಕರ್ತವ್ಯ ನಿರ್ವಹಿಸಿದ್ದ ಅವರು, ತಂದೆಗೆ ಕರೆ ಮಾಡಿ ಮನೆಗೆ ತಲುಪುವಾಗ ರಾತ್ರಿ 10 ಗಂಟೆ ಆಗಬಹುದು ಎಂದು ತಿಳಿಸಿದ್ದರು. ರಾತ್ರಿ 9.30ರ ವೇಳೆ ಚಂದ್ರ ಗೌಡ ಅವರು ಕರೆಮಾಡಿ ವಿಚಾರಿಸಿದಾಗ ಷೋರೂಂನಲ್ಲೇ ಇದ್ದು, ಅರ್ಧ ಗಂಟೆಯೊಳಗೆ ಮನೆಗೆ ತಲುಪುವುದಾಗಿ ತಿಳಿಸಿದ್ದರು. ರಾತ್ರಿ 11 ಗಂಟೆಯಾದರೂ ಪುತ್ರ ಮನೆಗೆ ಬಾರದೆ ಇದ್ದಾಗ ಚಂದ್ರ ಗೌಡ ಅವರು ಸನ್ಮಿತ್‌ಗೆ ಹಲವು ಬಾರಿ ಕರೆ ಮಾಡಿದರೂ ಆತ ಮೊಬೈಲ್ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಅವರು ಹುಡುಕಾಟ ಆರಂಭಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಪ್ಯ ಠಾಣೆ ಪೊಲೀಸರು ರಾತ್ರಿ ಪರಿಶೀಲನೆ ನಡೆಸಿದರು.
ಸಂಪ್ಯ ಠಾಣೆಯ ಎಸ್ಐ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ ಸಂಪ್ಯ ಪೊಲೀಸ್ ಸಿಬ್ಬಂದಿ, ಪುತ್ತೂರು ಅಗ್ನಿಶಾಮಕ ದಳ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ಹೊಳೆಯಲ್ಲಿ ಸನ್ಮಿತ್‌ಗಾಗಿ ಸನ್ಮಿತ್ಗಾಗಿ ಹುಡುಕಾಟ ನಡೆಸಿದ್ದಾರೆ.
ಭಾರಿ ಮಳೆಯಿಂದಾಗಿ ಶುಕ್ರವಾರ ಗೌರಿ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಗೌರಿ ಹೊಳೆಯು ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಕುಮಾರಧಾರಾ ನದಿಗೆ ಸೇರುತ್ತಿದ್ದು, ಸನ್ಮಿತ್ ಹೊಳೆಗೆ ಹಾರಿದ್ದರೆ ಆತ ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಕುಮಾರಧಾರಾ ನದಿನೀರಿನಲ್ಲಿ ಉಪ್ಪಿನಂಗಡಿ ಕಡೆಗೆ ಸಾಗಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಸನ್ಮಿತ್ ನಾಪತ್ತೆಯಾಗಿರುವ ಕುರಿತು ಚಂದ್ರ ಗೌಡ ಅವರು ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ. ಕಳೆದ ವರ್ಷ ಬಿದ್ದು ಸನ್ಮಿತ್ ತಲೆಗೆ ಏಟಾಗಿತ್ತು. ಆತ ಚೇತರಿಸಿಕೊಂಡಿದ್ದರೂ ಆತನಿಗೆ ಮರೆವಿನ ಸಮಸ್ಯೆ ಇತ್ತು ಎಂದು ಅವರು ಪೊಲೀಸರಿಗೆ ನೀಡಿರುವ ನಾಪತ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.