ADVERTISEMENT

ಬಗೆಹರಿಯದ ಸಾಲ ಮನ್ನಾ ಗೊಂದಲ; ಸಾಲದ ಕುಣಿಕೆ, 2 ತಿಂಗಳಲ್ಲಿ 7 ರೈತರ ಆತ್ಮಹತ್ಯೆ

ವಿನಾಯಕ ಭಟ್ಟ‌
Published 20 ಅಕ್ಟೋಬರ್ 2018, 11:22 IST
Last Updated 20 ಅಕ್ಟೋಬರ್ 2018, 11:22 IST

ದಾವಣಗೆರೆ: ಮತ್ತೆ ಕಾಡಿದ ಬರ, ಬೆಳೆಗೆ ಸಿಗದ ಬೆಲೆ, ಬಗೆಹರಿಯದ ಸಾಲ ಮನ್ನಾ ಗೊಂದಲಗಳಿಂದ ಹಾಗೂ ಸಾಲ ತೀರಿಸಲಾಗದೆ ಅನ್ನದಾತರ ಆತ್ಮಹತ್ಯೆ ಪರ್ವ ಜಿಲ್ಲೆಯಲ್ಲಿ ಮುಂದುವರಿದಿದೆ.

ಎರಡು ತಿಂಗಳ (60 ದಿನಗಳಲ್ಲಿ) ಅವಧಿಯಲ್ಲಿ ಒಬ್ಬ ರೈತ ಮಹಿಳೆ ಸೇರಿ ಜಿಲ್ಲೆಯ ಏಳು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಇವರೆಲ್ಲರೂ ಬಹುತೇಕ ಸಾಲದ ಹೊರೆಯಿಂದ ಬಳಲುತ್ತಿದ್ದರು. ಅಕ್ಟೋಬರ್‌ನಲ್ಲಿ ಇಬ್ಬರು, ಸೆಪ್ಟೆಂಬರ್‌ನಲ್ಲಿ ಮೂವರು ಹಾಗೂ ಆಗಸ್ಟ್‌ನಲ್ಲಿ ಇಬ್ಬರು ರೈತರು ಸಾವಿಗೆ ಶರಣಾಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.

ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ₹ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರೂ ಇದರ ಪ್ರಕ್ರಿಯೆ ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನೂ ರೈತರ ಪಟ್ಟಿ ತಯಾರಿಸಲಾಗುತ್ತಿದ್ದು, ಸಾಲ ಮನ್ನಾ ಹಣ ಸರ್ಕಾರದಿಂದ ಬರಲು ಕನಿಷ್ಠ ಎರಡು ತಿಂಗಳಾದರೂ ಆಗಬಹುದು. ಹೀಗಾಗಿ ಯಾವಾಗ ‘ಋಣ ಮುಕ್ತ’ ಆಗುತ್ತೇವೆಯೋ ಎಂದು ದಾರಿ ಕಾಯುತ್ತಿರುವ ರೈತರ ಪಾಲಿಗೆ ಇನ್ನೂ ಆ ಗಳಿಗೆ ಕೂಡಿ ಬಂದಿಲ್ಲ.

ADVERTISEMENT

ಸಾಲ ಮಾಡಿ ಬಿತ್ತಿದ್ದ ಮೆಕ್ಕೆಜೋಳ ಬೆಳೆಯೂ ಕೈಕೊಟ್ಟಿದೆ. ಮಾರುಕಟ್ಟೆಯಲ್ಲೂ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ಇಂಥ ಸಂದರ್ಭದಲ್ಲಿ ಸಾಲ ಮಾಡಿದ ರೈತರು ಹತಾಶರಾಗಿ ಸಾವಿನ ಮೊರೆಹೋಗುತ್ತಿದ್ದಾರೆ.

‘ಜಿಲ್ಲೆಯಲ್ಲಿ ಈ ವರ್ಷ ಏ‍ಪ್ರಿಲ್‌ನಿಂದ ಅಕ್ಟೋಬರ್‌ 6ರವರೆಗೆ 22 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಈಗಾಗಲೇ 9 ಪ್ರಕರಣಗಳಲ್ಲಿ ಮೃತ ರೈತರ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ಹಣ ಪಾವತಿಸಲಾಗಿದೆ. 12 ಪ್ರಕರಣಗಳು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯ ಆತ್ಮಹತ್ಯೆ ಪರಿಹಾರ ನಿರ್ಧಾರ ಸಮಿತಿ ಎದುರು ವಿಚಾರಣೆ ಹಂತದಲ್ಲಿವೆ. ಒಂದು ಪ್ರಕರಣವನ್ನು ತಿರಸ್ಕರಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹಣ ಕೊಡುವವರೆಗೂ ರೈತ ಸಾಲಗಾರನೇ’

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಒಂದು ಕಡೆ ರೈತರಿಗೆ ‘ಋಣಮುಕ್ತ’ ಪತ್ರ ಕೊಡುವುದಾಗಿ ಭರವಸೆ ನೀಡುತ್ತಿದ್ದಾರೆ; ಇನ್ನೊಂದು ಕಡೆ ಮೂರ್ನಾಲ್ಕು ವರ್ಷಗಳಲ್ಲಿ ಬ್ಯಾಂಕಿಗೆ ಹಣ ಪಾವತಿಸುವುದಾಗಿ ಹೇಳುತ್ತಿದ್ದಾರೆ. ಎಲ್ಲಿಯವರೆಗೆ ಸರ್ಕಾರ ಬ್ಯಾಂಕಿಗೆ ಹಣ ಬಿಡುಗಡೆ ಮಾಡುವುದಿಲ್ಲವೋ ಅಲ್ಲಿಯವರೆಗೂ ರೈತ ಸಾಲಗಾರನಾಗಿಯೇ ಇರುತ್ತಾನೆ. ಹಣ ಕಟ್ಟಿಲ್ಲ ಎಂದು ಬ್ಯಾಂಕಿನವರು ಆರ್‌ಬಿಐ ನಿಯಮಾವಳಿ ಪ್ರಕಾರ ರೈತರಿಗೆ ನೋಟಿಸ್‌ ಕೊಡುತ್ತಾರೆ. ಆತಂಕಗೊಂಡ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಅಭಿಪ್ರಾಯಪಟ್ಟರು.

ಅಂಕಿ–ಅಂಶ (2018ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ)

22 ಆತ್ಮಹತ್ಯೆ ಮಾಡಿಕೊಂಡ ರೈತರು

9 ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ವಿತರಣೆ

12 ವಿಚಾರಣೆ ಬಾಕಿ ಉಳಿದ ರೈತರ ಆತ್ಮಹತ್ಯೆ ಪ್ರಕರಣಗಳು

1 ಪರಿಹಾರ ನೀಡಲು ತಿರಸ್ಕರಿಸಿದ ರೈತ ಆತ್ಮಹತ್ಯೆ ಪ್ರಕರಣ

ಆತ್ಮಹತ್ಯೆ ಮಾಡಿಕೊಂಡ ರೈತರ ವಿವರ

ದಿನಾಂಕ ರೈತ ಗ್ರಾಮ ತಾಲ್ಲೂಕು

ಅಕ್ಟೋಬರ್‌9 ರವಿನಾಯ್ಕ ಯರಬಳ್ಳಿ ತಾಂಡಾ ಹರಪನಹಳ್ಳಿ

ಅಕ್ಟೋಬರ್‌ 1 ಹನುಮಂತಪ್ಪ ಗಡೆಕಟ್ಟೆ ನ್ಯಾಮತಿ

ಸೆಪ್ಟೆಂಬರ್‌ 26 ನಿಂಗಪ್ಪ ಕುಕ್ಕವಾಡ ದಾವಣಗೆರೆ

ಸೆಪ್ಟೆಂಬರ್‌ 8 ಸೋವಿಬಾಯಿ ವಿಜಯಪುರ ಹೊನ್ನಾಳಿ

ಸೆಪ್ಟೆಂಬರ್‌ 5 ಮಠದ ಕೊಟ್ರಯ್ಯ ಮತ್ತಿಹಳ್ಳಿ ಹರಪನಹಳ್ಳಿ

ಆಗಸ್ಟ್‌ 31 ನಿಚ್ಚವ್ವನಹಳ್ಳಿ ದುರುಗಪ್ಪ ಕಂಚಿಕೆರೆ ಹರಪನಹಳ್ಳಿ

ಆಗಸ್ಟ್‌ 24 ಕಲ್ಲೇಶ್ವರಪ್ಪ ಚದುರುಗೊಳ್ಳ ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.