ADVERTISEMENT

ವಿದ್ಯಾರ್ಥಿಗಳಿಗೆ ಕ್ರಿಕೆಟ್ ಜ್ವರ: ಶಿಕ್ಷಕರಿಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:40 IST
Last Updated 24 ಮಾರ್ಚ್ 2011, 8:40 IST

ನ್ಯಾಮತಿ: ಮಾರ್ಚ್-ಏಪ್ರಿಲ್ ತಿಂಗಳು ಬಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಜ್ವರ ಬರುವುದು ಸಹಜ, ಆದರೆ, ಈ ಬಾರಿ ವಿದ್ಯಾರ್ಥಿಗಳಿಗೆ ವಿಶ್ವಕಪ್ ಕ್ರಿಕೆಟ್-2011ರ ಜ್ವರ ಕಂಡು ಬಂದಿರುವುದರಿಂದ ಶಿಕ್ಷಕರು, ಪೋಷಕರು ಪರದಾಡುವಂತಾಗಿದೆ.

ಈಗಾಗಲೇ ಪಿಯ ಪರೀಕ್ಷೆ ಆರಂಭವಾಗಿದ್ದು, ಏಪ್ರಿಲ್ 1ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗುತ್ತಿವೆ. ಉತ್ತಮ ಫಲಿತಾಂಶ ತರಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ವಹಿಸಿದ್ದಾರೆ. ಆದರೆ, ಕೆಲವು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶಾಲೆಗೆ ಬರದೇ ಕ್ರಿಕೆಟ್ ಆಟ-ನೋಟ ಶುರು ಮಾಡಿರುವುದು ಕಡಿಮೆ ಫಲಿತಾಂಶ ಬರುವ ಶಾಲೆಗಳ ಶಿಕ್ಷಕರು ಕಂಗಾಲಾಗುವಂತೆ ಮಾಡಿದೆ. 

 ನ್ಯಾಮತಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸುಮಾರು ನೂರೊಂದು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದು, ಇಅವರಲ್ಲಿ ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ನಡೆಸಲು ಶಿಕ್ಷಕರು ಸಿದ್ಧತೆ ನಡೆಸಿದ್ದರೆ, ತರಗತಿಗೆ ಬೆರಳಣೆಕೆಯಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಕ್ರಿಕೆಟ್ ನೋಡುತ್ತಾ ಸಮಯ ಹಾಳು ಮಾಡುತ್ತಿದ್ದಾರೆ, ಹೀಗಾದರೆ ಉತ್ತಮ ಫಲಿತಾಂಶ ಹೇಗೆ ತರುವುದು ಎಂಬ ಚಿಂತೆ ಇಲ್ಲಿಯ ಶಿಕ್ಷಕರದ್ದು.

ಬಾಲಕಿಯರ ಕಾಲೇಜು: ಇದೇ ಪರಿಸ್ಥಿತಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಯೂ ಇದ್ದು, ಪ್ರೌಡಶಾಲೆಯ ಕೆಲವು ಶಿಕ್ಷಕರು ಪ್ರತಿನಿತ್ಯ ವಿದ್ಯಾರ್ಥಿನಿಯರ ಮನೆಗೆ ಭೇಟಿ ನೀಡಿ ಓದಲು ಉತ್ತೇಜನ ನೀಡುತ್ತಿದ್ದೇವೆ ಎಂದು ಶಿಕ್ಷಕರು ತಿಳಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.