ADVERTISEMENT

ಹರಪನಹಳ್ಳಿ: ಪುರಸಭೆ ಸಾಮಾನ್ಯ ಸಭೆ.ಎಂಪಿಪಿಗೆ ಶ್ರದ್ಧಾಂಜಲಿ, ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:50 IST
Last Updated 16 ಫೆಬ್ರುವರಿ 2011, 9:50 IST

ಹರಪನಹಳ್ಳಿ: ಪುರಸಭೆಯ ಕಾನೂನು ತೊಡಕು ನಿವಾರಣೆಗೆ ಸಲಹೆಗಾರರ ನೇಮಕ ಹಾಗೂ ವಾಣಿಜ್ಯ ಮಳಿಗೆಗಳ ಹಾಲಿ ಬಾಡಿಗೆದಾರರಿಗೆ ಮುಂದುವರಿಸುವ ಕುರಿತು ಎರಡು ಅಜೆಂಡಾಗಳೊಂದಿಗೆ ಮಂಗಳವಾರ ನಡೆಯಬೇಕಿದ್ದ ಸಾಮಾನ್ಯ ಸಭೆ ಯಾವುದೇ ನಿರ್ಣಯಕ್ಕೆ ಬಾರದೆ ಕೇವಲ ಎಂಟೇ ನಿಮಿಷದಲ್ಲಿ ನೂತನ ಅಧ್ಯಕ್ಷ ಮಹಬೂಬ್ ಸಾಹೇಬ ಅವರ ಪ್ರಥಮ ಸಭೆ ಮುಗಿದು ಹೋಯಿತು.

ಸಭೆಗೆ ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಪಾಲ್ಗೊಳ್ಳುತ್ತಾರೆ ಎಂಬ ಪ್ರಕಟಣೆ ಸಭೆಗೂ ಮುನ್ನ 15ನಿಮಿಷದಲ್ಲಿ ಬದಲಾವಣೆಯಾಗಿ ಸಚಿವರು ಸಭೆಗೆ ಪಾಲ್ಗೊಳ್ಳಲಿಲ್ಲ. ನಂತರ 12.48ಕ್ಕೆ ಸಭೆ ಆರಂಭ ಆಯಿತು. ಸಂಪ್ರದಾಯದಂತೆ ಯೋಜನಾಧಿಕಾರಿ ಬಸವರಾಜ ಗೌರವಾನ್ವಿತ ಸದಸ್ಯರನ್ನು ಸ್ವಾಗತಿಸುತ್ತಿದ್ದಂತೆಯೇ, ಹಿರಿಯ ಸದಸ್ಯ ಡಿ. ಅಬ್ದುಲ್ ರಹಿಮಾನ್ ಮಧ್ಯಪ್ರವೇಶಿಸಿ, ಫೆ. 9ರಂದು ನಿಧನರಾದ ಈ ಭಾಗದ ಹಿರಿಯ ರಾಜಕಾರಣಿ ಎಂ.ಪಿ. ಪ್ರಕಾಶ್ ಅವರ ಆತ್ಮಕ್ಕೆ ಶಾಂತಿಕೋರಿ ಹಾಗೂ ಸಭೆಯಲ್ಲಿ ಯಾವುದೇ ಅಜೆಂಡಾ ಮಂಡಿಸದಂತೆ ಕೋರಿ ಸಂತಾಪ ಸೂಚಕ ಗೊತ್ತುವಳಿ ಮಂಡಿಸಿದರು.

ಸಭೆ ಸಮಾಜವಾದಿ, ಹಿರಿಯ ರಾಜಕೀಯ ಮುತ್ಸದ್ಧಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ನಿಧನದ ಗೌರವಾರ್ಥ ಒಂದು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸಿತು.
ನಂತರ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯ ಪಟೇಲ್ ಬೆಟ್ಟನಗೌಡ ಮಾತನಾಡಿ, ನಾಡುಕಂಡ ಅಪ್ರತಿಮ ರಾಜಕೀಯ ಮುತ್ಸದ್ಧಿ ಪ್ರಕಾಶ್ ನಿಧನ ರಾಜಕೀಯ ಕ್ಷೇತ್ರಕ್ಕೆ ಅಷ್ಟೇ ಅಲ್ಲ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಲೋಕದಲ್ಲಿಯೂ ಕತ್ತಲು ಆವರಿಸಿದೆ. ಸುಮಾರು ಮೂರು ದಶಕಗಳ ಕಾಲ ಸಂಪುಟ ದರ್ಜೆಯ ವಿವಿಧ ಖಾತೆಯ ಸಚಿವರಾಗಿ ಅತ್ಯಂತ ಸಮರ್ಥವಾಗಿ  ನಿಭಾಯಿಸಿದ್ದಾರೆ. ತತ್ವರಹಿತ ರಾಜಕಾರಣದ ನಡುವೆಯೂ ಪ್ರಕಾಶ್ ತಮ್ಮ ಮೌಲ್ಯಧಾರಿತ ರಾಜಕಾರಣದ ವಿಚಾರದಲ್ಲಿ ಎಂದೂ ರಾಜೀಯಾಗಲಿಲ್ಲ ಎಂದು ಗುಣಗಾನ ಮಾಡಿದರು.

ನಂತರ ಪುರಸಭೆಯ 22ವಾಣಿಜ್ಯ ಮಳಿಗೆಗಳನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ, ಹಾಲಿ ಬಾಡಿಗೆದಾರರಿಗೆ ಪರಿಷ್ಕೃತ ದರದ ಬಾಡಿಗೆಯೊಂದಿಗೆ ಮುಂದುವರಿಸುವ ಹಾಗೂ ಪುರಸಭೆಯ ಅಭಿವೃದ್ಧಿ ದೃಷ್ಟಿಯಿಂದ ಉದ್ಬವಿಸುವ ಕಾನೂನು ತೊಡಕುಗಳನ್ನು ನ್ಯಾಯಾಲಯದಲ್ಲಿ ಪರಿಹರಿಸಲು ಸಹಕಾರಿಯಾಗುವಂತೆ ಹಾಗೂ ಆಡಳಿತಾಧಿಕಾರಿ ಅವಧಿಯಲ್ಲಿ ನ್ಯಾಯಾಲಯದಲ್ಲಿ ಪುರಸಭೆಯ ಕಟ್ಲೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿರುವ ವಕೀಲ ಎಸ್.ಎಂ. ರುದ್ರಮುನಿಸ್ವಾಮಿ ಅವರ ನೇಮಕ - ಈ ಎರಡು ಪ್ರಸ್ತಾವಗಳಿಗೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಆದೇಶದ ಹಾಗೂ ಕಾನೂನು ಸಲಹೆಗಾರರ ನೇಮಕಾತಿ ಕುರಿತು ಸಮಗ್ರ ವಿವರಣೆ ನೀಡುವಂತೆ ಸದಸ್ಯ ಬೆಟ್ಟನಗೌಡ, ಪ್ರದೀಪ್, ಮಟ್ಟಿ ಮೃತ್ಯುಂಜಯ ಹಾಗೂ ಪರಶುರಾಮಪ್ಪ ಪಟ್ಟು ಹಿಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಸಮಗ್ರ ಮಾಹಿತಿಯ ವಿವರವನ್ನು ನೀಡಿ ಸಭೆ ನಡೆಸಲಾಗುವುದು. ಈಗ ಶ್ರದ್ಧಾಂಜಲಿ ಸಭೆಯೊಂದಿಗೆ ಸಭೆಯನ್ನು ಅನಿರ್ದಿಷ್ಟ ಕಾಲದವರೆಗೂ ಮುಂದೂಡಲಾಗಿದೆ ಎಂದು ಪ್ರಕಟಿಸಿದರು.ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮಿತ್ರಾ ಬಾಪೂಜಿ, ಪೌರಾಯುಕ್ತ ಬಿ.ಕೆ. ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.