ADVERTISEMENT

18 ಬೈಕ್‌ ಕಳವು: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 12:56 IST
Last Updated 6 ಜನವರಿ 2020, 12:56 IST
ವಶಪಡಿಸಿಕೊಂಡ ದ್ವಿಚಕ್ರವಾಹನಗಳ ಜತೆಗೆ ಪೊಲೀಸರು
ವಶಪಡಿಸಿಕೊಂಡ ದ್ವಿಚಕ್ರವಾಹನಗಳ ಜತೆಗೆ ಪೊಲೀಸರು   

ದಾವಣಗೆರೆ: ನಗರದಲ್ಲಿ ವಿವಿಧೆಡೆ ಬೈಕ್‌ಗಳ ಕಳವು ಮಾಡಿದ ಆರೋಪದಲ್ಲಿ ಇಬ್ಬರನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 18 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯನಗರ ಬಡಾವಣೆ ನಿವಾಸಿ ಆಟೊ ಚಾಲಕ ವಿನಾಯಕ ಟಿ.ಬಿ. (25), ರಾಜೀವ್‌ ಗಾಂಧಿ ಬಡಾವಣೆ ನಿವಾಸಿ ಹೋಟೆಲ್‌ ಕಾರ್ಮಿಕ ಸತೀಶ್‌ ಎ. (25) ಬಂಧಿತ ಆರೋಪಿಗಳು.

ಸ್ಪ್ಲೆಂಡರ್‌ ಪ್ರೊ ಬೈಕ್‌ನಲ್ಲಿ ಇವರಿಬ್ಬರು ಹೋಗುತ್ತಿದ್ದಾಗ ಬಡಾವಣೆ ಪೊಲೀಸರು ತಪಾಸಣೆ ನಡೆಸಲು ನಿಲ್ಲಿಸಿದ್ದರು. ಸಮಂಜಸ ದಾಖಲೆಗಳನ್ನು ಮತ್ತು ಉತ್ತರವನ್ನು ಆರೋಪಿಗಳು ನೀಡದೇ ಇದ್ದಿದ್ದರಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಬೈಕ್‌ ಕಳವು ಮಾಡಿಕೊಂಡು ಬಂದಿರುವ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ADVERTISEMENT

ನಗರದ ಪಿ.ಜೆ. ಬಡಾವಣೆ, ನಿಜಲಿಂಗಪ್ಪ ಬಡಾವಣೆ, ಎಂಸಿಸಿ ಬಿ ಬ್ಲಾಕ್, ಕುವೆಂಪು ನಗರ, ಕಾಯಿಪೇಟೆ, ಸಿದ್ಧವೀರಪ್ಪ ಬಡಾವಣೆ, ಆಂಜನೇಯ ಬಡಾವಣೆ, ರಂಗನಾಥ ಬಡಾವಣೆ, ಜಯನಗರ ಬಡಾವಣೆಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಬೈಕ್‌ಗಳು, ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ 6, ಕೆಟೆಜೆ ನಗರ ಮತ್ತು ಬಸವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಮೌಲ್ಯ ₹ 5.64 ಲಕ್ಷ ಮೌಲ್ಯವಾಗಿದೆ.

ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ. ರಾಜೀವ್‌ ಡಿವೈಎಸ್‌ಪಿ ನಾಗೇಶ್ ಐತಾಳ್, ದಕ್ಷಿಣ ವೃತ್ತ ನಿರೀಕ್ಷಕ ತಿಮ್ಮಣ್ಣ ಎನ್. ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಚಿದಾನಂದಪ್ಪ ಎಸ್.ಬಿ, ಮಹಮ್ಮದ್ ಜಕ್ರಿಯಾ, ಸಿಬ್ಬಂದಿ ಸಿದ್ದೇಶ್, ಹರೀಶ್, ಸೈಯದ್ ಅಲಿ, ಪುರುಷೋತ್ತಮ, ಅರುಣ ಕುಮಾರ, ವಿಶಾಲಾಕ್ಷಿ, ಕುಬೇಂದ್ರಪ್ಪ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.