ADVERTISEMENT

28ಕ್ಕೆ ಕುಂಚಿಟಿಗ ಜನಾಂಗದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:55 IST
Last Updated 16 ಫೆಬ್ರುವರಿ 2011, 9:55 IST

ದಾವಣಗೆರೆ: ಕುಂಚಿಟಿಗ ಸಮಾಜದ ಸಮಾವೇಶ-2011 ಹಾಗೂ 22ನೇ ಶ್ರೀವಿಜಯರಾಯ ಸಂಗಮೇಶ್ವರ ಜಯಂತೋತ್ಸವ ಫೆ. 28ರಂದು ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನಲ್ಲಿ ನಡೆಯಲಿದೆ ಎಂದು ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಹೊಸದುರ್ಗದ ಶಾಂತವೀರ ಸ್ವಾಮೀಜಿ ಹೇಳಿದರು.ಕುಂಚಿಟಿಗ ಸಮುದಾಯದ ಸಂಘಟನೆ ಹಾಗೂ ಹಂಚಿಹೋಗಿರುವ ಸಮಾಜಬಾಂಧವರನ್ನು ಒಗ್ಗೂಡಿಸುವ ದೃಷ್ಟಿಯಿಂದ ಸಮಾಜದ ಮೂಲ ಪುರುಷ ವಿಜಯರಾಯ ಸಂಗಮೇಶ್ವರರ ಜಯಂತಿಯ ಹೆಸರಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸ್ವಾಮೀಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

28ರಂದು ಬೆಳಿಗ್ಗೆ 11.30ಕ್ಕೆ ಸಮಾರಂಭ ಆರಂಭವಾಗಲಿದೆ. ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಬಸವಾಪಟ್ಟಣ, ಭಗೀರಥಪೀಠ, ಸಿಬಾರ, ಸೋಲೂರು ಸೇರಿದಂತೆ 13 ಕ್ಷೇತ್ರಗಳ ವಿವಿಧ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿವಂಗತ ಗೌಡರ ಸಿದ್ದಲಿಂಗಪ್ಪ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಚಿವ ಎಸ್.ಎ. ರವೀಂದ್ರನಾಥ್ ಎಸ್‌ವಿಎಸ್ ವಿದ್ಯಾಸಂಸ್ಥೆಗೆ ಭೂಮಿಪೂಜೆ ನಡೆಸಲಿದ್ದಾರೆ. ವಿಧಾನಸಭಾ ವಿರೋಧ ಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಮುದಾಯ ಭವನಕ್ಕೆ ಭೂಮಿಪೂಜೆ ಮಾಡಲಿದ್ದಾರೆ. ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷ ರಂಗನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಎಂ.ಪಿ. ರೇಣುಕಾಚಾರ್ಯ ಕುಂಚಿಟಿಗ ಮಠದ ವೆಬ್‌ಸೈಟ್‌ಗೆ ಚಾಲನೆ ನೀಡಲಿದ್ದಾರೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಬಿ.ವೈ. ರಾಘವೇಂದ್ರ, ಜನಾರ್ದನ ಸ್ವಾಮಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಸಮಾಜ ಬಾಂಧವರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.