ADVERTISEMENT

ಮಳೆಗೆ 490.20 ಹೆಕ್ಟೇರ್ ಬೆಳೆ ನಾಶ

ಹರಿಹರ ಹಾಗೂ ಹೊನ್ನಾಳಿಗಳಿಗೆ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಭೇಟೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:44 IST
Last Updated 9 ಆಗಸ್ಟ್ 2019, 19:44 IST
ಹರಿಹರದ ಗಂಗಾನಗರದಲ್ಲಿ ನೆರಹಾವಳಿಗೀಡಾದ ಪ್ರದೇಶವನ್ನು ಶುಕ್ರವಾರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಹಾಗೂ ಶಾಸಕ ಎಸ್‍. ರಾಮಪ್ಪ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು.
ಹರಿಹರದ ಗಂಗಾನಗರದಲ್ಲಿ ನೆರಹಾವಳಿಗೀಡಾದ ಪ್ರದೇಶವನ್ನು ಶುಕ್ರವಾರ ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ಹಾಗೂ ಶಾಸಕ ಎಸ್‍. ರಾಮಪ್ಪ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು.   

ಹರಿಹರ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಒಟ್ಟು 135 ಮನೆಗಳು ಹಾನಿಗೀಡಾಗಿ ₹11.91 ಲಕ್ಷ ಹಾಗೂ 490.20 ಹೆಕ್ಟೇರ್‍ ಕೃಷಿ ಭೂಮಿ ಜಲಾವೃತ್ತವಾಗಿದೆ. ನಷ್ಟಕ್ಕೀಡಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಹೇಳಿದರು.

ನಗರದ ಪ್ರವಾಹ ಪೀಡಿತ ಗಂಗಾನಗರ ಹಾಗೂ ಎಪಿಎಂಸಿ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಪ್ರಾರಂಭಿಸಿರುವ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಕೃತಿ ಪರಿಹಾರ ನಿಧಿಯಡಿಯಲ್ಲಿ ತಹಶೀಲ್ದಾರ್‍ ಖಾತೆಗಳಿಗೆ ಒಟ್ಟು ₹3.31ಕೋಟಿ ಅನುದಾನವನ್ನು ವರ್ಗಾಯಿಸಲಾಗದೆ. ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಹರಿಹರ ಹಾಗೂ ಹೊನ್ನಾಳಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನಿರಾಶ್ರಿತರಿಗೆ ಆಹಾರ ಹಾಗೂ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಚಿಕ್ಕಬಿದಿರೆ ಹಾಗೂ ಸಾರಥಿ ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ತಾತ್ಕಲಿಕವಾಗಿ ಬೋಟ್‍ ವ್ಯವಸ‍್ಥೆ ಮಾಡಲಾಗಿದೆ ಎಂದರು.

ನೆರೆ ಪೀಡಿತರಿಗೆ ಶಾಶ್ವತ ಸುರಕ್ಷಿತ ಪ್ರದೇಶ ನೀಡಲಾಗುವುದು. ಸಾರಥಿ ಗ್ರಾಮದ ಸೇತುವೆ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ನೋಟಿಸ್‌ ಜಾರಿಗೊಳಿಸಿ, ತುರ್ತು ಕಾಮಗಾರಿಗೆ ಸೂಚನೆ ನೀಡಲಾಗುವುದು. ಜಿಲ್ಲೆಯ ತಾಲ್ಲೂಕಿನಲ್ಲಿ ಮುಂಜಾಗೃತ ಕ್ರಮವನ್ನು ಕೈಗೊಂಡಿದ್ದು, ಎಲ್ಲದಕ್ಕೂ ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.

ಶಾಸಕ ಎಸ್. ರಾಮಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ನಗರಸಭಾ ಸದಸ್ಯ ಎಸ್.ಎಂ. ವಸಂತ್, ಮಾಜಿ ಶಾಸಕ ಬಿ.ಪಿ. ಹರೀಶ್, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್ ರೆಹಾನ್ ಪಾಷಾ, ಪಿಎಸ್‍ಐ ಪ್ರಭು ಡಿ. ಕೆಳಗಿಮನೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.