ADVERTISEMENT

ದಾವಣಗೆರೆ | 57 ಕೆರೆಗಳ ತುಂಬಿಸುವ ಯೋಜನೆ ಆಮೆಗತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 6:48 IST
Last Updated 17 ಜುಲೈ 2023, 6:48 IST
ಜಗಳೂರು ತಾಲ್ಲೂಕಿನ ಬಿಳಿಚೋಡು ಸಮೀಪ 57 ಕೆರೆಗಳ ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು
ಜಗಳೂರು ತಾಲ್ಲೂಕಿನ ಬಿಳಿಚೋಡು ಸಮೀಪ 57 ಕೆರೆಗಳ ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು   

ಚಂದ್ರಶೇಖರ ಆರ್.

ದಾವಣಗೆರೆ: ಬರ ಪೀಡಿತ ಜಗಳೂರು ತಾಲ್ಲೂಕಿಗೆ ನೀರು ಹರಿಸಿ ರೈತರ ಬಾಳು ಹಸನಾಗಿಸುವ ಮಹತ್ವದ ‘57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ’ ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಿಲ್ಲ. ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ.

ಯೋಜನೆಯಡಿ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಮಾತ್ರ ನೀರು ಬಂದಿದೆ. ಉಳಿದ ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಆಮೆಗತಿಯಲ್ಲಿದೆ. ಕೆಲವು ಕಡೆ ಕಾಮಗಾರಿಯೇ ಆರಂಭವಾಗಿಲ್ಲ.

ADVERTISEMENT

₹ 660 ಕೋಟಿ ವೆಚ್ಚದ 57 ಕೆರೆ ತುಂಬಿಸುವ ಯೋಜನೆ ಈ ಭಾಗದ ಮಹಾತ್ವಾಕಾಂಕ್ಷೆ ಯೋಜನೆ. ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕನಸಿನ ಕೂಸು ಇದು. 2018ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿನ ಬೇಡಿಕೆಯಂತೆ ಈ ಯೋಜನೆ ಆರಂಭವಾಗಿತ್ತು.

ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಕನಸಿನ ಯೋಜನೆಯ ವಿಫಲವಾದ ನಂತರ, 57 ಕೆರೆಗಳ ಯೋಜನೆಯತ್ತ ರೈತರ ನಿರೀಕ್ಷೆ ಹೆಚ್ಚಿತ್ತು. ಆದರೆ ವರ್ಷಗಳೇ ಕಳೆದರೂ ಕನಸು ನನಸಾಗುತ್ತಿಲ್ಲ. ಈಚೆಗೆ ಯೋಜನೆಯ ಕಾಮಗಾರಿ ಚುರುಕುಗೊಳಿಸುವಂತೆ ಸಭೆ ನಡೆಸಿದ್ದ ಸಿರಿಗೆರೆ ಸ್ವಾಮೀಜಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದರು.

ತಾಲ್ಲೂಕಿನಲ್ಲಿ ಫ್ಲೋರೈಡ್‌ಯುಕ್ತ ನೀರು ಕುಡಿದು ವಯಸ್ಸು ಆಗುತ್ತಿದೆ. ಕೆರೆಗಳಿಗೆ ನೀರು ಬಂದರೆ ನಮ್ಮ ಜೀವನ ಹಸನಾಗಲಿದೆ. ನಮ್ಮ ಕಾಲ ಹೋಗಲಿ ಮಕ್ಕಳ ಕಾಲದಲ್ಲಾದರೂ ಯೋಜನೆ ಜಾರಿಯಾಗಬಹುದೇ ನೋಡಬೇಕು.
ಟಿ. ಚಿರಂಜೀವಿ, ರೈತ ಚಿಕ್ಕಮಲ್ಲನಹೊಳೆ

ಯೋಜನೆಯ ಕಾಮಗಾರಿಯ ಆಮೆಗತಿಗೆ ರೈತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಜಗಳೂರಿನಲ್ಲಿ ಪ್ರತಿವರ್ಷ ಮಳೆಯಾಗುವುದು ಕಡಿಮೆ. ಇದರಿಂದ ಮಹತ್ವದ ಈ ನೀರಾವರಿ ಯೋಜನೆಗೆ ಸಹಜವಾಗಿ ರೈತರಲ್ಲಿ ಆಶಾಭಾವ ಇತ್ತು. ಆದರೆ ಅದು ಸಾಕಾರಗೊಂಡಿಲ್ಲ.

ಸಿರಿಗೆರೆಶ್ರೀಗಳ ಬೇಡಿಕೆಯಂತೆ ಯೋಜನೆ ಜಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ₹ 260 ಕೋಟಿ ಅನುದಾನ ಮೀಸಲಿಟ್ಟಿದ್ದರು. ಬಳಿಕ ಮುಖ್ಯಮಂತ್ರಿ ಆಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅನುದಾನ ಹೆಚ್ಚಿಸಿದ್ದರು. ಬಳಿಕ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಯೋಜನೆಯ ಅನುದಾನವನ್ನು ₹ 660 ಕೋಟಿಗೆ ಹೆಚ್ಚಿಸಿ ರೈತರಿಗೆ ನೆರವಾಗಿದ್ದರು.

ಏನಿದು ಯೋಜನೆ:

ಜಗಳೂರು ವಿಧಾನಸಭಾ ಕ್ಷೇತ್ರದ ಒಟ್ಟು 57 ಕೆರೆಗಳು ಅಂದರೆ ಜಗಳೂರು ತಾಲ್ಲೂಕಿನ 51 ಹಾಗೂ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ಹರಿಸುವ ರೈತರ ಆಶಾಕಿರಣವಾದ ಯೋಜನೆ ಇದು. ದೀಟೂರು ಬಳಿಯ ಏತ ನೀರಾವರಿಯ ಪಂಪ್‌ಹೌಸ್‌ನಿಂದ ಹರಪನಹಳ್ಳಿ ತಾಲ್ಲೂಕಿನ ಚಟ್ನಹಳ್ಳಿಯ ಗುಡ್ಡದಲ್ಲಿ ಟ್ಯಾಂಕ್‌ ನಿರ್ಮಿಸಿ, ನೀರು ಹರಿಸಲಾಗುತ್ತದೆ. ಅಲ್ಲಿಂದ 33 ಕಿ.ಮೀ. ದೂರದ ನದಿಯಿಂದ ನೀರನ್ನು ಗುರುತ್ವಾಕರ್ಷಣ ಬಲದಿಂದ 57 ಕೆರೆಗಳಿಗೆ ಹರಿಸುವ ಏತ ನೀರಾವರಿ ಯೋಜನೆ ಇದು. ಈಗಾಗಲೇ ಚಟ್ನಹಳ್ಳಿಯ ಗುಡ್ಡದಲ್ಲಿ ಟ್ಯಾಂಕ್‌ ನಿರ್ಮಿಸಲಾಗಿದೆ. 

ಜಗಳೂರು ತಾಲ್ಲೂಕಿನ ಪ್ರಥಮ ಗ್ರಾಮ ತುಪ್ಪದಹಳ್ಳಿಯ ಕೆರೆಯಿಂದ 57 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ತುಪ್ಪದಹಳ್ಳಿಯಿಂದ ಆರಂಭವಾಗಿ ಜಗಳೂರು ಕೆರೆ, ಬಿಳಿಚೋಡು ಕೆರೆ, ಹಸಗೋಡು ಕರೆ, ಮಾರಿಕುಂಟೆ, ಗಡಿಮಾಕುಂಟೆ ಕೆರೆಯಿಂದ ತಾಲ್ಲೂಕಿನ ಕೊನೆಯ ಗ್ರಾಮ ಚಿಕ್ಕಮ್ಮಲಹಳ್ಳಿ ಕೆರೆ ಸೇರಿದಂತೆ 57 ಕೆರೆಗಳಿಗೆ ನೀರು ಹರಿಸುವ ಯೋಜನೆ. ಈ ಕೆರೆ ಆರಂಭದಿಂದ 60 ಕಿ.ಮೀ. ದೂರ ಇದೆ. ಇಲ್ಲಿಂದ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತದೆ. ಎಲ್ಲಾ ಕೆರೆಗಳಿಗೂ ಗುರುತ್ವಾಕರ್ಷಣ ಬಲದಿಂದಲೇ ನೀರು ಹರಿಯಲಿದೆ ಎಂಬುದು ಯೋಜನೆಯ ಅಧಿಕಾರಿಗಳ ಹೇಳಿಕೆ. 

ಅಯೋಧ್ಯೆ ರಾಮಮಂದಿರದ ವಿಷಯ ಪ್ರಸ್ತಾಪಿಸಿ ರಾಜಕೀಯ ಪಕ್ಷಗಳು ಮೊದಲು ಚುನಾವಣೆ ಎದುರಿಸುತ್ತಿದ್ದವು. ಈಗ ತಾಲ್ಲೂಕಿನಲ್ಲಿ 57 ಕೆರೆಗಳ ಯೋಜನೆಯೂ ಅದೇ ರೀತಿ ಆಗಿದೆ. ಆದರೆ ಫಲ ಸಿಕ್ಕಿಲ್ಲ.
ಬಸವರಾಜ್‌ ಟಿ., ರೈತ ಮರೇನಹಳ್ಳಿ

ಯೋಜನೆಯ ಮೊದಲ ಯಶಸ್ಸಿನಿಂದ ಆರಂಭದ ತುಪ್ಪದಹಳ್ಳಿ ಕೆರೆಗೆ ಮಾತ್ರ ಕಳೆದ ವರ್ಷ ನೀರು ಬಂದಿದೆ. ಮುಂದಿನ ಯಾವುದೇ ಕೆರೆಗೆ ನೀರು ಬಂದಿಲ್ಲ. ಉಳಿದ ಕೆರೆಗಳಿಗೆ ನೀರು ಹರಿಸುವ ಪೈಪ್‌ಲೈನ್‌ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಪೈಪ್‌ಗಳ ಕೊರತೆಯಿಂದ ಹಲವು ತಿಂಗಳುಗಳಿಂದ ಕಾಮಗಾರಿ ಸ್ಥಗಿತವಾಗಿದೆ. ಸೆಪ್ಟೆಂಬರ್‌ ತಿಂಗಳ ಹೊತ್ತಿಗೆ ತುಪ್ಪದಹಳ್ಳಿಯ ನಂತರದ 11 ಕೆರೆಗಳಿಗೆ ನೀರು ಹರಿಯಲಿದೆ ಎಂದು ಯೋಜನೆಯ ಉಸ್ತುವಾರಿ ಹೊತ್ತಿರುವ ಎಂಜಿನಿಯರ್‌ಗಳ ಹೇಳಿಕೆ.

ಯೋಜನೆಯ ವ್ಯಾಪ್ತಿಗೆ ತಾಲ್ಲೂಕಿನ ಹಲವು ಕೆರೆಗಳನ್ನು ಸೇರಿಸಿಲ್ಲ. ಜಗಳೂರಿನ ಪುರಾತನ ಹಾಗೂ ಅತಿ ದೊಡ್ಡ ಭರಮಸಮುದ್ರ ಕೆರೆಯನ್ನೇ ಕೈಬಿಡಲಾಗಿದೆ ಎಂಬ ಆರೋಪವೂ ಇದೆ.  

‘ಬರಪೀಡಿತ ತಾಲ್ಲೂಕಿನಲ್ಲಿ ಒಣಭೂಮಿ ನಂಬಿಕೊಂಡು ಕೃಷಿ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮೆಲ್ಲರಲ್ಲಿ ಆಶಾಕಿರಣ ಮೂಡಿಸಿದ ಯೋಜನೆ ಇದು. ಆದರೆ ವರ್ಷಗಳೇ ಕಳೆದರೂ ಯೋಜನೆ ಸಾಕಾರಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಕೇವಲ ಹೇಳಿಕೆಗಳಲ್ಲಿ ಯೋಜನೆಯ ಕಾಮಗಾರಿ ಮುಗಿಯುತ್ತಿದೆ ಎನ್ನುತ್ತಾರೆ. ವಾಸ್ತವದಲ್ಲಿ ಆಗಿಲ್ಲ. ಹಲವು ಶಾಸಕರು ಬಂದು ಹೋದರೂ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಚಿಕ್ಕಮಲ್ಲನಹೊಳೆ ರೈತ ಟಿ. ಚಿರಂಜೀವಿ ಬೇಸರಿಸಿದರು.

ಕೆಲ ಕೆರೆಗಳು ಯೋಜನೆಯಿಂದ ಕೈಬಿಡಲಾಗಿದೆ. ಭರಮಸಮುದ್ರ, ಹುಚ್ಚವ್ವನಹಳ್ಳಿ ಕೆರೆಗಳು ಯೋಜನೆಗೆ ಸೇರಿಲ್ಲ. ಕೆಲ ಕೆರೆಗಳ ಜಮೀನು ಒತ್ತುವರಿಯಾಗಿದ್ದು, ಆ ಪ್ರದೇಶದಲ್ಲಿ ಪೈಪ್‌ಲೈನ್‌ ಕಾಮಗಾರಿ ನಡೆಸಲು ತೊಡಕು ಇದು. ಆ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೆಲ ಕೆರೆಗಳು ಬೇರೆಯವರ ಹೆಸರಿನಲ್ಲಿ ಇರುವ ಕಾರಣ ಕಾಮಗಾರಿಗೆ ವೇಗ ಸಿಗುತ್ತಿಲ್ಲ. ಜನಪ್ರತಿನಿಧಿಗಳು ಕೇವಲ ವೋಟಿಗಾಗಿ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಾರೆ. ಬರದ ನಾಡಿನಲ್ಲಿ ಟ್ಯಾಂಕರ್‌ ನೀರಿಗೆ ಮುಗಿಬಿದ್ದ ದಿನಗಳು ಇವೆ. ಮಳೆ ಮರೀಚಿಕೆಯಾದ ನಮ್ಮ ಬದುಕು ಈಗಲಾದರೂ ಹಸನಾಗುವುದೇ ನೋಡಬೇಕು ಎಂದು ಆಶಾವಾದದಲ್ಲಿ ಹೇಳಿದರು ಅವರು.

‘ಯೋಜನೆ ತುರ್ತಾಗಿ ಆಗಬೇಕು. ಚುನಾವಣೆ ಸಮಯದಲ್ಲಿ ಕಾಮಗಾರಿಯ ವಿಷಯ ಮುನ್ನೆಲೆಗೆ ಬರುತ್ತದೆ. ಈ ಯೋಜನೆ ಪ್ರಸ್ತಾಪಿಸಿ ತಾಲ್ಲೂಕಿನಲ್ಲಿ ಇತರೆ ಅಭಿವೃದ್ಧಿ ಕಾಮಗಾರಿಗಳೂ ಆಗಲಿಲ್ಲ. ಜನರೂ ನೀರು ಬರುತ್ತದೆ ಎಂದು ಆಸೆಯಿಂದ ಬೇರೆ ಕಾಮಗಾರಿ ಬಗ್ಗೆ ಕೇಳಲಿಲ್ಲ. ಆದರೆ ನಮಗೆ ಸಿಕ್ಕಿದ್ದು ಮಾತ್ರ ನಿರಾಸೆ’ ಎಂದು ಮರೇನಹಳ್ಳಿ ರೈತ ಬಸವರಾಜ್‌ ಟಿ. ಅಳಲು ತೋಡಿಕೊಂಡರು.

ಚುನಾವಣೆಯಲ್ಲಿ ಮುನ್ನೆಲೆಗೆ ಬರುವ ಯೋಜನೆ

ಬಯಲು ಸೀಮೆಯ ಜಗಳೂರಿನಲ್ಲಿ ಜಲಾಶಯ ಇಲ್ಲ. ಯೋಜನೆಗೆ ಬಗ್ಗೆ ಅಪಾರ ನಿರೀಕ್ಷೆ ಇದೆ. ಗುರುತ್ವಾಕರ್ಷಣ ಬಲದಿಂದ ನೀರು ಹರಿಸುವ ಏತ ನೀರಾವರಿ ಯೋಜನೆ ವಿಧಾನಸಭೆ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಗೆ ಬರುತ್ತದೆ. ಬಳಿಕ ಅದು ಹಿನ್ನೆಲೆಗೆ ಸರಿಯುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಸೋಲು–ಗೆಲುವು ನಿರ್ಧರಿಸುವ ಯೋಜನೆ ಎಂಬ ಮಾತೂ ಇದೆ. 

220 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಮೂಲಕ ಗುರುತ್ವಾಕರ್ಷಣ ಬಲದಿಂದಲೇ ನೀರು ಹರಿಸುವ ಯೋಜನೆಯ ಇದು. ಆದರೆ ಇದು ಎಷ್ಟರಮಟ್ಟಿಗೆ ಕಾರ್ಯಸಾಧು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಯೋಜನೆಯ ಕಾಮಗಾರಿ ಪ್ರಗತಿಯಲ್ಲಿ ತುಪ್ಪದಹಳ್ಳಿ ಕೆರೆಗೆ ನೀರು ಬಂದಿದೆ. ಉಳಿದ 10 ಕೆರೆಗಳಿಗೆ ಜುಲೈ ಅಂತ್ಯದಲ್ಲಿ ನೀರು ಹರಿಸಲಾಗುವುದು. ಪೈಪ್‌ಲೈನ್‌ ಚೇಂಬರ್‌ ಹಾಗೂ ವಾಲ್ವ್ ಕಾಮಗಾರಿಗಳು ನಡೆಯುತ್ತಿವೆ. ಪೈಪ್‌ಗಳು ಪೂರೈಕೆಯಾಗದ ಕಾರಣ ಕಾಮಗಾರಿ ವಿಳಂಬವಾಗಿದೆ. ಜಗಳೂರು ಕೆರೆ ಸೇರಿದಂತೆ ಉಳಿದ 30 ಕೆರೆಗಳಿಗೆ ನೀರು ಹರಿಸಲು ಇನ್ನು 7 ಕಿ.ಮೀ. ಪೈಪ್‌ಲೈನ್‌ ಅಗತ್ಯವಿದೆ. ಪೈಪ್‌ಗಳು ಸರಬರಾಜಾದರೆ ಕಾಮಗಾರಿ ಆರಂಭಿಸಲಾಗುವುದು. ಸೆಪ್ಟೆಂಬರ್‌ನಲ್ಲಿ 30 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀಧರ್‌ ಮಾಹಿತಿ ನೀಡಿದರು.

7 ಕಿ.ಮೀಗೆ ಅಗತ್ಯವಾದ ಪೈಪ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಕಂಪನಿಯಿಂದ ಬರಬೇಕಿದೆ. ಮಳೆಗಾಲದ ಕಾರಣ ವಿಳಂಬವಾಗಿದೆ. ಕೆಲವೆಡೆ ರೈತರನ್ನು ಒಪ್ಪಿಸಿ ಅವರ ಜಮೀನಿನಲ್ಲಿ ಪೈಪ್‌ಲೈನ್‌ ಕಾಮಗಾರಿ ನಡೆಸಬೇಕಿದೆ. ಅವರಿಗೆ ಬೆಳೆ ಹಾನಿಗೆ ಪರಿಹಾರ ನೀಡಿ ಕಾಮಗಾರಿ ನಡೆಸಬೇಕು. ಹೀಗಾಗಿ ವಿಳಂಬವಾಗಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ. ಹರಪನಹಳ್ಳಿಯ 3 ಕೆರೆಗಳಿಗೂ ನೀರು ಹರಿಸಲು ತೊಂದರೆ ಇಲ್ಲ. ಅಲ್ಲಿ 5 ಕಿ.ಮೀ ಪೈಪ್‌ಲೈನ್‌ ಕಾಮಗಾರಿ ಬಾಕಿ ಇದೆ ಎಂದು ಅವರು ತಿಳಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ

‘57 ಕೆರೆಗಳ ತುಂಬಿಸುವ ಯೋಜನೆಯ ಕಾಮಗಾರಿ ವಿಳಂಬದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ. ಇದೇ ವಿಷಯವಾಗಿ ಚರ್ಚಿಸಲು ಜುಲೈ 19 ರಂದು ಅಧಿಕಾರಿಗಳ ಸಭೆ ಕರೆದಿದ್ದೇನೆ. ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುವುದು. ಶೀಘ್ರ ಕಾಮಗಾರಿಯ ಚುರುಕಿಗೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

‘ಒಂದು ವಾರದಲ್ಲಿ 11 ಕೆರೆಗಳಿಗೆ ನೀರು ಹರಿಯಲಿದೆ. ಈಗಲೂ ದೀಟೂರು ಏತ ನೀರಾವರಿಯ ಪಂಪ್‌ಹೌಸ್‌ನಿಂದ ಪಂಪ್‌ ಮಾಡಿದರೆ ಚಟ್ನಹಳ್ಳಿಗೆ ನೀರು ಬರಲಿದೆ. ಅಲ್ಲಿಂದ ಕೆರೆಗಳಿಗೆ ನೀರು ಹರಿಯಲಿದೆ. ಒಂದು ರಸ್ತೆ ಬಳಿ ಪೈಪ್‌ಲೈನ್‌ ಕಾಮಗಾರಿ ಬಾಕಿ ಇದೆ. ಆದು ಪೂರ್ಣಗೊಂಡರೆ 11 ಕೆರೆಗಳಿಗೆ ನೀರು ಹರಿಸಲು ಸಮಸ್ಯೆ ಇಲ್ಲ’ ಎಂದು ಅವರು ತಿಳಿಸಿದರು. 

ಜಗಳೂರು ತಾಲ್ಲೂಕಿನ ಬಿಳಿಚೋಡು ಸಮೀಪ 57 ಕೆರೆಗಳ ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು
ಜಗಳೂರು ತಾಲ್ಲೂಕಿನ ಬಿಳಿಚೋಡು ಸಮೀಪ 57 ಕೆರೆಗಳ ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು
ಜಗಳೂರು ತಾಲ್ಲೂಕಿನ ಬಿಳಿಚೋಡು ಸಮೀಪ 57 ಕೆರೆಗಳ ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು
ಜಗಳೂರು ತಾಲ್ಲೂಕಿನ ಬಿಳಿಚೋಡು ಸಮೀಪ 57 ಕೆರೆಗಳ ತುಂಬಿಸುವ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿರುವುದು
ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಕಳೆದ ವರ್ಷ ನೀರು ಬಂದಾಗ ಸಿರಿಗೆರೆ ಸ್ವಾಮೀಜಿ ಬಾಗಿನ ಅರ್ಪಿಸಿರುವುದು (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.