ADVERTISEMENT

ದಾವಣಗೆರೆ: ವರ್ಷದಲ್ಲಿ 83 ಎಚ್1ಎನ್‌1 ಶಂಕಿತ ಪ್ರಕರಣ

ಆರೋಗ್ಯ ಇಲಾಖೆಯಿಂದ ಜ್ವರ ಸಮೀಕ್ಷೆ

ಡಿ.ಕೆ.ಬಸವರಾಜು
Published 29 ಜನವರಿ 2020, 19:30 IST
Last Updated 29 ಜನವರಿ 2020, 19:30 IST
ಆರೋಗ್ಯ ಕಾರ್ಯಕರ್ತರಿಂದ ಮಾಹಿತಿ ಸಮೀಕ್ಷೆ
ಆರೋಗ್ಯ ಕಾರ್ಯಕರ್ತರಿಂದ ಮಾಹಿತಿ ಸಮೀಕ್ಷೆ   

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 83 ಎಚ್1ಎನ್‌1 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ ಮೂರು ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮಾತ್ರ
ಮೃತಪಟ್ಟಿದ್ದಾರೆ.

ಜನವರಿ 1ರಿಂದ 10ರವರೆಗೆ 3 ಪ್ರಕರಣಗಳು ದೃಢಪಟ್ಟಿದ್ದು, ಸಾಸ್ವೆಹಳ್ಳಿಯಲ್ಲಿ ಭಾನುವಾರವಷ್ಟೇ ವ್ಯಕ್ತಿಯೊಬ್ಬರು ಎಚ್1ಎನ್‌1ನಿಂದ ಮೃತಪಟ್ಟಿದ್ದು, ಮುಂದಿನ ದಿನಗಳಲ್ಲಿ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿದೆ. ವ್ಯಾಪಕವಾಗಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

‘ಈಗಾಗಲೇ ಲಾರ್ವಾ, ಕುಷ್ಠರೋಗ ಹಾಗೂ ಕ್ಷಯ ರೋಗಗಳ ಸಮೀಕ್ಷೆಯ ಜೊತೆಯಲ್ಲೇ ಎಚ್1ಎನ್1 ಸಮೀಕ್ಷೆ ಮಾಡಲಾಗುತ್ತದೆ. ಯಾವುದೇ ಜ್ವರದ ಪ್ರಕರಣಗಳು ಕಂಡುಬಂದರೆ ತಕ್ಷಣ ಪ್ರಾಥಮಿಕ ಆರೋಗ್ಯಕ್ಕೆ ಮಾಹಿತಿ ನೀಡಿ ಚಿಕಿತ್ಸೆ ಆರಂಭಿಸುತ್ತೇವೆ. ಅಲ್ಲದೇ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್.

ADVERTISEMENT

ಎಲ್ಲಾ ತಾಲ್ಲೂಕು ಹಾಗೂ ಸರ್ಕಾರಿ ಜಿಲ್ಲಾ 5 ಹಾಸಿಗೆಗಳ ಸುಸಜ್ಜಿತ ವಾರ್ಡ್‌ಗಳನ್ನು (ವೆಂಟಿಲೇಟರ್ ಒಳಗೊಂಡಂತೆ) ಕಾಯ್ದಿರಿಸಬೇಕು. ಅಲ್ಲದೇ ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ಆಸ್ಪತ್ರೆಗಳು ಔಷಧಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

‘ಎಚ್1ಎನ್1 ಸಾಮಾನ್ಯವಾಗಿ ಮಳೆಗಾಲ ಮುಗಿದು ಬೇಸಿಗೆ ಕಾಲ ಆರಂಭವಾದಾಗ ‌ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಮನೆಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸಲಾಗುತ್ತಿದೆ. ಕೆಮ್ಮು, ನೆಗಡಿ, ಶೀತ ಹಾಗೂ ಜ್ವರದ ಜೊತೆಗೆ ಉಸಿರಾಟದ ತೊಂದರೆ ಇದ್ದರೆ ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ’ ಎನ್ನುತ್ತಾರೆ ಡಾ.ಜಿ.ಡಿ. ರಾಘವನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.