ದಾವಣಗೆರೆ: ಅಪರಾಧ ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಮಾಡಲು ಕೃತಕ ಬುದ್ಧಿಮತ್ತೆಯ (ಎಐ) ನೆರವು ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿನ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಸಹಯೋಗದಲ್ಲಿ ‘ನಾವಿನ್ಯತೆಗಳ ಮೂಲಕ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಭವಿಷ್ಯದ ಪ್ರವೃತ್ತಿ’ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
‘ಕೃತಕ ಬುದ್ಧಿಮತ್ತೆಯಿಂದಾಗಿ ದರೋಡೆ, ಕಳವು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಭೇದಿಸಲು ಸಾಧ್ಯವಾಗಿದೆ. ಸೈಬರ್ ಅಪರಾಧ ಪತ್ತೆಗೂ ಇದೇ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ಸ್ಮಾರ್ಟ್‌ಸಿಟಿಯಲ್ಲಿ ಸ್ಥಾಪಿಸಿರುವ ಕಮಾಂಡ್ ಕಂಟ್ರೋಲ್ ಕೇಂದ್ರವು ನಗರದ ಮೇಲೆ ನಿಗಾ ಇಟ್ಟಿದೆ. ಆಯಕಟ್ಟಿನ ಸ್ಥಳ, ವೃತ್ತ, ರಸ್ತೆಗಳಲ್ಲಿ ಅಳವಡಿಸಿದ ಸಿ.ಸಿ.ಟಿವಿ ಕ್ಯಾಮೆರಾ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪತ್ತೆ ಮಾಡಲಾಗುತ್ತಿದೆ. ದರೋಡೆ, ಕೊಲೆ ಸೇರಿ ಇತರ ಪ್ರಕರಣಗಳನ್ನು ಭೇದಿಸಲು ಇದರಿಂದ ಸಾಧ್ಯವಾಗಿದೆ’ ಎಂದು ‘ಸ್ಮಾರ್ಟ್‌ಸಿಟಿ’ಯ ಮಾಹಿತಿ ತಂತ್ರಜ್ಞಾನ ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿ ಜಿ.ಆರ್. ಮಮತಾ ಹೇಳಿದರು.
‘ನಗರದ ಸ್ವಚ್ಛತೆಗೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ. ಬೀದಿದೀಪ ನಿರ್ವಹಣೆ, ತ್ಯಾಜ್ಯ ವಿಲೇವಾರಿ, ಕಸ ಸಂಗ್ರಹ ವಾಹನದ ಮೇಲಿನ ನಿಗಾ ಇಡಲು ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಪಾಲಿಕೆಯ ವಾಹನಗಳಿಗೆ ಜಿಪಿಎಸ್ ಅಳವಡಿಸಿದ ಬಳಿಕ ನಿಖರ ಮಾಹಿತಿ ಲಭ್ಯವಾಗುತ್ತಿದೆ’ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಅಭಿಪ್ರಾಯಪಟ್ಟರು.
ಬಿಐಇಟಿ ಕಾಲೇಜು ಪ್ರಾಂಶುಪಾಲ ಎಚ್.ಬಿ.ಅರವಿಂದ, ಪ್ರೊ.ವೈ. ವೃಷಭೇಂದ್ರಪ್ಪ, ಕಾರ್ಯಾಗಾರದ ಸಂಯೋಜಕರಾದ ಟಿ.ಕೆ ಕೃಷ್ಣಕುಮಾರ್, ಬಿ. ಸುರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.