ADVERTISEMENT

ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಮರಣ ಶಾಸನ: ಎಸ್‌.ಕೆ.ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 15:58 IST
Last Updated 13 ಸೆಪ್ಟೆಂಬರ್ 2020, 15:58 IST
ದಾವಣಗೆರೆಯ ಎಪಿಎಂಸಿಯಲ್ಲಿ ಭಾನುವಾರ ನಡೆದ ವರ್ತಕರ ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿದರು.
ದಾವಣಗೆರೆಯ ಎಪಿಎಂಸಿಯಲ್ಲಿ ಭಾನುವಾರ ನಡೆದ ವರ್ತಕರ ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿದರು.   

ದಾವಣಗೆರೆ: ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಮರಣ ಶಾಸನ ಬರೆಯಲಾಗಿದೆ. ಇದರ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದು ದಾವಣಗೆರೆ ಎಪಿಎಂಸಿ ಅಧ್ಯಕ್ಷ ಎಸ್‌.ಕೆ.ಚಂದ್ರಶೇಖರ್ ತಿಳಿಸಿದರು.

ದಾವಣಗೆರೆಯ ಎಪಿಎಂಸಿಯ ಟೆಂಡರ್ ಹಾಲ್‌ನಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಎಪಿಎಂಸಿ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿ, ‘ರಾಜ್ಯದ 165 ಎಪಿಎಂಸಿ ಅಧ್ಯಕ್ಷರ ಗಮನಕ್ಕೆ ತಾರದೇ ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವ ಮೂಲಕ ರೈತರಿಗೆ ಸಂಕಷ್ಟ ತಂದಿಟ್ಟಿದ್ದಾರೆ. ಎಪಿಎಂಸಿಯನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ವಿಲೀನಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಎಪಿಎಂಸಿಯನ್ನು ನಂಬಿಕೊಂಡು ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಬದುಕುತ್ತಿದ್ದು, ದಾವಣಗೆರೆಯಲ್ಲಿ 500 ಅಂಗಡಿಗಳು ಇದ್ದು, ವರ್ತಕರು, ಹಮಾಲರು, ಖರೀದಿದಾರರು, ರೈತರಿಗೆ ಸಾಕಷ್ಟು ರೈತರಿಗೆ ಜೀವನ ಸಿಗುತ್ತಿತ್ತು. ಎಪಿಎಂಸಿ ಕಾರ್ಪೊರೆಟ್ ವಲಯಗಳಿಗೆ ಮಾರಾಟ ಮಾಡಲು ಹೊರಟಿದ್ದಾರೆ, ಇದರಿಂದಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದರು.

ADVERTISEMENT

ಎಪಿಎಂಸಿಗೆ ನಿರ್ದೇಶಕರೇ ಸುಪ್ರೀಂ ಅಲ್ಲ, ನಾವೂ ಜನಪ್ರತಿನಿಧಿಗಳು. ಎಪಿಎಂಸಿ ಅಸ್ತಿತ್ವ ಉಳಿಸಿಕೊಳ್ಳಲು ಆಡಳಿತ ಮಂಡಳಿಯ ನಿರ್ದೇಶಕರು ಸಂವಹನ ಮಾಡಬೇಕು. ಎಪಿಎಂಸಿ ಉಳಿಸಲು ಒಗ್ಗಟ್ಟಿನಿಂದ ಹೋರಾಟ ಮಾಡೋಣ ಎಂದು ಸಲಹೆ ನೀಡಿದರು.

ಚಾಮರಾಜನಗರ ಎಪಿಎಂಸಿ ಅಧ್ಯಕ್ಷ ನಾಗೇಂದ್ರ ಮಾತನಾಡಿ, ‘ಯಾವುದೇ ಚರ್ಚೆ ಇಲ್ಲದೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಇದನ್ನು ವಿರೋಧಿಸಬೇಕಿದೆ’ ಎಂದರು.

ಸಕಲೇಶಪುರ ಎಪಿಎಂಸಿ ಅಧ್ಯಕ್ಷ ಕವನ್‌ಗೌಡ, ಸಾಗರ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಂ. ರವಿಕುಮಾರ್, ಬ್ಯಾಡಗಿಯ ವೀರಭದ್ರಪ್ಪ ವಿ.ಗೊಡಚಿ, ಇಂಡಿಯ ಹಮೀದ್ ಎಂ.ದಬನಿ, ಕುಂದಾಪುರದ ವೆಂಕಟ ಪೂಜಾರಿ, ಲಕ್ಷ್ಮೀಶ ನೀಲಪ್ಪ ಈ ಹತ್ತಿ, ಚಿತ್ರದುರ್ಗದ ರೈತ ಮುಖಂಡ ಸುರೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು. ದಾವಣಗೆರೆಯ ವ‌ರ್ತಕ ಪ್ರತಿನಿದಿ ದೊಗ್ಗಳ್ಳಿ ಬಸವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.