ADVERTISEMENT

ಆಯುರ್ವೇದ ಚಿಕಿತ್ಸೆಯತ್ತ ಹೆಚ್ಚಿದ ಒಲವು: ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 2:33 IST
Last Updated 24 ಸೆಪ್ಟೆಂಬರ್ 2025, 2:33 IST
ದಾವಣಗೆರೆಯ ಜೆ.ಎಚ್. ಪಟೇಲ್‌ ಬಡಾವಣೆಯ ಸರ್ಕಾರಿ ಸಂಯುಕ್ತ ಆಯುಷ್‌ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಆಯುರ್ವೇದ ದಿನಾಚರಣೆಯಲ್ಲಿ ಧನ್ವಂತರಿ ಭಾವಚಿತ್ರಕ್ಕೆ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜೆ.ಎಚ್. ಪಟೇಲ್‌ ಬಡಾವಣೆಯ ಸರ್ಕಾರಿ ಸಂಯುಕ್ತ ಆಯುಷ್‌ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಆಯುರ್ವೇದ ದಿನಾಚರಣೆಯಲ್ಲಿ ಧನ್ವಂತರಿ ಭಾವಚಿತ್ರಕ್ಕೆ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಆಯುರ್ವೇದ ಚಿಕಿತ್ಸೆ ಪಡೆಯಲು ವಿದೇಶಿಗರು ಭಾರತದತ್ತ ಮುಖ ಮಾಡುತ್ತಿದ್ದಾರೆ. ಜನರ ಕೈಗೆಟಕುವ ದರದಲ್ಲಿ ಲಭ್ಯವಾಗುವ ಆಯುರ್ವೇದದ ಬಗ್ಗೆ ಒಲವು ಹೆಚ್ಚಾಗುತ್ತಿದೆ ಎಂದು ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.

ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆಯ ಸರ್ಕಾರಿ ಸಂಯುಕ್ತ ಆಯುಷ್‌ ಆಸ್ಪತ್ರೆಯಲ್ಲಿ ಆಯುಷ್‌ ಇಲಾಖೆ ಮಂಗಳವಾರ ಏರ್ಪಡಿಸಿದ್ದ 10ನೇ ಆಯುರ್ವೇದ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆಯುರ್ವೇದಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ರಾಜ, ಮಹಾರಾಜರ ಕಾಲದಿಂದಲೂ ಈ‌ ಪದ್ಧತಿ ಅನುಸರಿಸಲಾಗುತ್ತಿದೆ. ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಈ ಚಿಕಿತ್ಸೆಗೆ ಹೆಚ್ಚು ಮಾನ್ಯತೆ ಇದೆ. ವೈದ್ಯಕೀಯ ಕ್ಷೇತ್ರದ ದೊಡ್ಡ ಸಂಸ್ಥೆಗಳು ಕೂಡ ಆಯುರ್ವೇದ ಚಿಕಿತ್ಸೆ ನೀಡುತ್ತಿವೆ’ ಎಂದರು.

ADVERTISEMENT

‘ಆಯುರ್ವೇದ ಚಿಕಿತ್ಸೆ ಅಲೋಪಥಿಗಿಂತ ಭಿನ್ನ. ಅಲೋಪಥಿಯಂತೆ ಕ್ಷಿಪ್ರಗತಿಯ ಫಲಿತಾಂಶ ನೀಡದಿದ್ದರೂ, ಶಾಶ್ವತ ಹಾಗೂ ಆರೋಗ್ಯಕ್ಕೆ ಪೂರಕ. ಅಲೋಪಥಿಯಂತೆ ಆಯುರ್ವೇದದಲ್ಲಿ ಅಡ್ಡಪರಿಣಾಮದ ಆತಂಕವಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಇದು ಸಲುಭವಾಗಿ ಕೈಗೆಟಕುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘2016ರಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಾರಂಭವಾಗಿದೆ. ‘ಜನರಿಗಾಗಿ ಹಾಗೂ ಜಗತ್ತಿಗಾಗಿ ಆಯುರ್ವೇದ’ ಘೋಷಾವಾಕ್ಯ ನೀಡಲಾಗಿದೆ. ಜಗತ್ತಿನ ಯೋಗಕ್ಷೇಮ ಹಾಗೂ ಭೂಮಿ ಉಳಿಕೊಳ್ಳುವ ಸಂಕಲ್ಪ ಮಾಡಬೇಕಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ಜನರಲ್ಲಿ ಒಲವು ಮೂಡುತ್ತಿದೆ. ಗತವೈಭವ ಮರುಕಳುಹಿಸುವ ಆಶಾಭಾವನೆ ಮೂಡಿದೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ್ ಹೇಳಿದರು.

‘ಪೂರ್ವಜರು ಆಯುರ್ವೇದದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಇದರ ಪಾತ್ರ ಮಹತ್ವದ್ದು. ಪ್ರಾಕೃತಿಕ ಚಿಕಿತ್ಸೆ ಆಗಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ. ಔಷಧಿ ಸಸ್ಯ ಬೆಳೆಸುವುದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.

ವೈದ್ಯಾಧಿಕಾರಿಗಳಾದ ಡಾ.ಸುಧಾ, ಡಾ.ರೇವಾನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ ಬೂದಾಳ್, ಡಾ.ಲಿಂಗರಾಜೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.