
ದಾವಣಗೆರೆ: ಬಳ್ಳಾರಿ ಗಲಾಟೆಯಲ್ಲಿ ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿಯೂ ಆಗಿರುವ ವಸತಿ ಸಚಿವ ಜಮೀರ್ ಅಹಮದ್ ತಿಳಿಸಿದರು.
‘ಬ್ಯಾನರ್ ವಿಚಾರದ ಗಲಾಟೆ ಮಧ್ಯಾಹ್ನ 2.30ಕ್ಕೆ ಶುರುವಾಗಿತ್ತು. ಇದನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಿತ್ತು. ಸತೀಶ್ ರೆಡ್ಡಿ ಸಂಜೆ 4ಕ್ಕೆ ಸ್ಥಳಕ್ಕೆ ತೆರಳಿದ್ದರು. ಅಲ್ಲಿಯವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಪಿ ಏನು ಮಾಡುತ್ತಿದ್ದರು? ಐಜಿ ಅವರನ್ನು ಮುಖ್ಯಮಂತ್ರಿ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಬಲವಾದ ಕಾರಣ ಇದೆ’ ಎಂದು ಜಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ಶಾಸಕ ಭರತ್ ರೆಡ್ಡಿ ಅವರು ಸ್ಥಳಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಎಂಬುದನ್ನು ಐಜಿಪಿ ವಿವರಣೆ ನೀಡಿದ್ದಾರೆ. ಬ್ಯಾನರ್ ಕಿತ್ತುಹಾಕಿ ಸತೀಶ್ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಸಂಜೆ 7ರ ಬಳಿಕ ಭರತ್ ರೆಡ್ಡಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ರಾಜಶೇಖರ ಅವರ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ಮಾಡಿಲ್ಲ. ಇದು ಸಾಧ್ಯವೂ ಇಲ್ಲ’ ಎಂದರು.
‘ರಾಜಶೇಖರ ಅವರ ಸಾವಿಗೆ ಬೆಲೆ ಕಟ್ಟಲಾಗದು. ₹ 50 ಕೋಟಿ ಕೊಟ್ಟರು ಅವರನ್ನು ಜೀವಂತವಾಗಿ ತರಲು ಆಗುವುದಿಲ್ಲ. ಅವರ ಕುಟುಂಬಕ್ಕೆ ಸಣ್ಣದೊಂದು ಕಾಣಿಕೆ ನೀಡಿದ್ದೇನೆ. ₹ 25 ಲಕ್ಷ ಕೊಟ್ಟಿರುವುದಾಗಿ ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಇಷ್ಟು ಮೊತ್ತವನ್ನು ಕೊಟ್ಟಿದ್ದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖುಷಿಪಡಬೇಕಿತ್ತು. ಬಡವರಿಗೆ ಸಹಾಯ ಮಾಡಿದರೆ ಏಕಿಷ್ಟು ಅಸಹನೆ’ ಎಂದು ಪ್ರಶ್ನಿಸಿದರು.