ADVERTISEMENT

ಬಸವಾಪಟ್ಟಣ | ಕಾರ್ಮಿಕರ ಸಂಘಟನೆ ಅಗತ್ಯ: ಶಾಸಕ ಬಸವಂತಪ್ಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 4:53 IST
Last Updated 9 ಫೆಬ್ರುವರಿ 2026, 4:53 IST
ಬಸವಾಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸಂಘ ಮತ್ತು ಶಾಖಾ ಕಚೇರಿಯನ್ನು ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಉದ್ಘಾಟಿಸಿದರು
ಬಸವಾಪಟ್ಟಣದಲ್ಲಿ ಕಟ್ಟಡ ಕಾರ್ಮಿಕರ ಸಂಘ ಮತ್ತು ಶಾಖಾ ಕಚೇರಿಯನ್ನು ಶಾಸಕ ಕೆ.ಎಸ್.ಬಸವಂತಪ್ಪ ಭಾನುವಾರ ಉದ್ಘಾಟಿಸಿದರು   

ಬಸವಾಪಟ್ಟಣ: ಕಾರ್ಮಿಕರು ಸಂಘಟಿತರಾಗಿ ಸರ್ಕಾರ ಮತ್ತು ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಪಡೆಯಬೇಕು ಎಂದು ಶಾಸಕ ಕೆ.ಎಸ್‌.ಬಸವಂತಪ್ಪ ಹೇಳಿದರು.

ಇಲ್ಲಿನ ಕಟ್ಟಡ ಕಾರ್ಮಿಕರ ಸಂಘ ಮತ್ತು ಶಾಖಾ ಕಚೇರಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಬಹುಪಾಲು ಕಟ್ಟಡ ಮತ್ತು ಇತರೆ ಕಾರ್ಮಿಕರು ಅನಕ್ಷರಸ್ಥರು ಮತ್ತು ಬಡವರು. ಇವರಿಗೆ ನಿರ್ದಿಷ್ಟ ದುಡಿಮೆ ಇಲ್ಲ. ಸಂವಿಧಾನ ಮತ್ತು ಸರ್ಕಾರ ಕಾರ್ಮಿಕರ ಹಿತರಕ್ಷಣೆಗೆ ರೂಪಿಸಿರುವ ಕಾನೂನು ಮತ್ತು ಸೌಲಭ್ಯಗಳನ್ನು ಪಡೆಯಲು ಒಂದು ಸುಭದ್ರ ಸಂಘಟನೆ ಅಗತ್ಯವಾಗಿದೆ. ಕಾರ್ಮಿಕರ ಸಂಘ ರಚನೆ ಉತ್ತಮ ಬೆಳವಣಿಗೆ. ಸರ್ಕಾರ ಕಾರ್ಮಿಕರಿಗೆ ನೀಡುವ ನೆರವನ್ನು ಹೆಚ್ಚಿಸಲು ಒತ್ತಾಯಿಸುವುದಾಗಿ ಹೇಳಿದರು.

ADVERTISEMENT

ಅಪಘಾತ ಪರಿಹಾರ, ನಿವೃತ್ತಿ ವೇತನ, ಮಹಿಳಾ ಕಾರ್ಮಿಕರ ಹೆರಿಗೆ ಭತ್ಯೆ ಮುಂತಾದ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಮುಂದಾಗಬೇಕು. ಈ ಬಗ್ಗೆ ಸಂಘದಿಂದ ಮಾಹಿತಿ ನೀಡಲಾಗುತ್ತದೆ ಎಂದು ಕಟ್ಟಡ ಮತ್ತು ಕಲ್ಲು ಒಡೆಯುವ ಕಾರ್ಮಿಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಜಿ.ಉಮೇಶ್‌ ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಲಕ್ಷ್ಮಣ್‌, ತಾಲ್ಲೂಕು ಘಟಕದ ಅಧ್ಯಕ್ಷ ಜೈನುಲ್ಲಾ ಖಾನ್‌, ಗೌರವ ಅಧ್ಯಕ್ಷ ಸೈಯದ್‌ ಗೌಸ್‌ಪೀರ್‌, ಉಪಾಧ್ಯಕ್ಷ ಹನುಮಂತರಾವ್‌, ಹೋಬಳಿ ಘಟಕದ ಅಧ್ಯಕ್ಷ ಚಮನ್‌ಸಾಬ್‌, ಗೌರವ ಅಧ್ಯಕ್ಷ ತಾಜ್‌ಪೀರ್‌, ಉಪಾಧ್ಯಕ್ಷರಾದ ಕೆ.ಮಂಜಪ್ಪ ಮತ್ತು ಗುಣಶೇಖರ್‌ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆರ್‌.ಹಾಲೇಶ್‌ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.