ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ದಾವಣಗೆರೆ: ‘ಭೂಸುರಕ್ಷಾ’ ಯೋಜನೆಯಡಿ ಕಂದಾಯ ಇಲಾಖೆಯ ಪ್ರಮುಖ ಭೂದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಹಲವು ದಶಕಗಳ ಹಿಂದಿನ 1.13 ಕೋಟಿ ಪುಟಗಳ ಭೂದಾಖಲೆಯನ್ನು ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
‘ಭೂ ಸುರಕ್ಷಾ ಯೋಜನೆಯ ಪ್ರಯೋಗಾರ್ಥ ಅನುಷ್ಠಾನ ದಾವಣಗೆರೆ ತಾಲ್ಲೂಕಿನಲ್ಲಿ 2024ರ ಫೆಬ್ರುವರಿಯಿಂದ ಆರಂಭವಾಗಿತ್ತು. ಈ ತಾಲ್ಲೂಕಿನ 52.80 ಲಕ್ಷ ಪುಟಗಳನ್ನು ಸ್ಕ್ಯಾನಿಂಗ್ ಮಾಡಿ ಜಾಲತಾಣದಲ್ಲಿ ಭದ್ರಪಡಿಸಲಾಗಿದೆ. ಉಳಿದ 5 ತಾಲ್ಲೂಕುಗಳಲ್ಲಿ ಈ ಪ್ರಕ್ರಿಯೆ 2025ರ ಜ.1ರಿಂದ ಶುರುವಾಗಿದ್ದು, ಈವರೆಗೆ 60.27 ಲಕ್ಷ ಪುಟಗಳನ್ನು ಗಣಕೀಕರಣಗೊಳಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಪಹಣಿ, ಆಸ್ತಿ ವರ್ಗಾವಣೆ ಪತ್ರ (ಮ್ಯುಟೇಷನ್), ಟಿಪ್ಪಣಿ ಸೇರಿದಂತೆ ಕಂದಾಯ ಇಲಾಖೆಯ ‘ಎ’ ಮತ್ತು ‘ಬಿ’ ದಾಖಲೆಗಳನ್ನು ಡಿಜಿಟಲ್ ಸ್ವರೂಪಕ್ಕೆ ತರಲಾಗುತ್ತಿದೆ. ಹಲವು ದಶಕಗಳಿಂದ ಇರುವ ಈ ದಾಖಲೆಗಳು ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲಿ ಸರಾಸರಿ 1 ಕೋಟಿ ಪುಟ ಇರಬಹುದು ಎಂದು ಅಂದಾಜಿಸಲಾಗಿದೆ. ನಿತ್ಯ 9 ಸಾವಿರದಂತೆ ತಿಂಗಳಿಗೆ 10 ಲಕ್ಷ ಪುಟಗಳನ್ನು ಸ್ಕ್ಯಾನಿಂಗ್ ಮತ್ತು ಅಪ್ಲೋಡ್ ಮಾಡಲಾಗುತ್ತಿದೆ. ಸಮರೋಪಾದಿಯಲ್ಲಿ ನಡೆಯುತ್ತಿರುವ ಈ ಕಾರ್ಯ ಡಿಸೆಂಬರ್‌ಗೆ ಅಂತ್ಯಗೊಳ್ಳುವ ಸಾಧ್ಯತೆ ಇದೆ’ ಎಂದು ವಿವರಿಸಿದರು.
‘ಗಣಕೀಕರಣಗೊಂಡ ಭೂದಾಖಲೆಗಳು ಕಂದಾಯ ಇಲಾಖೆಯ ಜಾಲತಾಣದಲ್ಲಿ ಲಭ್ಯವಾಗಲಿವೆ. ಪ್ರತಿ ಪುಟಕ್ಕೆ ₹ 8ರಂತೆ ಶುಲ್ಕ ಪಾವತಿಸಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಎಲ್ಲರಿಗೂ ನೀಡಲಾಗಿದೆ. ಭೂದಾಖಲೆಗಳು ಬೆರಳ ತುದಿಯಲ್ಲಿ ಲಭ್ಯವಾಗುವುದರಿಂದ ಸಾರ್ವಜನಿಕರು ಸರ್ಕಾರಿ ಕಚೇರಿ ಅಲೆಯುವುದು ತಪ್ಪಲಿದೆ. ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣ ವಿಲೇವಾರಿ ಅನುಕೂಲವಾಗಿದೆ’ ಎಂದರು.
‘ದರಖಾಸ್ತು ಪೋಡಿ ಅಭಿಯಾನ ಕೈಗೆತ್ತಿಕೊಳ್ಳಲಾಗಿದ್ದು, 2,000ಕ್ಕೂ ಅಧಿಕ ಪೋಡಿ ಮಾಡಲಾಗಿದೆ. ಪೌತಿಖಾತೆ ಅಭಿಯಾನಕ್ಕೂ ಒತ್ತು ನೀಡಲಾಗಿದೆ. ‘ಇ–ಸ್ವತ್ತು’ ವಿತರಣೆಯಲ್ಲಿ ಆಗಿರುವ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ. ಸಿಬ್ಬಂದಿ ಕೊರತೆಯ ನಡುವೆಯೂ ಹೆಚ್ಚು ‘ಬಿ’ ಖಾತಾ ವಿತರಿಸಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ತಹಶೀಲ್ದಾರ್ ಎಂ.ಬಿ.ಅಶ್ವತ್ಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ ಹಾಜರಿದ್ದರು.
–––––
‘ಅಂಗನವಾಡಿ: ಪಾರದರ್ಶಕ ಆಯ್ಕೆ’
‘ಜಿಲ್ಲೆಯ ಅಂಗನವಾಡಿಗಳಲ್ಲಿ ಖಾಲಿ ಇರುವ 50 ಕಾರ್ಯಕರ್ತೆಯರು ಹಾಗೂ 282 ಸಹಾಯಕಿಯರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಲಂಚಕ್ಕೆ ಬೇಡಿಕೆ ಇಡುವವರು ಹಾಗೂ ಮಧ್ಯವರ್ತಿ ಹಾವಳಿ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಕೋರಿದರು.
‘ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿ ಪೂರ್ಣಗೊಂಡಿದೆ. ಸಲ್ಲಿಸಿದ ದಾಖಲೆಗಳಲ್ಲಿ ಸಾಕಷ್ಟು ಲೋಪ ಇರುವುದು ಕಂಡುಬಂದಿದೆ. ಈ ಲೋಪ ಸರಿಪಡಿಸಲು ಅರ್ಜಿದಾರರಿಗೆ ಅವಕಾಶ ಕಲ್ಪಿಸುವಂತೆ ಪತ್ರ ಬರೆಯಲಾಗಿದೆ. ಇದಕ್ಕೆ ಅನುಮತಿ ಸಿಕ್ಕರೆ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ‘ಹೆಲ್ಪ್ ಡೆಸ್ಕ್’ ಶುರು ಮಾಡಲಾಗುವುದು’ ಎಂದರು.
‘ನದಿಪಾತ್ರ ಜನರಿಗೆ ಎಚ್ಚರ ಅಗತ್ಯ’
‘ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು, ಭದ್ರಾ ಜಲಾಶಯ ಕೂಡ ತುಂಬುವ ಹಂತಕ್ಕೆ ಬಂದಿದೆ. ತುಂಗಭದ್ರಾ ನದಿಯಲ್ಲಿ 80 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಜಲಾಶಯಗಳ ಸುರಕ್ಷತೆಯ ದೃಷ್ಟಿಯಿಂದ ಇನ್ನೂ ಹೆಚ್ಚಿನ ನೀರು ಬಿಡುವ ಸಂಭವವಿದೆ. ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
‘ಹೊನ್ನಾಳಿ ಪಟ್ಟಣದ ಕೆಲ ಬಡಾವಣೆ, ಉಕ್ಕಡಗಾತ್ರಿ ಸೇರಿದಂತೆ ನದಿಪಾತ್ರದ ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ನದಿಯಲ್ಲಿ ನೀರು ಏರಿದಂತೆ ಸೆಳೆತವೂ ಹೆಚ್ಚಾಗುತ್ತದೆ. ಜಾನುವಾರುಗಳೊಂದಿಗೆ ನದಿಗೆ ಇಳಿಯಬಾರದು’ ಎಂದು ಹೇಳಿದರು.
ಹಸರೀಕರಣಕ್ಕೆ ಸೈಕಲ್ ಜಾಥಾ
ದಾವಣಗೆರೆ ನಗರವನ್ನು ಸಂಪೂರ್ಣ ಹಸಿರೀಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು 20ರಿಂದ 25 ಕಿ.ಮೀ ದೂರದ ಸೈಕಲ್ ಜಾಥಾವನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು ಎಂದು ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ ನೀಡಿದರು.
‘ಪ್ಲಾಸ್ಟಿಕ್ ಬಳಕೆಗೆ ಸಾಕಷ್ಟು ನಿರ್ಬಂಧ ವಿಧಿಸಲಾಗಿದೆ. ಅಂಗಡಿ, ಛತ್ರ, ಬಟ್ಟೆ ಅಂಗಡಿಯ ಮಾಲೀಕರು ಹಾಗೂ ವೈದ್ಯರೊಂದಿಗೆ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚಿಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ ವಾರ್ಡ್‌ವೊಂದನ್ನು ಪ್ಲಾಸ್ಟಿಕ್ ಮುಕ್ತ ಮಾಡಿ ಮಾದರಿಯಾಗಿ ರೂಪಿಸಲು ನಿರ್ಧರಿಸಲಾಗಿದೆ’ ಎಂದರು.
–––
ಗ್ರಾಮ ಆಡಳಿತಾಧಿಕಾರಿಯಿಂದ ಜಿಲ್ಲಾಧಿಕಾರಿವರೆಗೆ ಎಲ್ಲ ಕಚೇರಿ ಕಾಗದ ರಹಿತವಾಗಿ ಕೆಲಸ ಮಾಡುತ್ತಿವೆ. ಕಂದಾಯ ಇಲಾಖೆ ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿದೆ
–ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.