
ದಾವಣಗೆರೆ: ಮಾನದಂಡಗಳನ್ನು ಮೀರಿ ಪಡೆದಿರುವ ಬಿಪಿಎಲ್ (ಬಡತರ ರೇಖೆಗಿಂತ ಕೆಳಗಿನ) ಕುಟುಂಬ ಹೊಂದಿರುವ ಹಾಗೂ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್‌ಗಳನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲೆಯಲ್ಲಿ ಇಂತಹ 7,546 ಕಾರ್ಡ್‌ಗಳನ್ನು ಪತ್ತೆ ಮಾಡಿ ಎಪಿಎಲ್‌ಗೆ (ಬಡತನ ರೇಖೆಗಿಂತ ಮೇಲಿರುವ ಕುಟುಂಬ) ಪರಿವರ್ತಿಸಿದೆ.
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಪಡೆದಿರುವ ಕುಟುಂಬಗಳು ನೀಡಿರುವ ದತ್ತಾಂಶ ಹಾಗೂ ಸರ್ಕಾರದ ದತ್ತಾಂಶಗಳನ್ನು ಪರಿಶೀಲಿಸಿದಾಗ ಕಾರ್ಡ್‌ಗಳು ಅನರ್ಹರ ಪಾಲಾಗಿರುವುದು ದೃಢಪಟ್ಟಿದೆ.
ಪಡಿತರ ಅಕ್ಕಿ ಪಡೆಯುವುದೂ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಅನರ್ಹರ ಪಾಲಾಗುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಕಡಿವಾಣ ಹಾಕಲು ಮುಂದಾದ ರಾಜ್ಯ ಸರ್ಕಾರ, ಅರ್ಹತೆ ಇಲ್ಲದೇ ಕಾರ್ಡ್ ಪಡೆದಿರುವ ಕುಟುಂಬಗಳನ್ನು ಪತ್ತೆಹಚ್ಚುವಂತೆ ಸೂಚಿಸಿತ್ತು. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 3.65 ಲಕ್ಷ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ಈ ಪೈಕಿ 7,546 ಕುಟುಂಬಗಳು ಅಹರ್ತೆ ಇಲ್ಲದಿದ್ದರೂ ಸರ್ಕಾರದ ವಿವಿಧ ಸವಲತ್ತುಗಳು ಅನುಭವಿಸುತ್ತಿದ್ದವು. ಇದಕ್ಕೆ ಕಡಿವಾಣ ಬಿದ್ದಿದ್ದು, ಅವುಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹಗೊಳಿಸಿ, ಅವುಗಳನ್ನು ಎಪಿಎಲ್ ಕಾರ್ಡ್‌ಗೆ ಪರಿವರ್ತಿಸಲಾಗುತ್ತಿದೆ. ರಾಜ್ಯದಲ್ಲಿ ಶೇ 15ರಷ್ಟು ಬಿಪಿಎಲ್ ಕಾರ್ಡ್ ರದ್ದಾಗಿದ್ದು, ಅರ್ಹತೆ ಹೊಂದಿದವರು ಆತಂಕ ಪಡುವುದು ಬೇಡ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಶಿವಮೊಗ್ಗದಲ್ಲಿ ಈಚೆಗೆ ತಿಳಿಸಿದ್ದರು.
‘ಅರ್ಹತೆಯಿದ್ದರೂ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ ಎಂಬುದು ಕಂಡುಬಂದರೆ ಮರು ಪರಿಶೀಲನೆಗೆ ಅವಕಾಶವಿದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ. ಮಧುಸೂದನ್ ಸ್ಪಷ್ಟಪಡಿಸಿದ್ದಾರೆ. ಕಣ್ತಪ್ಪಿನಿಂದ ಅಥವಾ ದತ್ತಾಂಶ ದೋಷದಿಂದ ಅರ್ಹರು ಕೈಬಿಟ್ಟುಹೋಗಿದ್ದರೆ, ಅಂಥವರನ್ನು ಮರು ಸೇರ್ಪಡೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ಪಡಿತರ ಕಾರ್ಡ್ ಫಲಾನುಭವಿಗಳಿಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಅವರ ಕಾರ್ಡ್‌ನ ಸ್ಥಿತಿಗತಿಯ ಮಾಹಿತಿ ಸಿಗಲಿದೆ. ಎಪಿಎಲ್‌ಗೆ ಪರಿವರ್ತನೆಯಾಗಿದ್ದಲ್ಲಿ, ಅಂಥವರು ಸಮೀಪದ ಆಹಾರ ನಿರೀಕ್ಷಕರನ್ನು ಭೇಟಿಯಾಗಿ ಮನವಿ ಸಲ್ಲಿಸಬಹುದು. ಅಂಥವರ ಮನವಿ ಪರಿಶೀಲಿಸಿ, ಲೋಪ ದೃಢಪಟ್ಟರೆ ಅವರ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ಗಳನ್ನು ಮರು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
l12 ತಿಂಗಳಿನಿಂದ ಪಡಿತರ ಪಡೆಯದವರು
lಜಿಎಸ್‌ಟಿ ಪಾವತಿದಾರರು
l7.5 ಎಕರೆಗಿಂತ ಅಧಿಕ ಜಮೀನು ಹೊಂದಿದವರು
lಎರಡು ಕಡೆಗಳಲ್ಲಿ ಪಡಿತರ ಕಾರ್ಡ್ ಪಡೆದವರು
lಆದಾಯ ತೆರಿಗೆ ಪಾವತಿದಾರರು
lಸ್ವಂತ ಕಾರ್ ಇರುವವರು
ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಿಗಬೇಕಿರುವ ಸರ್ಕಾರದ ಸೌಲಭ್ಯಗಳು ಅನರ್ಹರ ಪಾಲಾಗಬಾರದು. ಒಂದು ವೇಳೆ ಅರ್ಹತೆಯಿದ್ದರೂ ಅಂತಹ ಕುಟುಂಬಗಳ ಕಾರ್ಡ್‌ಗಳನ್ನು ರದ್ದುಪಡಿಸಿದ್ದರೆ ಅಥವಾ ಪರಿವರ್ತಿಸಿದ್ದು ಕಂಡುಬಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.
‘ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ನೀಡುತ್ತಿರುವ ಅಕ್ಕಿಯಿಂದ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ಅವರನ್ನು ಬಡತನದ ವ್ಯಾಪ್ತಿಯಿಂದ ಮೇಲೆತ್ತಲು ಕೈಗೊಂಡಿರುವ ಈ ಯೋಜನೆಗಳಲ್ಲಿ ಲೋಪವಾಗಬಾರದು. ಅನರ್ಹ ಕುಟುಂಬಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ಸರಿ. ಆದರೆ ಅನರ್ಹತೆಯ ಹೆಸರಿನಲ್ಲಿ ಅರ್ಹ ಕುಟುಂಬಗಳಿಗೆ ಅನ್ಯಾಯವಾಗಬಾರದು’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.