ADVERTISEMENT

ಬಾಡಿಗೆ ಕಟ್ಟಡದಲ್ಲೇ ಸರ್ಕಾರಿ ಕಚೇರಿಗಳು

ಒಂದೇ ಸೂರಿನಡಿ ಎಲ್ಲ ಕಚೇರಿಗಳು ಇರುವಂತೆ ಮಾಡಲು ಬಜೆಟ್‌ನಲ್ಲಿ ಅನುದಾನವಿಡಲಿ

ಎನ್.ಕೆ.ಆಂಜನೇಯ
Published 17 ಫೆಬ್ರುವರಿ 2022, 5:03 IST
Last Updated 17 ಫೆಬ್ರುವರಿ 2022, 5:03 IST
ಎಸ್.ಆರ್. ಹೇಮಾ
ಎಸ್.ಆರ್. ಹೇಮಾ   

ಹೊನ್ನಾಳಿ: ಬಹುತೇಕ ಸರ್ಕಾರಿ ಇಲಾಖೆಗಳ ಕಚೇರಿ ಬಾಡಿಗೆ ಕಟ್ಟಡದಲ್ಲಿದೆ. ಸ್ವಂತ ಕಟ್ಟಡ ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭಿಸಬೇಕು. ರೈಲು ಹಳಿ ಹೊನ್ನಾಳಿಗಾಗಿ ಹೋಗಬೇಕು. ಕೈಗಾರಿಕೆಗಳಿಗೆ ಒತ್ತು ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಬೇಕು. ಬಜೆಟ್‌ನಲ್ಲಿ ಇವುಗಳಿಗೆ ಅನುದಾನ ಒದಗಿಸಬೇಕು ಎಂಬುದು ತಾಲ್ಲೂಕಿನ ಬೇಡಿಕೆಗಳಾಗಿವೆ.

ತಾಲ್ಲೂಕು ಕೇಂದ್ರದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿವೆ. ಹೀಗಾಗಿ ಈಗ ಕಾರ್ಯನಿರ್ವಹಿಸುತ್ತಿರುವ ಕೃಷಿ ಇಲಾಖೆಯಿಂದ ಹಳೇಯ ಸರ್ಕಾರಿ ಆಸ್ಪತ್ರೆಯವರೆಗೆ ಎಲ್ಲ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಒಂದೇ ಕಟ್ಟಡದಡಿ ಎಲ್ಲ ಇಲಾಖೆಗಳನ್ನು ತರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಯೋಜನೆ ತಯಾರಿಸಬೇಕು. ಪ್ರಸ್ತಾವ ಸಲ್ಲಿಸಿ ಈ ಬಾರಿಯ ಬಜೆಟ್‌ಗೆ ಸೇರಿಸಬೇಕು ಎಂದು ಹೊನ್ನಾಳಿಯ ಎಸ್.ಆರ್. ಹೇಮಾ ಆಂಜನೇಯ ಸಲಹೆ ನೀಡಿದ್ದಾರೆ.

ಹೊನ್ನಾಳಿಯ ಜನ ಡಯಾಲಿಸಿಸ್ ಮಾಡಿಸುವ ಅಗತ್ಯ ಇದ್ದರೆ ಶಿವಮೊಗ್ಗ, ದಾವಣಗೆರೆಗೆ ತೆರಳಬೇಕಾಗಿದೆ. ಆದ್ದರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮಾಡಬೇಕು. ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು. ಇವೆಲ್ಲ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಬೇಕು ಎಂದು ಕಲಾವಿದ ಪ್ರೇಂಕುಮಾರ್ ಬಂಡಿಗಡಿ ಒತ್ತಾಯಿಸಿದ್ದಾರೆ.

ADVERTISEMENT

ಹತ್ತಾರು ವರ್ಷಗಳ ಹಿಂದೆಯೇ ಹರಿಹರದಿಂದ ಶಿವಮೊಗ್ಗಕ್ಕೆ ರೈಲು ಮಾರ್ಗ ನಿರ್ಮಿಸುವ ಘೋಷಣೆಯಾಗಿತ್ತು.
ಈ ಸಂಬಂಧ ಸರ್ವೇ ಕಾರ್ಯ ಕೂಡ ನಡೆದಿತ್ತು. ನಂತರದ ದಿನಗಳಲ್ಲಿ ಮಾರ್ಗ ಬದಲಿಸಲಾಗಿದೆ ಎನ್ನುವ ಸುದ್ದಿ ಬಂದಿತ್ತು. ಬಹುದಿನದ ಬಹುಜನರ ಬೇಡಿಕೆಯಾದ ಹರಿಹರದಿಂದ ಶಿವಮೊಗ್ಗಕ್ಕೆ ಹೋಗುವ ರೈಲು ಮಾರ್ಗಕ್ಕೆ ಶಾಸಕರು ಸರ್ಕಾರದ ಹಂತದಲ್ಲಿ ಹೋರಾಟ ಮಾಡಬೇಕು. ರೈಲು ಮಾರ್ಗ ಸಮೀಕ್ಷೆಗೆ ಬಜೆಟ್‌ನಲ್ಲಿ ಹಣ ಒದಗಿಸಬೇಕು ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ನರಸಪ್ಪ ಬೇಲಿಮಲ್ಲೂರು.

ಹರಿಹರ–ಶಿವಮೊಗ್ಗ ರಸ್ತೆ ವಿಸ್ತರಿಸಿ ಮೇಲ್ದರ್ಜೆಗೇರಿಸಬೇಕು. ತಾಲ್ಲೂಕಿನಲ್ಲಿರುವ 50ರಿಂದ 100 ವರ್ಷಗಳಷ್ಟು ಹಳೆಯದಾದ ಶಾಲಾ ಕಟ್ಟಡಗಳ ಪುನರ್ ನಿರ್ಮಾಣ ಕಾರ್ಯ, ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ ಎನ್ನುತ್ತಾರೆ ತಾಲ್ಲೂಕು ಲಿಂಗಾಯತ ಸಮಾಜದ ಮುಖಂಡ ಮಹೇಂದ್ರ ಗೌಡ ಬೆನಕನಹಳ್ಳಿ.

ತಾಲ್ಲೂಕಿನಲ್ಲಿ ಬಹುದೊಡ್ಡ ಸಮಾಜವಾಗಿರುವ ಕುರುಬ ಸಮಾಜಕ್ಕೆ ಜಮೀನು ಮಂಜೂರು ಮಾಡಿ ಕನಕ ಭವನ ನಿರ್ಮಿಸಿಕೊಡಬೇಕು. ಅದಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಉದ್ಯೋಗ ಸೃಷ್ಟಿಸುವ ಸಂಬಂಧ ಕೈಗಾರಿಕೆಗಳ ಸ್ಥಾಪನೆಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಒತ್ತು ನೀಡಬೇಕು. ತಜ್ಞರನ್ನು ಕರೆಸಿ ಸರ್ವೆ ಮಾಡಿಸಿ ತಾಲ್ಲೂಕಿನ ಯುವಕರಿಗೆ ಅನುಕೂಲವಾಗುವ ಕೈಗಾರಿಕೆಗಳನ್ನು ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಹೋರಾಟಗಾರ ಕತ್ತಿಗೆ ನಾಗರಾಜ್, ವಿನಯ್ ಎಂ. ವಗ್ಗರ್ ಸಲಹೆ ನೀಡಿದ್ದಾರೆ.

ಹೊನ್ನಾಳಿಯಲ್ಲಿ ನಗರ ಸಾರಿಗೆ ಸಂಚಾರ ವ್ಯವಸ್ಥೆ ಇಲ್ಲ. ಇದರಿಂದ ಬಡವರು ಆಟೋದಲ್ಲಿ ಸಂಚಾರ ಮಾಡಬೇಕಾದ ಸ್ಥಿತಿ ಇದೆ. ನಾಲ್ಕೈದು ಬಸ್ಸುಗಳನ್ನು ನಗರ ಸಾರಿಗೆಗೆ ಬಿಡುವ ಸಂಬಂಧ ಆದ್ಯತೆ ನೀಡಬೇಕು. ಅದಕ್ಕಾಗಿ ಅನುದಾನ ಮೀಸಲಿಡಬೇಕು ಎನ್ನುತ್ತಾರೆ ಹೋರಾಟಗಾರ ಎಸ್. ಶ್ರೀನಿವಾಸ್.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದರೂ ಆರ್ಥಿಕ ಸಮಸ್ಯೆಯಿಂದ ಸಣ್ಣ ಸಣ್ಣ ಉದ್ಯೋಗ ಪಡೆದುಕೊಳ್ಳಲು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳ ಅಪೇಕ್ಷೆಗೆ ತಕ್ಕಂತೆ ಐಎಎಸ್, ಐಪಿಎಸ್, ಕೆಎಎಸ್, ಕೆಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸಲು ಸರ್ಕಾರ ಅನುದಾನ ಮೀಸಲಿಡಬೇಕು ಎಂಬುದು ಮಾಜಿ ಸೈನಿಕ ಎಂ. ವಾಸಪ್ಪ ಅವರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.