ADVERTISEMENT

ರೆಮ್‍ಡೆಸಿವಿರ್ ಬೇಕಾಬಿಟ್ಟಿ ಶಿಫಾರಸು ಮಾಡಿದರೆ ಲೈಸೆನ್ಸ್ ರದ್ದು: ಮಹಾಂತೇಶ ಬೀಳಗಿ

ಕೋವಿಡ್ ಜಿಲ್ಲಾ ತಜ್ಞ ವೈದ್ಯರ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 4:02 IST
Last Updated 27 ಏಪ್ರಿಲ್ 2021, 4:02 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ರೆಮ್‍ಡೆಸಿವಿರ್ ಔಷಧಿಯನ್ನು ಬೇಕಾಬಿಟ್ಟಿಯಾಗಿ ಶಿಫಾರಸು ಮಾಡಿದರೆ ಕೆಪಿಎಂಇ ಕಾಯ್ದೆ ಅನ್ವಯ ವೈದ್ಯಕೀಯ ಪರವಾನಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ ಜಿಲ್ಲಾ ತಜ್ಞ ವೈದ್ಯರ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯಲ್ಲಿ ರೆಮ್‍ಡೆಸಿವಿರ್ ಅಕ್ರಮ ಎಸಗಿದ 2 ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತುರ್ತು ಸಂದರ್ಭಕ್ಕೆ ಬಳಸುವ ಔಷಧವನ್ನು ಎಚ್ಚರಿಕೆಯಿಂದ ಬಳಸಬೇಕು. ದಾಸ್ತಾನಿಗೆ ಆಗಮಿಸಿದ ವಿವರ, ನೀಡಲಾದ ರೋಗಿ ಹಾಗೂ ಔಷಧದ ಎಸ್‍ಎಫ್‍ಆರ್-ಐಡಿಯನ್ನು ನಮೂದಿಸಬೇಕು. ಈ ಐಡಿ ಇಲ್ಲದೇ ಯಾರಿಗೂ ಔಷಧವನ್ನು ಕೊಡುವಂತಿಲ್ಲ’ ಎಂದು ಎಚ್ಚರಿಸಿದರು.

‘ಜಿಲ್ಲೆಯಲ್ಲಿ ಇದನ್ನು ನಿಯಂತ್ರಿಸಲು ಫ್ಲೈಯಿಂಗ್ ಸ್ಕ್ವಾಡ್ ರಚಿಸಿದ್ದು, ಈ ಅಧಿಕಾರಿಗಳು, ವಿವಿಧೆಡೆ ಪರಿಶೀಲಿಸಿ ವರದಿ ಸಲ್ಲಿಸಬೇಕು. ರೆಮ್‍ಡೆಸಿವಿರ್ ಅನ್ನು ಅಗತ್ಯವಿರುವ ರೋಗಿಗೆ ಮಾತ್ರ ನೀಡಬೇಕು. ಕೋವಿಡ್ ಸೋಂಕಿತ ಎಲ್ಲ ರೋಗಿಗಳಿಗೂ ನೀಡಬಾರದು’ ಎಂದರು.

ADVERTISEMENT

ಹೊರ ಜಿಲ್ಲೆಯ ರೋಗಿಗಳ ಬಗ್ಗೆ ನಿಗಾ ವಹಿಸಿ: ‘ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ದೊರೆಯದ ಕಾರಣದಿಂದ ದಾವಣಗೆರೆ ಜಿಲ್ಲೆಯ ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಬರುವ ದಿನಗಳಲ್ಲಿ ಉದ್ಭವವಾಗುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಡಿಎಚ್‍ಒ ಹಾಗೂ ಜಿಲ್ಲಾ ಸರ್ಜನ್ ಅವರು ಸಮರ್ಪಕವಾಗಿ ಪರಿಶೀಲಿಸಿ, ನಮ್ಮ ಜಿಲ್ಲೆಯವರಿಗೆ ತೊಂದರೆ ಆಗದ ರೀತಿ ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.

ಆಕ್ಸಿಜನ್ ಬಳಕೆ ಸಮರ್ಪಕವಾಗಿರಲಿ: ‘ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬಳಕೆ ಮಾಡಲಾಗುವ ಆಕ್ಸಿಜನ್ ಅನ್ನು ನ್ಯಾಯಯುತವಾಗಿ ಬಳಕೆ ಮಾಡಬೇಕು. ಅವಶ್ಯಕತೆ ಇಲ್ಲದವರಿಗೆಲ್ಲಾ ಆಕ್ಸಿಜನ್ ನೀಡಬಾರದು. ಆಕ್ಸಿಜನ್ ಪಡೆದು ಚೇತರಿಕೆ ಕಂಡುಬರುವ ರೋಗಿಗಳನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿ, ಅಗತ್ಯ ಇರುವವರಿಗೆ ನೀಡಲು ಅವಕಾಶ ಮಾಡಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ವಿದೇಶಿ ಪ್ರಯಾಣಿಕರಿಗೆ ಖಾಸಗಿಯಲ್ಲಿ ಟೆಸ್ಟ್: ವಿದೇಶಕ್ಕೆ ತೆರಳಬಯಸುವವರು ಅಥವಾ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸುವವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಬಯಸಿದಲ್ಲಿ, ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಿಗೆ ಹೋಗಬೇಕು. ಕೋವಿಡ್ ಪರೀಕ್ಷೆಯನ್ನು ಅನಗತ್ಯವಾಗಿ ಎಲ್ಲರಿಗೂ ಮಾಡಬಾರದು. ರೋಗ ಲಕ್ಷಣಗಳು ಕಂಡುಬಂದವರಿಗೆ, ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಹಾಗೂ ತಜ್ಞ ವೈದ್ಯರು ಶಿಫಾರಸು ಮಾಡುವವರಿಗೆ ಮಾತ್ರ ಮಾಡಬೇಕು’ ಎಂದು ಡಿಎಚ್‌ಒಗೆ ಸೂಚಿಸಿದರು.

ಹೆಚ್ಚುವರಿ ಆಂಬುಲೆನ್ಸ್ ಖರೀದಿಗೆ ಆದೇಶ: ಕೋವಿಡ್ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ಜಿಲ್ಲೆಗೆ 1 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಕೇರ್ ಸಿಸ್ಟಂ ಹೊಂದಿರುವ ಆಂಬುಲೆನ್ಸ್, 2- ಬೇಸಿಕ್ ಲೈಫ್ ಸಪೋರ್ಟ್ ಸಿಸ್ಟಂ ಇರುವ ಆಂಬುಲೆನ್ಸ್ ಹಾಗೂ ಪ್ರತಿ ತಾಲ್ಲೂಕಿಗೆ ಒಂದು ಲೈಫ್ ಸಪೋರ್ಟ್ ಸಿಸ್ಟಂ ಆಂಬುಲೆನ್ಸ್ ಖರೀದಿಗೆ ಆದೇಶ ನೀಡಲಾಗಿದೆ’ ಎಂದು ಮಹಾಂತೇಶ ಬೀಳಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಜಯಪ್ರಕಾಶ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಡಿಎಚ್‍ಒ ಡಾ. ನಾಗರಾಜ್, ತಜ್ಞ ವೈದ್ಯರ ಸಮಿತಿ ಸದಸ್ಯರಾದ ಡಾ. ರವಿ, ಡಾ. ಬಿ.ಎಸ್. ಪ್ರಸಾದ್, ಡಾ. ಶಿವಕುಮಾರ್, ಡಾ. ಅರುಣ್‍ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.