
₹1.50 ಲಕ್ಷದ ವರೆಗೆ 7 ದಿನ ಉಚಿತ ಚಿಕಿತ್ಸೆ | ರಾಜ್ಯದಾದ್ಯಂತ ಫೆಬ್ರುವರಿಯಲ್ಲಿ ಯೋಜನೆ ಜಾರಿ |ಗಾಯಾಳುಗಳ ಸಾವಿನ ಪ್ರಮಾಣ ತಗ್ಗಿಸುವ ಗುರಿ
ದಾವಣಗೆರೆ: ‘ರಸ್ತೆ ಅಪಘಾತದ ಗಾಯಾಳುಗಳಿಗೆ ಶೀಘ್ರವೇ ಗುಣಮಟ್ಟದ ಉಚಿತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನಗದು ರಹಿತ ಚಿಕಿತ್ಸೆ ಯೋಜನೆ ರೂಪಿಸಿದೆ. ಈ ಯೋಜನೆಯಡಿ ರಸ್ತೆ ಅಪಘಾತಕ್ಕೀಡಾದವರಿಗೆ ಸರ್ಕಾರಿ ಹಾಗೂ ಎಲ್ಲಾ ರೀತಿಯ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಪ್ತಾಹ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ಎಲ್ಲಿಯೇ ಅಪಘಾತ ನಡೆದರೂ ಕೂಡಲೇ ಸಮೀಪದ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಬೇಕು. ಗಾಯಾಳುಗಳಿಗೆ ಗರಿಷ್ಠ ಮೊತ್ತ ₹1.50 ಲಕ್ಷದ ವರೆಗೆ 7 ದಿನಗಳ ಕಾಲ ಉಚಿತವಾಗಿ ನಗದು ರಹಿತ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಬಡರೋಗಿಗಳಿಗೆ ಹೆಚ್ಚಿನ ಸಹಾಯ ದೊರೆಯಲಿದೆ. ಈ ಯೋಜನೆಯು ಸಂಪೂರ್ಣ ಡಿಜಿಟಲೀಕರಣವಾಗಿರುತ್ತದೆ’ ಎಂದು ತಿಳಿಸಿದರು.
‘ಎಲ್ಲಾ ರೀತಿಯ ರಸ್ತೆ ಅಪಘಾತಗಳಿಗೂ ಈ ಯೋಜನೆ ಅನ್ವಯವಾಗಲಿದೆ. ಅಪಘಾತವಾದ ನಂತರದ ಗೋಲ್ಡನ್ ಅವರ್‌ನಲ್ಲಿ (60 ನಿಮಿಷದೊಳಗೆ) ಗಾಯಾಳುಗಳಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ಒದಗಿಸುವುದು ಹಾಗೂ ಸಾವಿನ ಪ್ರಮಾಣವನ್ನು ತಗ್ಗಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ’ ಎಂದು ಮಾಹಿತಿ ನೀಡಿದರು.
‘ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣವನ್ನು 2030ರ ವೇಳೆಗೆ ಶೇ 50ರಷ್ಟು ತಗ್ಗಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಆರೋಗ್ಯ ವಿಮೆ ಹೊಂದಿರುವವರಿಗೆ ಈ ಯೋಜನೆಯು ಒಳಗೊಳ್ಳುವುದಿಲ್ಲ. ಅವರಿಗೆ ವಿಮೆಯ ಕಂಪನಿಯೇ ಮೊತ್ತ ಭರಿಸಲಿದೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಈಗಾಗಲೇ ಯೋಜನೆ ಜಾರಿಯಾಗಿದೆ. ರಾಜ್ಯದಾದ್ಯಂತ ಫೆಬ್ರುವರಿಯಲ್ಲಿ ಯೋಜನೆ ಜಾರಿಯಾಗಲಿದ್ದು, ಎಲ್ಲಾ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.
‘ರಸ್ತೆಗಳ ಬದಿ ತ್ಯಾಜ್ಯ ಸುರಿಯುವುದನ್ನು ನೋಡಿದರೆ ಬೇಸರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ದೇಶ, ವಿದೇಶಗಳ ಪ್ರಯಾಣಿಕರು ಈ ತ್ಯಾಜ್ಯವನ್ನು ನೋಡಿ ನಮ್ಮ ಜಿಲ್ಲೆ ಬಗ್ಗೆ ಕೆಟ್ಟ ಭಾವನೆ ಹೊಂದುತ್ತಾರೆ. ತ್ಯಾಜ್ಯ ಸುರಿಯುವವರನ್ನು ಹಿಡಿಯಬೇಕಿದೆ. ನಗರ ವ್ಯಾಪ್ತಿಯಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚಿಸಿದರು.
‘ಕೇಂದ್ರ ಸರ್ಕಾರದ ಯೋಜನೆಯಡಿ 50 ಹೊಸ ಇವಿ (ವಿದ್ಯುತ್ ಚಾಲಿತ) ಬಸ್‌ಗಳು ದಾವಣಗೆರೆಗೆ ಬರಲಿವೆ. ಅವುಗಳನ್ನು ಮುಖ್ಯವಾಗಿ ದಾವಣಗೆರೆ – ಹರಿಹರ ಮಾರ್ಗದಲ್ಲಿ ಓಡಿಸುವ ಉದ್ದೇಶ ಹೊಂದಲಾಗಿದೆ. ನಗರ ಸಾರಿಗೆ ವ್ಯವಸ್ಥೆಯೂ ಸುಧಾರಿಸಲಿದೆ’ ಎಂದರು.
ನಗರದಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ, ಪಾದಚಾರಿ ರಸ್ತೆಗಳ ಒತ್ತುವರಿ, ಸಂಚಾರ ನಿಯಮ ಉಲ್ಲಂಘನೆ, ಟ್ರಕ್ ಟರ್ಮಿನಲ್ ಸ್ಥಾಪನೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
‘ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರಿ ಪೊಲೀಸ್ ಠಾಣೆಗಳಿಗೆ ಪಾಲಿಕೆಯಿಂದ 2 ಝೀಬ್ರಾ ವಾಹನಗಳನ್ನು ನೀಡಿರುವುದರಿಂದ ಸಂಚಾರ ವ್ಯವಸ್ಥೆ ಸುಗಮವಾಗುವ ವಿಶ್ವಾಸ ಇದೆ’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಸಭೆಯಲ್ಲಿ ಹೇಳಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಬಸ್ ಮಾಲೀಕರ ಸಂಘದ ಮುಖಂಡ ಸತೀಶ್, ಆಟೊ ಚಾಲಕರ ಸಂಘದ ಅಣ್ಣಪ್ಪಸ್ವಾಮಿ, ರಾಘವೇಂದ್ರ, ಕೊಟ್ರೇಶ್, ವೀರೇಂದ್ರ ಪಾಟೀಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
‘ಇವಿ ವಾಹನಗಳಿಗೂ ನಿಯಮಗಳು ಅನ್ವಯ’
‘ಇವಿ (ವಿದ್ಯುತ್ ಚಾಲಿತ) ದ್ವಿಚಕ್ರ ವಾಹನ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ ಎಂದು ಕೆಲವರು ಹೇಳುತ್ತಾರಲ್ಲಾ’ ಎಂದು ಆರ್‌ಟಿಒ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಶ್ನಿಸಿದರು. ‘ಇವಿ ದ್ವಿಚಕ್ರ ವಾಹನ ಓಡಿಸಲು ಡಿಎಲ್ ಅಗತ್ಯ. ಹೆಲ್ಮೆಟ್ ಧರಿಸುವುದು ಕೂಡಾ ಕಡ್ಡಾಯವಾಗಿದೆ. ಇವಿ ಸೇರಿದಂತೆ ಯಾವುದೇ ವಾಹನಗಳನ್ನು ಓಡಿಸಲು 18 ವರ್ಷದೊಳಗಿನ ಮಕ್ಕಳಿಗೆ ನೀಡಬಾರದು’ ಎಂದು ಆರ್‌ಟಿಒ ಅಧಿಕಾರಿಗಳು ಸ್ಪಷ್ಟನೆ ನೀಡಿದರು.
ಆಸ್ಪತ್ರೆಗಳನ್ನು ಸಜ್ಜುಗೊಳಿಸಿ: ಸಂಸದೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದವರಿಗೆ ತಕ್ಷಣವೇ ಚಿಕಿತ್ಸೆ ನೀಡಲು ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಿ ತುರ್ತು ಘಟಕಗಳು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚಿಸಿದರು. ಹೆದ್ದಾರಿಗಳ ಸಮೀಪದ ಆಸ್ಪತ್ರೆಗಳ ವಿವರ ಸಂಗ್ರಹಿಸಬೇಕು. ಅಪಘಾತವಾದಾಗ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸಮೀಪದ ಸುಸಜ್ಜಿತವಾದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಸೌಲಭ್ಯವಿಲ್ಲದ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಸಮಯ ವ್ಯರ್ಥ ಮಾಡಬಾರದು’ ಎಂದು ಹೇಳಿದರು. ಹೆದ್ದಾರಿಯಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು ಮುಂದಿನ 15 ದಿನಗಳ ಒಳಗಾಗಿ ಬಾಕಿ ಇರುವ ದೀಪಗಳ ದುರಸ್ತಿ ಮತ್ತು ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.