ADVERTISEMENT

ವರ್ಗಾವಣೆ ನಿಯಂತ್ರಣ ಕಾಯ್ದೆಗೆ ಬದಲಾವಣೆ

ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 14:27 IST
Last Updated 7 ಮಾರ್ಚ್ 2020, 14:27 IST
ದಾವಣಗೆರೆಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು
ದಾವಣಗೆರೆಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು   

ದಾವಣಗೆರೆ:ವರ್ಗಾವಣೆ ನಿಯಂತ್ರಣ ಕಾಯ್ದೆಗೆ ಆಮೂಲಾಗ್ರ ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ. ಕಾಯ್ದೆಯಲ್ಲಿ ಈಗಿರುವ ಏಕ ಶಿಕ್ಷಕರ ವರ್ಗಾವಣೆಯನ್ನು ಶೇ 15 ಕ್ಕೆ ಹೆಚ್ಚಿಸಲಾಗುವುದು. ಈಗಿರುವ ವಿಧವೆ ಶಿಕ್ಷಕಿಯರ ಜೊತೆಗೆ ವಿದುರ ಶಿಕ್ಷಕರನ್ನೂ ಪರಿಗಣಿಸಿ ರಿಯಾಯಿತಿ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಹೇಳಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಉದ್ಘಾಟನಾ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರು ಕೌಟುಂಬಿಕ ಸಮಸ್ಯೆಗಳನ್ನು ಮರೆತು ಮಾನಸಿಕವಾಗಿ ಕೆಲಸ ನಿರ್ವಹಿಸುವ ವಾತಾವರಣ ನಿರ್ಮಿಸಲಾಗುವುದು. ಪರಸ್ಪರ ವರ್ಗಾವಣೆ ತೆಗೆದುಹಾಕಿದ್ದೇವೆ. ಇನ್ನು ಮುಂದೆಶಿಕ್ಷಕ ದಂಪತಿ ಒಮ್ಮೆ ಮಾತ್ರ ವರ್ಗಾವಣೆ ಪಡೆಯಲು ಸಾಧ್ಯವಾಗಲಿದೆ. ಈ ಸಂಬಂಧ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಹಾಗೂ ರಾಜ್ಯ ಕಚೇರಿಗೆ ನಿವೇಶನ ನೀಡಲು ಪ್ರಯತ್ನಿಸಲಾಗುವುದು. ಎನ್‌ಪಿಎಸ್‌ ಸೇರಿ ಶಿಕ್ಷಕಿಯರ ಎಲ್ಲ ಬೇಡಿಕೆ ಈಡೇರಿಕಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ತೊಡೆದುಹಾಕುವ ಸಂಬಂಧವೂ ನೀತಿ ರೂಪಿಸಲಾಗುವುದು ಎಂದು ಅವರು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ‘12ನೇ ಶತಮಾನದಲ್ಲೇ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ ಬಸವಣ್ಣನನ್ನು ಎಲ್ಲರೂ ಸ್ಮರಿಸಬೇಕು.ಶಿಕ್ಷಕಿಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಕ್ಷಕಿಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒಗ್ಗಟ್ಟಾಗಿ ಹೋರಾಡಬೇಕು’ ಎಂದು ಸಲಹೆ ನೀಡಿದರು.

ಇಂದು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿದ್ದು, ಮಹಿಳೆಯರು ಆತ್ಮರಕ್ಷಣೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಲತಾ ಎಸ್‌. ಮಳ್ಳೂರು, ‘ಶಿಕ್ಷಕಿಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ, ಅಸಮಾನತೆಯಿಂದ ಬೇಸತ್ತು ಸಂಘ ಸ್ಥಾಪಿಸಲಾಗಿದೆ. ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘ ಸೇರಿ ಎಲ್ಲ ಸಂಘಟನೆಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು. ಉನ್ನತ ಹುದ್ದೆಗೂ ಮಹಿಳೆಯರನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷೆ ರಮಾದೇವಿ, ‘ಸಂಘಟನೆಗಳಲ್ಲಿ ಮಹಿಳೆಯರನ್ನು 2ನೇ ದರ್ಜೆ ಪ್ರಜೆಯನ್ನಾಗಿ ನೋಡಲಾಗುತ್ತಿದೆ. ಹುದ್ದೆಗಳಿಗೆ ಇನ್ನೂ ಮೀಸಲಾತಿ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪನ್ಯಾಸಕಿ ಸುಮತಿ ಜಯಪ್ಪ ‘ಮಹಿಳಾ ನಾಯಕತ್ವ ಮತ್ತು ಸಬಲೀಕರಣ’ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಡಯಟ್‌ ಪ್ರಾಚಾರ್ಯ ಎಚ್‌.ಕೆ. ಲಿಂಗರಾಜ್‌, ಶಿಕ್ಷಣಾಧಿಕಾರಿಗಳಾದ ನಿರಂಜನಮೂರ್ತಿ, ಪುಷ್ಪಲತಾ, ಉಮಾದೇವಿ ಕೆ. ಸುರೇಂದ್ರನಾಯ್ಕ, ಬಿ. ಶಿವಣ್ಣ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರೇಮಾ ಎನ್‌., ಗೌರವಾಧ್ಯಕ್ಷೆ ಸೌಭಾಗ್ಯಮ್ಮ ಕೆ.ಜಿ., ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.