ADVERTISEMENT

ಚನ್ನಗಿರಿ: ಅಡಿಕೆ ಸಂಶೋಧನಾ ಕೇಂದ್ರಕ್ಕೆ ಮನವಿ

ಎಚ್.ವಿ.ನಟರಾಜ್
Published 5 ಅಕ್ಟೋಬರ್ 2021, 5:34 IST
Last Updated 5 ಅಕ್ಟೋಬರ್ 2021, 5:34 IST
ಚನ್ನಗಿರಿ ತಾಲ್ಲೂಕಿನ ಅಡಿಕೆ ತೋಟ.
ಚನ್ನಗಿರಿ ತಾಲ್ಲೂಕಿನ ಅಡಿಕೆ ತೋಟ.   

ಚನ್ನಗಿರಿ: ತಾಲ್ಲೂಕಿನಲ್ಲಿ ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡಲು ಸರ್ಕಾರ ಪಟ್ಟಣದಲ್ಲಿ ‘ಅಡಿಕೆ ಸಂಶೋಧನಾ ಕೇಂದ್ರ’ ತೆರೆಯಲು ಮುಂದಾಗಬೇಕೆಂಬ ಕೂಗು ಅಡಿಕೆ ಬೆಳೆಗಾರರಿಂದ ಕೇಳಿಬಂದಿದೆ.

ತಾಲ್ಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಪ್ರತಿ ವರ್ಷ 4ರಿಂದ 5 ಸಾವಿರ ಎಕರೆ ಪ್ರದೇಶದಲ್ಲಿ ಹೊಸದಾಗಿ ಅಡಿಕೆ ತೋಟಗಳನ್ನು ರೈತರು ಮಾಡುತ್ತಿದ್ದಾರೆ. ಅಲ್ಲದೇ ಚನ್ನಗಿರಿ ತಾಲ್ಲೂಕಿನಲ್ಲಿ ಉತ್ಕೃಷ್ಟ ದರ್ಜೆಯ ಅಡಿಕೆಯನ್ನು ಬೆಳೆಯುತ್ತಿದ್ದು, ಇಲ್ಲಿನ ಅಡಿಕೆಯನ್ನು ದೆಹಲಿ, ಕಾನ್ಪುರ, ನಾಗಪುರ, ಉತ್ತರ
ಪ್ರದೇಶ ಹಾಗೂ ಗುಜರಾತ್‌ನಲ್ಲಿರುವ ಗುಟ್ಕಾ ತಯಾರಿಕಾ ಕಂಪನಿಗಳು ಖರೀದಿಸಿಕೊಂಡು ಹೋಗುತ್ತವೆ.

ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಪಟ್ಟಣದಲ್ಲಿ 1984ರಲ್ಲಿ ತುಮ್ಕೋಸ್ (ಅಡಿಕೆ ಉತ್ಪನ್ನಗಳ ಮಾರಾಟ ಸಹಕಾರ ಸಂಘ)ವನ್ನು ಅಜ್ಜಿಹಳ್ಳಿ ಗ್ರಾಮದ ಪ್ರಗತಿಪರ ರೈತರಾಗಿದ್ದ ಆರ್. ಮರುಳಪ್ಪ ಅವರು ಸ್ಥಾಪಿಸಿದ್ದರು. ಸಂಘ ಪ್ರಾರಂಭಗೊಂಡು 37 ವರ್ಷಗಳಾಗಿವೆ. ಇಡೀ ದೇಶದಲ್ಲಿಯೇ ಉತ್ತಮ ಸಹಕಾರ ಸಂಘ ಎಂಬ ಹೆಸರು ಪಡೆದುಕೊಂಡಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ‘ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ADVERTISEMENT

ತುಮ್ಕೋಸ್ ಸಂಘದಲ್ಲಿ ಪ್ರಸ್ತುತ 13,900 ಸದಸ್ಯರಿದ್ದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಅರಹತೊಳಲು ಕೈಮರ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಸಂತೇಬೆನ್ನೂರು, ತಾವರೆಕೆರೆ, ಬಸವಾಪಟ್ಟಣ (ಸಾಗರಪೇಟೆ) ಮತ್ತು ಚನ್ನಗಿರಿ ಪಟ್ಟಣದಲ್ಲಿ ಇದರ ಶಾಖೆಗಳಿದ್ದು, ಅಡಿಕೆ ಬೆಳೆಗಾರರಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಯಲ್ಲಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅಡಿಕೆ ವಹಿವಾಟು ನಡೆಯುತ್ತದೆ. 2 ಲಕ್ಷ ಕ್ವಿಂಟಲ್ ಅಡಿಕೆಯನ್ನು ಪ್ರತಿವರ್ಷ ಗುಟ್ಕಾ ಕಂಪನಿಗಳಿಗೆ ರವಾನಿಸುತ್ತದೆ.

‘ಪ್ರತಿವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಗುಟ್ಕಾ ನಿಷೇಧದ ಗುಮ್ಮ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ. ಅಡಿಕೆ ಸಂಶೋಧನಾ ಕೇಂದ್ರ ತೆರೆಯಲು ಚನ್ನಗಿರಿ ಪಟ್ಟಣ ಪ್ರಶಸ್ತ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ಸ್ವತಃ ಅಡಿಕೆ ಬೆಳೆಗಾರರಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎನ್ನುತ್ತಾರೆ ಮಲಹಾಳ್ ಗ್ರಾಮದ ರೈತ ತಿಪ್ಪೇಶಪ್ಪ.

‘ಅಡಿಕೆ ಸಂಶೋಧನಾ ಕೇಂದ್ರ ತೆರೆಯುವ ಬಗ್ಗೆ ಸಂಸ್ಥೆಯಿಂದ ಚಿಂತನೆ ನಡೆದಿಲ್ಲ. ಸರ್ಕಾರವೇಕೇಂದ್ರವನ್ನು ತೆರೆದರೆ ಅನುಕೂಲವಾಗುತ್ತದೆ. ಸರ್ಕಾರ ಸಂಶೋಧನಾ ಕೇಂದ್ರ ತೆರೆಯಲು ಮುಂದಾದರೆ ಸಂಸ್ಥೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ತಿಳಿಸಿದರು.

***

ಸಂಶೋಧನಾ ಕೇಂದ್ರ ತೆರೆಯಬೇಕೆಂದು 2009-10ನೇ ಸಾಲಿನಲ್ಲಿ ಮನವಿ ಮಾಡಲಾಗಿತ್ತು. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸಿದ್ಧನಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ.

- ಮಾಡಾಳ್ ವಿರೂಪಾಕ್ಷಪ್ಪ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.