ADVERTISEMENT

ಚನ್ನಗಿರಿ | ಹಿಂಗಾರು ಹಂಗಾಮು: ಬಂಪರ್ ಇಳುವರಿ ನಿರೀಕ್ಷೆ

ನಳನಳಿಸುತ್ತಿದೆ ಕಡಲೆ, ರಾಗಿ, ಜೋಳ, ಅಲಸಂದೆ ಬೆಳೆ

ಎಚ್.ವಿ. ನಟರಾಜ್‌
Published 5 ಡಿಸೆಂಬರ್ 2025, 7:16 IST
Last Updated 5 ಡಿಸೆಂಬರ್ 2025, 7:16 IST
ಚನ್ನಗಿರಿ ತಾಲ್ಲೂಕು ಬೊಮ್ಮೇನಹಳ್ಳಿ ಗ್ರಾಮದ ರೈತರೊಬ್ಬರು 10 ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಕಡಲೆ ಬೆಳೆ ಬಿತ್ತನೆ ಮಾಡಿದ್ದು, ಸಮೃದ್ಧವಾಗಿ ಬೆಳೆದು ನಿಂತಿರುವುದು.
ಚನ್ನಗಿರಿ ತಾಲ್ಲೂಕು ಬೊಮ್ಮೇನಹಳ್ಳಿ ಗ್ರಾಮದ ರೈತರೊಬ್ಬರು 10 ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಕಡಲೆ ಬೆಳೆ ಬಿತ್ತನೆ ಮಾಡಿದ್ದು, ಸಮೃದ್ಧವಾಗಿ ಬೆಳೆದು ನಿಂತಿರುವುದು.   

ಚನ್ನಗಿರಿ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿದ ಕಾರಣ ಬಹುತೇಕ ಕೆರೆ–ಕಟ್ಟೆ, ಚೆಕ್ ಡ್ಯಾಮ್‌ಗಳು ತುಂಬಿವೆ. ಇದರಿಂದಾಗಿ ತೇವಾಂಶವೂ ಇದ್ದು, ಹಿಂಗಾರು ಹಂಗಾಮಿನ ಬೆಳೆಗಳು ಸಮೃದ್ಧವಾಗಿ ಬೆಳೆದಿರುವುದರಿಂದ ರೈತರು ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ ಮುಂಗಾರು ಹಂಗಾಮಿನ ಬೆಳೆಗಳ ಕೊಯ್ಲು ಅಂತಿಮ ಹಂತದಲ್ಲಿವೆ. ಮುಂಗಾರು ಹಂಗಾಮಿನಲ್ಲಿ ಬೇಗ ಬಿತ್ತನೆ ಮಾಡಿ ಕೊಯ್ಲು ಮಾಡಿದ್ದ ರೈತರು ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಮುಂದಾಗಿದ್ದರು. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಹಿಂಗಾರು ಬೆಳೆಗಳ ಬೆಳವಣಿಗೆಗೆ ಹಿತಕರ ವಾತಾವರಣ ಇರುವುದರಿಂದ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತು ಕಣ್ಮನ ಸೆಳೆಯುವಂತಿವೆ.

ತಾಲ್ಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ ಈ ಬಾರಿ ಅಲಸಂದೆ 1,000 ಹೆಕ್ಟೇರ್, ರಾಗಿ 1,000 ಹೆಕ್ಟೇರ್, ಕಡಲೆ 500 ಹೆಕ್ಟೇರ್, ಜೋಳವನ್ನು 80 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಈ ಬೆಳೆಗಳಿಗೆ ಯಾವುದೇ ರೀತಿಯ ರೋಗಬಾಧೆ ಕಂಡುಬಾರದ್ದರಿಂದ ಎಲ್ಲ ಬೆಳೆಗಳು ಸಮೃದ್ಧವಾಗಿರುವುದು ಕೃಷಿಕರ ಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

‘ಇದೇ ಮೊದಲ ಬಾರಿ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು 1,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲು ಮುಂದಾಗಿರುವುದು ವಿಶೇಷ. ಪ್ರತಿ ಎಕರೆಗೆ ಅಲಸಂದೆ 8ರಿಂದ 10 ಕ್ವಿಂಟಲ್, ಕಡಲೆ 6ರಿಂದ 8 ಹಾಗೂ ರಾಗಿ 12ರಿಂದ 14 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ಹಿಂಗಾರು ಹಂಗಾಮಿನ ಬೆಳೆಗಳಿಗೆ ಹಿತಕರ ವಾತಾವರಣ ಇರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಅರುಣಕುಮಾರ್ ತಿಳಿಸಿದರು.

‘ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆಯನ್ನು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದೆ. 5 ಎಕರೆಗೆ 100 ಕ್ವಿಂಟಲ್‌ಗಿಂತಲೂ ಹೆಚ್ಚು ಇಳುವರಿ ಬಂದಿತ್ತು. ಮೆಕ್ಕೆಜೋಳವನ್ನು ಕೊಯ್ಲು ಮಾಡಿದ ನಂತರ 10 ಎಕರೆ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದು, ಬೆಳೆಗೆ ಹಿತಕರ ವಾತಾವರಣ ಇರುವುದರಿಂದ ಕಡಲೆ ಸಮೃದ್ಧವಾಗಿ ಬೆಳೆದುನಿಂತಿದೆ. 10 ಎಕರೆ ಪ್ರದೇಶದಲ್ಲಿ ಒಟ್ಟಾರೆ ಈ ಬಾರಿ ಕನಿಷ್ಠವೆಂದರೂ 60ರಿಂದ 70 ಕ್ವಿಂಟಲ್ ಕಡಲೆ ಇಳುವರಿ ಬರುವ ನಿರೀಕ್ಷೆ ಹೊಂದಿದ್ದೇನೆ’ ಎನ್ನುತ್ತಾರೆ ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ರೈತ ಪ್ರಭಣ್ಣ.

1,000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ಅಲಸಂದೆ ರೋಗಬಾಧೆ ಇಲ್ಲ; ಬೆಳೆಗೆ ಹಿತಕರ ವಾತಾವರಣ ಕೃಷಿಕರ ಮೊಗದಲ್ಲಿ ಮೂಡಿದೆ ಮಂದಹಾಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.