ದಾವಣಗೆರೆ: ಜಿಲ್ಲೆಯ ನ್ಯಾಮತಿಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (ಎಸ್‌ಬಿಐ) ಶಾಖೆಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ದರೋಡೆಗೂ, ಪೊಲೀಸರು ಭಾನುವಾರ ಬಂಧಿಸಿದ ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳಿಗೂ ಸಾಮ್ಯತೆ ಕಾಣಿಸಿಕೊಂಡಿದೆ. ಸಾಕ್ಷ್ಯ ನಾಶಕ್ಕಾಗಿ ಎರಚುತ್ತಿದ್ದ ಖಾರದ ಪುಡಿ ಮಹತ್ತರ ಸುಳಿವೊಂದನ್ನು ನೀಡಿದೆ.
ನ್ಯಾಮತಿ ಸಮೀಪದ ಸವಳಂಗದ ಎಸ್‌ಬಿಐ ಶಾಖೆಯ ದರೋಡೆಗೆ ಹೊರಟಿದ್ದವರು ಮಾರ್ಗ ಮಧ್ಯೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಳಿ ಪತ್ತೆಯಾಗಿರುವ ಕಬ್ಬಿಣದ ಸಲಾಖೆ, ಖಾರದಪುಡಿ, ಗ್ಯಾಸ್ ಪರಿಕರ, ಮಂಕಿ ಕ್ಯಾಪ್ ಹಾಗೂ ಕೈಗವಸು ನ್ಯಾಮತಿ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದ ತನಿಖೆಯ ಹೊಸ ಸಾಧ್ಯತೆಯನ್ನು ತೆರೆದಿಟ್ಟಿವೆ.
ನ್ಯಾಮತಿಯ ನೆಹರೂ ರಸ್ತೆಯಲ್ಲಿರುವ ಎಸ್‌ಬಿಐ ಶಾಖೆಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, ಲಾಕರ್‌ನಲ್ಲಿದ್ದ ₹ 12.95 ಕೋಟಿ ಮೌಲ್ಯದ 17 ಕೆ.ಜಿ ಚಿನ್ನಾಭರಣವನ್ನು 2024ರ ಅಕ್ಟೋಬರ್ 26ರಂದು ಕಳವು ಮಾಡಿದ್ದರು. ಭದ್ರತಾ ಕೊಠಡಿಯ ಬಾಗಿಲು ಮುರಿದು ಚಿನ್ನಾಭರಣ ಇಟ್ಟಿದ್ದ ಲಾಕರ್ ಅನ್ನು ಗ್ಯಾಸ್ ಕಟರ್ ಮೂಲಕ ಕತ್ತರಿಸಲಾಗಿತ್ತು.
ಸಾಕ್ಷ್ಯ ನಾಶಕ್ಕೆ ಯತ್ನ:
ಕೃತ್ಯ ಎಸಗಿದ ಬಳಿಕ ಕಟ್ಟಡದ ತುಂಬ ಖಾರದ ಪುಡಿ ಎರಚಲಾಗಿತ್ತು. ಶ್ವಾನದಳ ಸಿಬ್ಬಂದಿಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಈ ತಂತ್ರ ಅನುಸರಿಸಲಾಗಿತ್ತು. ಕೈಗವಸು ಬಳಸಿದ್ದರಿಂದ ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆಯಲ್ಲಿಯೂ ಸೂಕ್ತ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಈ ದರೋಡೆ ಕೃತ್ಯಕ್ಕೆ ಬಳಸಿದ ಪರಿಕರಗಳೇ ಬಂಧಿತರ ಬಳಿ ಸಿಕ್ಕಿವೆ. ಇದರ ಆಧಾರದ ಮೇರೆಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಹೊನ್ನಾಳಿ–ನ್ಯಾಮತಿ ಭಾಗದಲ್ಲಿ ಈಗಾಗಲೇ ಎರಡು ಬ್ಯಾಂಕ್‌ಗಳ ದರೋಡೆ ನಡೆದಿದೆ. ಇನ್ನೂ ಎರಡು ದರೋಡೆ ಯತ್ನದ ಪ್ರಕರಣಗಳು ವಿಫಲವಾಗಿವೆ. ಈ ಭಾಗದಲ್ಲಿ ಪದೇಪದೇ ನಡೆಯುತ್ತಿರುವ ಇಂತಹ ಕೃತ್ಯಗಳು ಹೊಸ ರೀತಿಯ ಆತಂಕ ಮೂಡಿಸಿವೆ.
ನಾಲ್ಕು ಬಾರಿ ಕೃತ್ಯ:
ಹೊನ್ನಾಳಿ ತಾಲ್ಲೂಕಿನ ಅರಕರೆಯ ಬ್ಯಾಂಕ್‌ನಲ್ಲಿ 2013ರ ಆಗಸ್ಟ್‌ನಲ್ಲಿ ₹ 3 ಕೋಟಿ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಕಿಟಕಿಯ ಸರಳು ಮುರಿದು ಗ್ಯಾಸ್ ಕಟರ್ ಮೂಲಕವೇ ಭದ್ರತಾ ಕೊಠಡಿಯಲ್ಲಿದ್ದ ಚಬ್ಸ್ ಒಡೆದು ಆಭರಣ ದೋಚಿದ್ದರು. 2019ರಲ್ಲಿಯೂ ಇದೇ ಬ್ಯಾಂಕ್‌ನಲ್ಲಿ ಕಳವು ಮರುಕಳಿಸಿತ್ತು. ಉತ್ತರ ಭಾರತದ ವೃತ್ತಿಪರರು ಈ ಕೃತ್ಯ ಎಸಗಿದ್ದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಆದರೆ, ಈವರೆಗೆ ಆರೋಪಿಗಳು ಪತ್ತೆಯಾಗಿಲ್ಲ.
ನ್ಯಾಮತಿಯ ಬ್ಯಾಂಕ್ ದರೋಡೆ ಪ್ರಕರಣದ ಜಾಡು ಹಿಡಿದು ಸಾಗಿದ ಪೊಲೀಸರು ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ದುಷ್ಕರ್ಮಿಗಳಿಗೆ ಹುಡುಕಾಟ ನಡೆಸಿದ್ದರು. ಕೆಲ ಸುಳಿವುಗಳು ಸಿಕ್ಕರೂ ಆರೋಪಿಗಳ ಪತ್ತೆ ಸಾಧ್ಯವಾಗದೇ ರಾಜ್ಯಕ್ಕೆ ಮರಳಿದ್ದರು.
ಹೊಂಚು ಹಾಕಿ ಕೃತ್ಯ:
ನ್ಯಾಮತಿ ಬ್ಯಾಂಕ್ ದರೋಡೆಗೂ ಮುನ್ನ ಆರೋಪಿಗಳು ಹೊಂಚು ಹಾಕಿ ಕೃತ್ಯ ಎಸಗಿದ್ದರು. ಬ್ಯಾಂಕ್ ಸಮೀಪ ಸುಳಿದಾಡಿ ಕಟ್ಟಡವನ್ನು ಪರಿಶೀಲಿಸಿದ್ದರು. ಖಾತೆ ತೆರೆಯುವ ನೆಪ ಇಟ್ಟುಕೊಂಡು ಎರಡು ಬಾರಿ ಬ್ಯಾಂಕ್ ಒಳಗೆ ಬಂದು ಹೋಗಿದ್ದರು. ಸವಳಂಗದ ಎಸ್‌ಬಿಐ ಶಾಖೆಯ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು ಕೂಡ ಇದೇ ರೀತಿಯ ತಂತ್ರಗಳನ್ನು ಅನುಸರಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರಿನ ಹಾಫೀಜ್ ಹೊರತುಪಡಿಸಿ ಉಳಿದ ಎಲ್ಲರೂ ಉತ್ತರಪ್ರದೇಶದವರು. ಆರೋಪಿ ಹಾಫೀಜ್ ದರೋಡೆಯ ಸ್ಥಳಗಳ ಕುರಿತು ಈ ಗ್ಯಾಂಗ್‌ಗೆ ನೀಡುತ್ತಿದ್ದ ಮಾಹಿತಿ ಆಧರಿಸಿ ದುಷ್ಕರ್ಮಿಗಳು ಕೃತ್ಯ ಎಸಗುತ್ತಿದ್ದರು. ವಾರದ ಹಿಂದೆಯೇ ದಾವಣಗೆರೆ ಜಿಲ್ಲೆ ಪ್ರವೇಶಿಸಿದ್ದ ತಂಡ ಹಲವೆಡೆ ಸಂಚರಿಸಿ ಕೃತ್ಯಕ್ಕೆ ಸಂಚು ರೂಪಿಸಿದೆ. ಉದ್ಯೋಗಕ್ಕಾಗಿ ಕರ್ನಾಟಕದಲ್ಲಿ ನೆಲೆಸಿದ ಉತ್ತರಪ್ರದೇಶದವರ ಭಾಗೀದಾರಿಕೆಯ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸ್‌ಬಿಐ ಶಾಖೆಗಳಲ್ಲೇ ಕೃತ್ಯ!
ಭದ್ರಾವತಿ ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್‍ಬಿಐ ಶಾಖೆಯಲ್ಲಿ ನಡೆದ ಕಳವು ಪ್ರಕರಣ. ₹ 1.25 ಲಕ್ಷ ಮೌಲ್ಯದ ಕ್ಯಾಮೆರಾ ಡಿವಿಆರ್ ಸೇರಿ ಇತರ ಉಪಕರಣಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು.
ತಮಿಳುನಾಡಿನ ಕೃಷ್ಣಗಿರಿಯ ಬೆರಿಗಾಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎಸ್‍ಬಿಐ ಶಾಖೆಯ ದರೋಡೆ ವಿಫಲ ಯತ್ನ.
ಜಾರ್ಖಂಡ್‌ನ ಪಲಮು ಜಿಲ್ಲೆಯಲ್ಲಿ ಫೆ.25ರಂದು ಎಸ್‍ಬಿಐ ಶಾಖೆಯ ದರೋಡ ನಡೆಸಿದ್ದ ತಂಡ.
ಹಾವೇರಿ ಜಿಲ್ಲೆಯ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ್ಯೂವೆಲರಿ ಅಂಗಡಿಯಲ್ಲಿ ನಡೆದಿದ್ದ ₹ 1.55 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಳವು ಪ್ರಕರಣ.
ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು ಬೆರಳಚ್ಚು ಮೂಲಕ ಪತ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.