ADVERTISEMENT

ನಮ್ಮ ನಡುವೆಯೇ ಇದ್ದಾರೆ ನಗರ ನಕ್ಸಲರು: ಚಕ್ರವರ್ತಿ ಸೂಲಿಬೆಲೆ

ಮತ್ತೊಮ್ಮೆ ದಿಗ್ವಿಜಯ ಯಾತ್ರೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 15:45 IST
Last Updated 6 ಅಕ್ಟೋಬರ್ 2018, 15:45 IST
ಷಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಷಣದ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯ ಸೋಮೇಶ್ವರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮತ್ತೊಮ್ಮೆ ದಿಗ್ವಿಜಯ ಕಾರ್ಯಕ್ರಮದಲ್ಲಿ ಅವರು ಯುವಾ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು
ಷಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಷಣದ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯ ಸೋಮೇಶ್ವರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮತ್ತೊಮ್ಮೆ ದಿಗ್ವಿಜಯ ಕಾರ್ಯಕ್ರಮದಲ್ಲಿ ಅವರು ಯುವಾ ಬ್ರಿಗೇಡ್‌ನ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು   

ದಾವಣಗೆರೆ: ‘ನಗರ ನಕ್ಸಲರು ನಮ್ಮ ನಡುವೆಯೇ ಇದ್ದಾರೆ. ಅವರ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಯುವಾ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಷಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಷಣದ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್‌ ಇಲ್ಲಿನ ಸೋಮೇಶ್ವರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮತ್ತೊಮ್ಮೆ ದಿಗ್ವಿಜಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿಗಳ, ಪ್ರಾಂಶುಪಾಲರ, ರಾಜಕಾರಣಿಗಳ ರೂಪದಲ್ಲಿ ನಗರ ನಕ್ಸಲರು ಎಲ್ಲೆಲ್ಲೂ ಇದ್ದಾರೆ. ರಾಷ್ಟ್ರೀಯತೆ ಭಾವನೆಯ ವಿರೋಧಿಗಳಾದ ನಗರ ನಕ್ಸಲರ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದರು.

ADVERTISEMENT

ಅಂದೇ ಸರ್ಜಿಕಲ್‌ ಸ್ಟ್ರೈಕ್‌

ಅಮೆರಿಕಾದ ನೆಲಕ್ಕೆ ನುಗ್ಗಿ, ಕ್ರಿಶ್ಚಿಯನ್‌ ಧರ್ಮಕ್ಕಿಂತಲೂ ಶ್ರೇಷ್ಠವಾದದ್ದು ಹಿಂದೂ ಧರ್ಮ ಎಂದು ವಿವೇಕಾನಂದರು ಅಂದೇ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದರು ಎಂದರು.

ಷಿಕಾಗೊದಲ್ಲಿ ವಿವೇಕಾನಂದರ ಮೊದಲ ಭಾಷಣದ ಸಮಯ ಕೇವಲ ಮೂರುವರೆ ನಿಮಿಷ. ಆದರೆ, ಹಿಂದೂ ಧರ್ಮಕ್ಕೆ ಮರುಹುಟ್ಟು ನೀಡಿದ ಭಾಷಣವದು. ವಿವೇಕಾನಂದರಿಗೆ ‘ಯೋಧ ಸನ್ಯಾಸಿ’ ಎಂಬ ಗೌರವ ಕೊಟ್ಟ, ಹಿಂದೂಗಳಿಗೆ ಆತ್ಮವಿಶ್ವಾಸ ತುಂಬಿದ ಭಾಷಣ ಅದು ಎಂದು ಹೇಳಿದರು.

ವಿವೇಕಾನಂದರಿಂದ ಸಮ್ಮೇಳನಕ್ಕೆ ಮಹತ್ವ

ರಾಮಕೃಷ್ಣಾಶ್ರಮದ ಸ್ವಾಮಿ ನಿತ್ಯಸ್ಥಾನಂದಜೀ, ‘ಕ್ರಿಶ್ಚಿಯನ್‌ ಧರ್ಮವೇ ಶ್ರೇಷ್ಠ. ಅದನ್ನು ಒಪ್ಪಿಕೊಂಡು, ವಿಶ್ವಮಾನ್ಯ ಧರ್ಮ ಎಂದು ಸ್ವೀಕರಿಸುವಂತೆ ಸಂದೇಶ ನೀಡಲು ಷಿಕಾಗೊದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಲಾಯಿತು. ಆದರೆ, ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ಸಾರಿದರು. ವಿವೇಕಾನಂದರು ಭಾಷಣ ಮಾಡದೇ ಇದ್ದರೆ ಷಿಕಾಗೊ ಸಮ್ಮೇಳನಕ್ಕೆ ಐತಿಹಾಸಿಕ ಮಹತ್ವೇ ಸಿಗುತ್ತಿರಲಿಲ್ಲ. ಭಾರತದತ್ತ ಯಾರೂ ಗಮನ ಹರಿಸುತ್ತಿರಲಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಸ್ವಾಮಿ ವಿವೇಕಾನಂದ ಹಾಗೂ ಸೋದರಿ ನಿವೇದಿತಾ ಅವರ ರಥಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು.

ಪ್ರೇಕ್ಷಕರ ನಡುವೆ ನಾಯಕರು

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್‌, ವಿಧಾನ ಪರಿಷತ್‌ ಮಾಜಿ ಮುಖ್ಯಸಚೇತಕ ಡಾ. ಎ.ಎಚ್‌.ಶಿವಯೋಗಿಸ್ವಾಮಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ ತುಂತುರು ಮಳೆಯಲ್ಲೇ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.