ADVERTISEMENT

ಆಕ್ಷೇಪಾರ್ಹ ಚಿತ್ರ ತೆರವಿಗೆ ನಿರಾಕರಣೆ: ಮಟ್ಟಿಕಲ್ಲುವಿನಲ್ಲಿ ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 19:54 IST
Last Updated 28 ಆಗಸ್ಟ್ 2025, 19:54 IST
   

ದಾವಣಗೆರೆ: ಇಲ್ಲಿನ ಮಟ್ಟಿಕಲ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಅಳವಡಿಸಿದ ಆಕ್ಷೇಪಾರ್ಹ ಚಿತ್ರವೊಂದನ್ನು ತೆರವುಗೊಳಿಸುವ ವಿಚಾರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಗುರುವಾರ ರಾತ್ರಿ ವಾಗ್ವಾದ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನಗರದ ಮಟ್ಟಿಕಲ್‌ನ ವೀರ ಸಾವರ್ಕರ್ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಸಮೀಪದ ರಸ್ತೆಯಲ್ಲಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಚಿತ್ರಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಸಾವರ್ಕರ್ ಸೇರಿದಂತೆ ಅನೇಕರಿದ್ದಾರೆ. ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್‌ ನಡುವಿನ ಯುದ್ಧದ ಸನ್ನಿವೇಶ ವಿವಾದಕ್ಕೆ ಕಾರಣವಾಗಿದೆ.

ಈ ಚಿತ್ರವನ್ನು ಕಂಡ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಎರಡು ಕೋಮುಗಳ ನಡುವಿನ ಭಾವನೆಗಳನ್ನು ಕೆರಳಿಸುತ್ತಿದೆ ಎಂದು ತಕರಾರು ತೆಗೆದಿದ್ದಾರೆ. ರಾತ್ರಿ 10.30ಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಕ್ಷೇಪಾರ್ಹ‌ ಚಿತ್ರವನ್ನು ತೆರವುಗೊಳಿಸುವಂತೆ ಗಣೇಶ ಉತ್ಸವ ಸಮಿತಿಗೆ ಸೂಚಿಸಿದ್ದಾರೆ. ಈ ಸೂಚನೆಯನ್ನು ನಿರಾಕರಿಸಿದ ಸಮಿತಿ ಸದಸ್ಯರು, ಇದು ಐತಿಹಾಸಿಕ ಘಟನೆಯಾಗಿದ್ದು ತೆರವುಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ADVERTISEMENT

ಸ್ಥಳದಲ್ಲಿ ಜಮಾಯಿಸಿದ ಯುವಕರ ಗುಂಪು ಘೋಷಣೆ ಕೂಗಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದೆ. ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಸತೀಶ್ ಪೂಜಾರಿ ಸೇರಿ ಅನೇಕ ಗಣ್ಯರ ಮನವೊಲಿಸಲು ಪೊಲೀಸರು ಪ್ರಯತ್ನ ಮಾಡಿದ್ದಾರೆ. ಪ್ರತಿಭಟನಕಾರರು ಶುಕ್ರವಾರ ಮಧ್ಯಾಹ್ನದವರೆಗೆ ಕಾಲಾವಕಾಶ ಕೇಳಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.