ADVERTISEMENT

ಈ ವರ್ಷವೇ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಶಿವಾಚಾರ್ಯ ಸ್ವಾಮೀಜಿ

ಯೋಜನೆಯ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 4:41 IST
Last Updated 17 ಆಗಸ್ಟ್ 2022, 4:41 IST
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿಯ ಪವರ್‌ಪಾಯಿಂಟ್‌ ವಿವರವನ್ನು ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ,  ಅಧಿಕಾರಿಗಳು, ಜನಪ್ರತಿನಿಧಿಗಳು ವೀಕ್ಷಿಸಿದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿಯ ಪವರ್‌ಪಾಯಿಂಟ್‌ ವಿವರವನ್ನು ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಸ್ವಾಮೀಜಿ, ಸಂಸದ ಜಿ.ಎಂ. ಸಿದ್ದೇಶ್ವರ,  ಅಧಿಕಾರಿಗಳು, ಜನಪ್ರತಿನಿಧಿಗಳು ವೀಕ್ಷಿಸಿದರು.   

ದಾವಣಗೆರೆ: ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲೇಬೇಕು ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಮಂಗಳವಾರ ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ನಡೆದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಚನ್ನಗಿರಿ, ಮಾಯಕೊಂಡ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕುಗಳ 121 ಕೆರೆಗಳಿಗೆ ನೀರು ತುಂಬಿಸುವ ಮಹಾತ್ವಾಕಾಂಕ್ಷೆ ಯೋಜನೆ ಇದು. ಸಾಸ್ವೆಹಳ್ಳಿ, ಚನ್ನೇಶಪುರ, ಜಕ್ಕಲಿ ಹಾಗೂ ಮುತ್ತಗದೂರು ಪಂಪ್‍ಹೌಸ್‍ಗಳ ಕಾಮಗಾರಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. 2023ರ ಜನವರಿಯಿಂದ ನೀರು ಒದಗಿಸಬೇಕು ಎಂದರು.

ADVERTISEMENT

‘ಕಾಮಗಾರಿಗೆ ಸಂಬಂಧಿಸಿದಂತೆ ಅಡೆತಡೆಗಳಿದ್ದರೆ ನನ್ನ ಅಥವಾ ಆಯಾ ಭಾಗದ ಶಾಸಕರ ಗಮನ ತರಬೇಕು. ಮುತ್ತಗದೂರು, ಜಕ್ಕಲಿ ಹಾಗೂ ಚನ್ನೇಶಪುರ ಪಂಪ್‍ಹೌಸ್‍ಗಳು ಮತ್ತು ಬಿದರಗಡ್ಡೆ ಮೂಲಕ ಹಾದು ಬರುವ 11 ಕಿ.ಮೀ. 66 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಬರುವ 49 ಗೋಪುರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಹೇಳಿ. ಪರಿಹರಿಸಿ ಕೊಡಲಾಗುವುದು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಏತನೀರಾವರಿ ಯೋಜನೆಯ ಪೈಪ್‍ಲೈನ್ ಕೆಲವು ಕಡೆ ಮಾತ್ರ ಬಾಕಿ ಇದ್ದು ರೈತರನ್ನು ಮನವೂಲಿಸಿ ಅಳವಡಿಸಲು ಕ್ರಮ ವಹಿಸಲಾಗುತ್ತದೆ. ಉಳಿದಂತೆ ಪೈಪ್‍ಲೈನ್ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ನೀರನ್ನು ಮೇಲೆತ್ತಲು ಜಾಕ್‍ವೆಲ್ ಕಾಮಗಾರಿ, ವಿದ್ಯುತ್ ಸರಬರಾಜು ಕಾಮಗಾರಿ ಬಾಕಿ ಇವೆ. ಅವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಈ ಯೋಜನೆಯಿಂದ ಹೊನ್ನಾಳಿ ತಾಲ್ಲೂಕಿನ 4, ಶಿವಮೊಗ್ಗ ಗ್ರಾಮಾಂತರ 3, ಚನ್ನಗಿರಿ 72, ಹೊಳಲ್ಕೆರೆ 72 ಹಾಗೂ ಚಿತ್ರದುರ್ಗ ತಾಲ್ಲೂಕಿನ 1 ಕೆರೆಗೆ ನೀರು ತುಂಬಲಿದೆ. ಇದರಿಂದ 116 ಗ್ರಾಮಗಳಿಗೆ ಅನುಕೂಲವಾಗಲಿದೆ. ಪೈಪ್‍ಲೈನ್ ಕಾಮಗಾರಿಗೆ ₹ 431.24 ಕೋಟಿಗಳು ಹಾಗೂ ₹ 167 ಕೋಟಿ ಇತರೆ ಕಾಮಗಾರಿಗೆ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

ಭೂಮಿ ನೀಡಲು ವಿಳಂಬ ಮಾಡುತ್ತಿರುವ ರೈತರಿಗೆ ಕೂಡಲೇ ನಿಗದಿ ಮಾಡಿದ ಪರಿಹಾರವನ್ನು ಮತ್ತು ಈ ಬಾರಿಯ ಬೆಳೆ ಪರಿಹಾರವನ್ನು ನೀಡಿ ಭೂಮಿ ಪಡೆದು ಕಾಮಗಾರಿ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಪ್ರಗತಿ ಪರಿಶೀಲನೆ ನಡೆಸಿದರು. ಮಾಯಕೊಂಡದ ಶಾಸಕ ಪ್ರೊ. ಲಿಂಗಣ್ಣ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಗುತ್ತಿಗೆದಾರ ಕಂಪನಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.