ADVERTISEMENT

ಯೋಗದಿಂದ ಮನಸ್ಸಿಗೆ ಏಕಾಗ್ರತೆ: ಎಸ್‌ಪಿ ಉಮಾ ಪ್ರಶಾಂತ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2023, 8:33 IST
Last Updated 9 ಅಕ್ಟೋಬರ್ 2023, 8:33 IST
ದಾವಣಗೆರೆಯಲ್ಲಿ ಭಾನುವಾರ ನಡೆದ ಯೋಗ ದಿನಾಚರಣೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು. ಬ್ರಹ್ಮಕುಮಾರಿ ಲೀಲಾಜಿ ಇತರರು ಇದ್ದರು.
ದಾವಣಗೆರೆಯಲ್ಲಿ ಭಾನುವಾರ ನಡೆದ ಯೋಗ ದಿನಾಚರಣೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಉದ್ಘಾಟಿಸಿದರು. ಬ್ರಹ್ಮಕುಮಾರಿ ಲೀಲಾಜಿ ಇತರರು ಇದ್ದರು.   

ದಾವಣಗೆರೆ: ‘ಯೋಗ ಇಡೀ ವಿಶ್ವಕ್ಕೆ ಭಾರತೀಯರು ನೀಡಿದ ಕೊಡುಗೆಯಾಗಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್ ಶಿಪ್- 2023 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯೋಗಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಯೋಗದಿಂದ ಮನಸ್ಸಿಗೆ ಏಕಾಗ್ರತೆ ದೊರೆಯುತ್ತದೆ. ಮಕ್ಕಳು ಕಲಿಯಲು ಯೋಗ ಹೆಚ್ಚು ಅನುಕೂಲಕಾರಿ’ ಎಂದರು.

ADVERTISEMENT

‘ಮಹಿಳೆಯರು ಸದಾ ಬೇರೆಯವರಿಗಾಗಿ ದುಡಿಯುವಂತಹವರು. ಅಂತಹ ಸಂದರ್ಭದಲ್ಲಿ ಮಹಿಳೆಯರು ತಮಗಾಗಿ ಒಂದಷ್ಟು ಸಮಯವನ್ನ ಯೋಗಕ್ಕೆ ಮೀಸಲಿಡಲು, ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಆಯೋಜಕರು ಮಾಡಿಕೊಟ್ಟಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಮಹಿಳಾ ದಿನ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ಕ್ಷಣವೂ ಮಹಿಳೆಯರ ಸಬಲೀಕರಣ,‌ ಸಶಕ್ತರನ್ನಾಗಿ ಮಾಡುವುದು ಅತೀ ಮುಖ್ಯ’ ಎಂದು ತಿಳಿಸಿದರು.

‘ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲ. ಮನಸ್ಸಿನ ನಿಯಂತ್ರಣ ಸಾಧಿಸಲು ಯೋಗ ಬಹಳ ಸಹಕಾರಿ. ಯೋಗಾಸನ ಜೊತೆಗೆ ಸನ್ನಡತೆ ಬೆಳೆಸಿಕೊಳ್ಳಬೇಕು’ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಲೀಲಾಜೀ ಸಲಹೆ ನೀಡಿದರು.

‘ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, 15 ಸಾವಿರದಷ್ಟು ಸಾಧಕಿಯರು ಒಟ್ಟಿಗೆ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಚಟುವಟಿಕೆ ಕೈಗೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎನ್.ಎಸ್. ಎಸ್. ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮಾ ಜೋಗಿ, ಅಂತರರಾಷ್ಟ್ರೀಯ ಯೋಗ ತೀರ್ಪುಗಾರ್ತಿ ಸುಶ್ಮಿತಾ ರಾಯ್, ಕೆ. ಜೈಮುನಿ, ಪರಶುರಾಮ್, ಉಮೇಶ್, ಫ್ರಾನ್ಸಿಸ್ ಕ್ಸೇವಿಯರ್, ಎಂ.ಜಿ. ಶಶಿಕಲಾ  ಇದ್ದರು. ಶೈಲಜಾ ಸ್ವಾಗತಿಸಿದರು. ನಳಿನಿ ನಿರೂಪಿಸಿದರು.

ದಾವಣಗೆರೆಯಲ್ಲಿ ನಡೆದ ಯೋಗ ಪ್ರದರ್ಶನದ ಒಂದು ನೊಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.